Advertisement

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

12:44 AM Oct 06, 2024 | Team Udayavani |

ರಾಯಚೂರು: ಪರಭಾಷೆ ಬಳಕೆಯಲ್ಲಿ ಕನ್ನಡಿಗರು ಉದಾರಿತನ ತೋರುವುದು ಸಲ್ಲದು. ಕರ್ನಾಟಕದಲ್ಲಿ ಕನ್ನಡವೇ ಅಗ್ರ ಮತ್ತು ಆಡಳಿತ ಭಾಷೆ ಆಗಬೇಕು. ಹಾಗಾಗಬೇಕಾದರೆ ಇಲ್ಲಿ ನೆಲೆಸುವವರು ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಗೋಕಾಕ್‌ ಚಳವಳಿಯ ಹಿನ್ನೋಟ-ಮುನ್ನೋಟ’ ಕುರಿತ ವಿಭಾಗೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಬೇರೆ ಭಾಷೆ ಕಲಿಯಬಾರದು ಎಂದಲ್ಲ. ನಮ್ಮ ಭಾಷೆಗೆ ಮೊದಲ ಆದ್ಯತೆ ಸಿಗಬೇಕು. ಅಂದಾಗ ಮಾತ್ರ ಕನ್ನಡ ಅಬಾ ಧಿತವಾಗಿರಲು ಸಾಧ್ಯ. ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ. ಇಲ್ಲಿ ನೆಲೆಸಿದ ಎಲ್ಲರೂ ಕನ್ನಡಿಗರೇ. ಮನೆಯ ಭಾಷೆ ಯಾವುದಾಗಿದ್ದರೂ ವ್ಯವಹಾರಿಕ ಭಾಷೆ ಕನ್ನಡವಾಗಲಿ. ಏಳು ಕೋಟಿ ಕನ್ನಡಿಗರ ಉಸಿರಾಗಲಿ ಎಂದರು.

ಮಾತೃಭಾಷೆಯ ರಕ್ಷಣೆಗೆ ಕಾವಲು ಸಮಿತಿ ರಚಿಸಿರುವುದು ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಈಗ ಅದೇ ಕನ್ನಡ ಅಭಿವೃದ್ಧಿ ಪ್ರಾಧಿ ಕಾರವಾಗಿದೆ. ಡಾ| ರಾಜ್‌ಕುಮಾರ್‌ ಗೋಕಾಕ್‌ ಚಳವಳಿಗೆ ಇಳಿದಾಗ ಹೋರಾಟಕ್ಕೆ ವೇಗ ಸಿಕ್ಕಿತು. ಅದನ್ನು ಕನ್ನಡ ಚಳವಳಿ, ಭಾಷಾ ಚಳವಳಿ ಎಂದೇ ಕರೆಯಲಾಯಿತು. ರಾಜ್ಯದಲ್ಲಿ ಐತಿಹಾಸಿಕವಾಗಿ ನಡೆದ ಹೋರಾಟ ಇದ್ದರೆ ಅದು ಗೋಕಾಕ್‌ ಚಳವಳಿ. ಇದನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದಲೇ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ನಾನು ಕಾವಲು ಸಮಿತಿ ಅಧ್ಯಕ್ಷನಾಗಿದ್ದಾಗ ಇಂಗ್ಲಿಷ್‌ ಟೈಪ್‌ರೈಟರ್‌ಗಳನ್ನು ಕಿತ್ತುಕೊಂಡು ಕನ್ನಡ ಟೈಪ್‌ರೈಟರ್‌ಗಳನ್ನು ಕೊಡುತ್ತಿದ್ದೆ ಎಂದು ಸ್ಮರಿಸಿದ ಅವರು, ಮಾತೃಭಾಷೆ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳದೆ ಅಭಿಮಾನ ಬೆಳೆಸಿಕೊಳ್ಳಬೇಕು. ಆಂಧ್ರ- ತೆಲಂಗಾಣದ ಪಕ್ಕದ ಜಿಲ್ಲೆ ರಾಯಚೂರಲ್ಲಿ ತೆಲುಗು, ಉರ್ದು ಭಾಷೆ ಪ್ರಭಾವವಿದೆ. ಬೀದರ್‌ನಲ್ಲಿ ಮರಾಠಿ, ಕಲಬುರಗಿಯಲ್ಲಿ ಉರ್ದು ಮಾತನಾಡುವವರು ಇದ್ದಾರೆ. ಕನ್ನಡ ಮಾತನಾಡುವ ಬೇರೆ ಭಾಷಿಕ ಪ್ರಾಂತಗಳನ್ನು ಒಗ್ಗೂಡಿಸಿ ಕರ್ನಾಟಕ ಏಕೀಕರಣ ಮಾಡಲಾಯಿತು. 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಈ ಸಂಭ್ರಮಕ್ಕೆ 50 ವರ್ಷ ತುಂಬಿದ ಕಾರಣಕ್ಕೆ ಬರುವ ನ.1ರವರೆಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಂದು ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ನಡೆಸಲಾಗುವುದು ಎಂದರು.

Advertisement

ಕನ್ನಡರಾಮಯ್ಯ ಎನ್ನಬೇಕು
ಸಿಎಂ ಸಿದ್ದರಾಮಯ್ಯ ಸಹಿ ಕನ್ನಡದಲ್ಲೇ ಮಾಡುತ್ತಾರೆ. ಕಡತಗಳು ಸಹ ಕನ್ನಡದಲ್ಲಿ ಮಾಡಬೇಕು ಎಂದು ಆದೇಶಿಸಿದ್ದಾರೆ. ಹೀಗಾಗಿ ಅವರನ್ನು ಕನ್ನಡರಾಮಯ್ಯ ಎಂದು ಕರೆಯಬೇಕು ಎಂದು ಸಚಿವ ಶಿವರಾಜ್‌ ತಂಗಡಗಿ ಹೇಳಿದರು. ಕನ್ನಡದ ಬಗ್ಗೆ ಅವರಿಗಿರುವಷ್ಟು ಕಾಳಜಿ ಬದ್ಧತೆ ಯಾರಲ್ಲೂ ಕಂಡಿಲ್ಲ. ಈ ಕಾರ್ಯಕ್ರಮಕ್ಕೆ ಅವರೇ ಖುದ್ದು ಪಾಲ್ಗೊಂಡಿರುವುದೇ ಇದಕ್ಕೆ ಸಾಕ್ಷಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next