ಮಂಗಳೂರು: ಬಿಜೆಪಿ ಬಿಲ್ಲವ ಸಮುದಾಯಕ್ಕೆ ಸೂಕ್ತವಾದ ಸ್ಥಾನಮಾನವನ್ನು ನೀಡಿದೆ. ಈ ಬಾರಿಯೂ ಹಲವು ಮಂದಿಗೆ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿದೆ ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಮಾಜಗಳಿಗೂ ಸೂಕ್ತ ಸ್ಥಾನಮಾನ ನೀಡುವುದು ರಾಜಕೀಯ ಪಕ್ಷಗಳ ಜವಾಬ್ದಾರಿ. ಆ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದರು.
ಬಿಜೆಪಿಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಎರಡರಲ್ಲಿ ಬಿಲ್ಲವ ಸಮುದಾಯಕ್ಕೆ ಟಿಕೆಟ್ ನೀಡಿ ಸ್ಪರ್ಧೆಗೆ ಅವಕಾಶ ನೀಡಿರುವುದು ಶ್ಲಾಘನೀಯ. ಶ್ರಮಜೀವಿಗಳು, ಕಷ್ಟಸಹಿಷ್ಣುಗಳು ಆಗಿರುವ ಬಿಲ್ಲವ ಸಮಾಜದ ತ್ಯಾಗ, ಸೇವೆಯನ್ನು ಗುರುತಿಸಿ ಬಿಜೆಪಿ ಕರಾವಳಿಯಲ್ಲಿ ಯೋಗ್ಯ ಸ್ಥಾನಮಾನವನ್ನು ನೀಡಿರುವುದು ಸ್ವಾಗತಾರ್ಹ ಎಂದವರು ಹೇಳಿದರು.
ಕೋಟಾ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್ ಕಾರ್ಕಳ ಅವರಿಗೆ ಸಚಿವ ಸ್ಥಾನಗಳು ಮಾತ್ರವಲ್ಲ, ಮಂಗಳೂರು ನಗರಾಭಿವೃದ್ಧಿ ಇಲಾಖೆಯ ಚೇರ್‌ವೆುನ್, ಕಿಯೋನಿಕ್ಸ್ ಅಧ್ಯಕ್ಷ ಸ್ಥಾನವನ್ನು ಕೂಡ ಬಿಲ್ಲವ ಸಮುದಾಯಕ್ಕೆ ನೀಡಿ ಸೂಕ್ತ ಸ್ಥಾನಮಾನ ನೀಡಲಾಗಿದೆ.
ದ.ಕ., ಉಡುಪಿ, ಉ.ಕ., ಶಿವಮೊಗ್ಗ ಜಿಲ್ಲೆಗಳಲ್ಲಿ ನಾರಾಯಣ ಗುರು ವಸತಿ ಶಾಲೆ ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯ ಸರಕಾರ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಅದಕ್ಕೆ ಅನುದಾನ ನೀಡಲಾಗಿದೆ. ಮಂಗಳೂರಿನ ಲೇಡಿಹಿಲ್ ಪ್ರದೇಶದಲ್ಲಿರುವ ಪ್ರಮುಖ ವೃತ್ತವನ್ನು ಸುಂದರೀಕರಣಗೊಳಿಸಿ ಅಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಸ್ಥಾಪಿಸಿ ವೃತ್ತಕ್ಕೆ ಅವರ ಹೆಸರಿಡುವ ಕಾರ್ಯವಾಗಿದೆ. ಉರ್ವಾ ಮಾರುಕಟ್ಟೆ ಬಳಿ ಇರುವ ಅಶ್ವಥಕಟ್ಟೆಯನ್ನು ಜೀರ್ಣೋದ್ಧಾರಗೊಳಿಸಿ ಅಲ್ಲಿ ನೂತನ ಗುಡಿ ನಿರ್ಮಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಸ್ಥಾಪಿಸುವಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರ ಧಾರ್ಮಿಕ ಶ್ರದ್ಧೆಯೂ ಮುಖ್ಯವಾಗಿದೆ ಎಂದವರು ಹೇಳಿದರು.
ಬಿಲ್ಲವ ಮುಖಂಡರಾದ ಬಾಲಕೃಷ್ಣ ಕರ್ಕೇರಾ, ಕೃಷ್ಣ ಎಸ್.ಆರ್., ವೆಂಕಟೇಶ್ ಪೂಜಾರಿ, ಜಯಕುಮಾರ್ ಪೂಜಾರಿ ಉಪಸ್ಥಿತರಿದ್ದರು.
ಕೇರಳದ ಶಿವಗಿರಿ ಮಠದ ಮೂಲಕ ನಮ್ಮ ಸಮಾಜದ ಏಳಿಗೆಗಾಗಿ ಕೇಂದ್ರ ಸರಕಾರ ನೀಡಿರುವ 70 ಕೋಟಿ ರೂ. ಅನುದಾನ ಈವರೆಗೆ ಬಂದಿರುವ ಅನುದಾನಗಳಲ್ಲೇ ಅತ್ಯಂತ ಹೆಚ್ಚಿನದ್ದು ಎಂದು ಶಿವಗಿರಿ ಸ್ವಾಮೀಜಿ ಹೇಳಿದರು.