ಬಾಗಲಕೋಟೆ: ಕಳೆದ ಐದು ವರ್ಷಗಳಿಂದ ಬೀಳಗಿ ಕ್ಷೇತ್ರದ ರೈತರ ಭೂಮಿಗೆ ನೀರು ನೀಡುವ ಸಂಕಲ್ಪ ಹೊತ್ತು ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ರೈತ ಸದೃಢನಾದರೆ ಮಾತ್ರ ನಮ್ಮ ದೇಶ ಆತ್ಮನಿರ್ಭರವಾಗುತ್ತದೆ. ಮೋದಿಜಿ ಕನಸಿನ ರೈತರ ಆದಾಯ ದ್ವಿಗುಣಕ್ಕೆ ನೀರಾವರಿಯೇ ದಿಟ್ಟಹೆಜ್ಜೆ ಎಂದು ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ
ನಿರಾಣಿ ಹೇಳಿದರು.
ಬೀಳಗಿ ಮತಕ್ಷೇತ್ರದ ಅನವಾಲ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಅನವಾಲ ಮತ್ತು ಕಾಡರಕೊಪ್ಪ ಯೋಜನೆಗಳು ಮುಂದಿನ 18 ತಿಂಗಳಲ್ಲಿ ಪೂರ್ಣಗೊಳಿಸುವುದು ನನ್ನ ಧ್ಯೇಯವಾಗಿದೆ. ಬೀಳಗಿ ಮತಕ್ಷೇತ್ರದ ಮೂಲೆ ಮೂಲೆಗೂ ನೀರು ಮುಟ್ಟಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರಸ್ತಾವಿತ ಎಲ್ಲಾ ಯೋಜನೆಗಳನ್ನುಮುಂದಿನ 18 ತಿಂಗಳುಗಳಲ್ಲಿ ಪೂರ್ಣಗೊಳಿಸಿ ಭೂತಾಯಿಗೆ ಹಸಿರು ಸೀರೆ ಉಡಿಸುತ್ತೇನೆ ಎಂದರು.
ನಮ್ಮ ಬಾದಾಮಿ ರೈತರು ಆರ್ಥಿಕವಾಗಿ ಸದೃಢರಾಗಬೇಕು. ಸ್ವಾಭಿಮಾನಿಗಳಾದ ಅವರಿಗೆ ನೀರು, ವಿದ್ಯುತ್ ನೀಡಿದರೆ ಸುಭದ್ರ ಬದುಕನ್ನು ಖಂಡಿತವಾಗಿಯೂ ಕಟ್ಟಿಕೊಳ್ಳುತ್ತಾರೆ. ಅವರಿಗೆ ಯಾವುದೇ ಗ್ಯಾರಂಟಿಗಳು, ಭಾಗ್ಯಗಳ ಅವಶ್ಯಕತೆ ಇಲ್ಲ. 2008ರಲ್ಲಿ ನಾನು ಕಂಡ ಬಾದಾಮಿ ತಾಲೂಕಿನ ಹಳ್ಳಿಗಳಿಗೂ ಇಂದಿನ ಹಳ್ಳಿಗಳಿಗೂ ಬದಲಾವಣೆ ಕಾಣಿಸುತ್ತಿದೆ. ಇದು ನಾನು ಹೇಳುವ ಮಾತಲ್ಲ, ಜನರ ಅಂತರಾಳದ ಮಾತು ಎಂದು ಹೇಳಿದರು.
ಅಭಿವೃದ್ಧಿಯ ಅಜೆಂಡಾ ಹೊತ್ತು ಕೆಲಸ ಮಾಡುತ್ತಿದ್ದೇನೆ. ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ, ಉತ್ತಮ ಮೂಲಭೂತ ಸೌಕರ್ಯ ಕಲ್ಪಿಸುವುದು ನನ್ನ ಆದ್ಯತೆಯಾಗಿತ್ತು. ಮತಕ್ಷೇತ್ರದಲ್ಲಿ ಎಲ್ಲ ವರ್ಗದ ಜನರಿಗೂ ಸಮಾನಾಂತರ ಸೌಕರ್ಯ ನೀಡುವುದು ನನ್ನ ಧ್ಯೇಯ. ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದ್ದೇನೆ. ವಿಕಾಸದ ದಾರಿ ನಿರಂತರವಾದದ್ದು. ಈ ಬಾರಿಯ ನಿಮ್ಮೆಲ್ಲರ ಸಹಕಾರ, ಆಶೀರ್ವಾದ ನನ್ನ ಎಲ್ಲ ಜವಾಬ್ದಾರಿಗಳನ್ನು ಪೂರ್ಣಗೊಳಿಸಲು ಶಕ್ತಿ ತುಂಬಲಿದೆ. ಈ ಬಾರಿಯ ನಿಮ್ಮ ಆಶೀರ್ವಾದ ಬೀಳಗಿ ಮತಕ್ಷೇತ್ರವನ್ನು ರಾಜ್ಯದಲ್ಲಿ ನಂ. 1 ಮಾಡಲಿದೆ.
ಹಿಂದುತ್ವವೇ ತನ್ನ ಜೀವಾಳ ಮಾಡಿಕೊಂಡಿರುವ ಭಜರಂಗ ದಳ ನಿಷೇಧಿಸುವ, ವಿಶ್ವ ನಾಯಕ ಮೋದಿ ಬಗ್ಗೆ
ಕೀಳು ಮಟ್ಟದಲ್ಲಿ ಪದ ಪ್ರಯೋಗ ಮಾಡು, ಲಿಂಗಾಯತರು ಭ್ರಷ್ಟಾಚಾರಿಗಳು ಎಂದು ಆರೋಪ ಮಾಡುವ ಕಾಂಗ್ರೆಸ್‌ನವರು, ತಮ್ಮ ತುಷ್ಟೀಕರಣದ ನೀತಿಯನ್ನು ಚುನಾವಣೆಗಿಂತ ಮೊದಲೇ ತೋರಿಸಿದ್ದಾರೆ. ಇಂತವರನ್ನು ಅಧಿಕಾರದಿಂದ ದೂರ ಇಡಬೇಕು.
-ಮುರುಗೇಶ ನಿರಾಣಿ, ಬಿಜೆಪಿ ಅಭ್ಯರ್ಥಿ