Advertisement

Karnataka Election; ಬಿಜೆಪಿಯ 3ನೇ ಪಟ್ಟಿಯಲ್ಲಿ ಹೊಸಮುಖಗಳಿಗೆ ಆದ್ಯತೆ

12:56 AM Apr 18, 2023 | Team Udayavani |

ಬಿಜೆಪಿಯ ಮೂರನೇ ಪಟ್ಟಿಯೂ ಬಿಡುಗಡೆಯಾಗಿದ್ದು ಒಟ್ಟು 10 ಮಂದಿಗೆ ಟಿಕೆಟ್‌ ಘೋಷಿಸಲಾಗಿದೆ. ಇದರಲ್ಲಿ ಬಹುತೇಕ ಹೊಸಬರಿಗೆ ಮತ್ತು ಟಿಕೆಟ್‌ ವಂಚಿತರ ಸಂಬಂಧಿಕರಿಗೇ ಟಿಕೆಟ್‌ ನೀಡಿರುವುದು ವಿಶೇಷ. ಹಾಗಾದರೆ ಈ ಹತ್ತು ಮಂದಿ ಯಾರು? ಇವರ ಹಿನ್ನೆಲೆ ಏನು? ಈ ಬಗ್ಗೆ ಒಂದು ನೋಟ ಇಲ್ಲಿದೆ.

Advertisement

ಉಮೇಶ್‌ ಶೆಟ್ಟಿ
ಬಿಬಿಎಂಪಿಯ ನಾಗರಬಾವಿ ಹಾಗೂ ಗೋವಿಂದರಾಜನಗರ ವಾರ್ಡ್‌ನಲ್ಲಿ ಎರಡು ಬಾರಿ ಪಾಲಿಕೆ ಸದಸ್ಯರಾಗಿದ್ದ ಉಮೇಶ್‌ಶೆಟ್ಟಿ ವಿ.ಸೋಮಣ್ಣ ಅವರ ಶಿಷ್ಯ ವರ್ಗದಲ್ಲಿದ್ದವರು. ಆರ್ಥಿಕ ಮತ್ತು ತೆರಿಗೆ ಸ್ಥಾಯೀ ಸಮಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಯುವ ಮೋರ್ಚಾ ಪದಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದ ಉಮೇಶ್‌ ಶೆಟ್ಟಿ ಪ್ರಸ್ತುತ ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದರು. ಗೋವಿಂದರಾಜನಗರ ಕ್ಷೇತ್ರದಿಂದ ವಸತಿ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ| ಅರುಣ್‌ ಸೋಮಣ್ಣ ಟಿಕೆಟ್‌ ಅಕಾಂಕ್ಷಿಯಾಗಿದ್ದರು. ಈಗ ಉಮೇಶ್‌ ಶೆಟ್ಟಿಗೆ ಅದೃಷ್ಟ ಒಲಿದಿದೆ.

 ಮಂಜುಳಾ ಅರವಿಂದ ಲಿಂಬಾವಳಿ
ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಮೊದಲ, ಎರಡನೇ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆ ಆಗಿರಲಿಲ್ಲ. ಬಹುತೇಕ ಅವರಿಗೆ ಟಿಕೆಟ್‌ ಸಿಗುವುದು ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಕೊನೆಗಳಿಗೆಯಲ್ಲಿ ಸಾಕಷ್ಟು ಕಸರತ್ತು ನಡೆಸಿದ ಬಳಿಕ ತಮ್ಮ ಬದಲಿಗೆ ಪತ್ನಿಗೆ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜುಳಾ ಅವರು ಸಿ.ವಿ.ರಾಮನ್‌ನಗರದ ಶಾಸಕ ಎಸ್‌.ರಘು ಅವರ ಸಹೋದರಿ.

 ಕಟ್ಟಾ ಪುತ್ರ ಜಗದೀಶ್‌
ವಸಂತನಗರ ವಾರ್ಡ್‌ನಿಂದ ಒಮ್ಮೆ ಪಾಲಿಕೆಯ ಸದಸ್ಯರಾಗಿ ಕೆಲಸ ಮಾಡಿದ್ದ ಕಟ್ಟಾ ಜಗದೀಶ್‌ ನಗರ ಯೋಜನೆ ಸ್ಥಾಯೀ  ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ನಗರ ಯುವಮೋರ್ಚಾ, ಸ್ಲಂ ಮೋರ್ಚಾದಲ್ಲಿಯೂ ಕೆಲಸ ಮಾಡಿದ್ದರು. ಹೆಬ್ಟಾಳದಿಂದ ಮಾಜಿ  ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಟಿಕೆಟ್‌ಗೆ ಭಾರೀ ಪ್ರಯತ್ನ ನಡೆಸಿದ್ದರು. ಆದರೆ ತಮ್ಮ ಬದಲಿಗೆ ಪುತ್ರನಿಗೆ ಟಿಕೆಟ್‌ ದೊರೆತಿರುವುದು ಅವರಿಗೆ ಸಮಾಧಾನ ತಂದಿದೆ. ಆದರೆ ವಿಧಾನ ಪರಿಷತ್ತಿನ ಸರಕಾರಿ ಮುಖ್ಯ ಸಚೇತಕರಾಗಿರುವ ವೈ.ಎ.ನಾರಾಯಣ ಸ್ವಾಮಿ ಟಿಕೆಟ್‌ ಗಿಟ್ಟಿಸುವಲ್ಲಿ ವಿಫ‌ಲರಾಗಿರುವುದರದಿಂದ ಸಹಜವಾಗಿಯೇ ನಿರಾಶೆಗೆ ಒಳಗಾಗಿದ್ದಾರೆ.

 ಮಹೇಶ ಟೆಂಗಿನಕಾಯಿ
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಇವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿರುವ ಜಗದೀಶ್‌ ಶೆಟ್ಟರ್‌ ವಿರುದ್ಧ ಸೆಣೆಸಲಿದ್ದಾರೆ. ಮಹೇಶ ಟೆಂಗಿನಕಾಯಿ ಸಂಘ ಪರಿವಾರದ ಹಿನ್ನೆಲೆ ಹೊಂದಿದ್ದು, ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಹಿತ ವಿವಿಧ ಹುದ್ದೆ ನಿಭಾಯಿಸಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಶೆಟ್ಟರ್‌ ಅವರು ಬಿಜೆಪಿ ತೊರೆದ ಮೇಲೆ ಬಳಿಕ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರಕ್ಕೆ ಪ್ರಮುಖವಾಗಿ ಡಾ|ಮಹೇಶ ನಾಲವಾಡ, ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ ಹೆಸರುಗಳು ಕೇಳಿ ಬಂದಿದ್ದವಾದರೂ, ಬಿಜೆಪಿ ಹೈಕಮಾಂಡ್‌ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್‌ ಘೋಷಣೆ ಮಾಡಿದೆ. ಹೊಸಮುಖಕ್ಕೆ ಅವಕಾಶ ನೀಡಬೇಕು ಎಂಬ ಚಿಂತನೆಯಂತೆ ಮಹೇಶ ಟೆಂಗಿನಕಾಯಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಮಂಜುಳಾ ಕರಡಿ
ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಮಂಜುಳಾ ಅಮರೇಶ ಕರಡಿ ಅವರಿಗೆ ಒಲಿದಿದೆ. ಇವರು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಸೊಸೆಯಾಗಿದ್ದು, ಬಿಜೆಪಿ ಹೈಕಮಾಂಡ್‌ ಮಹಿಳಾ ಕೋಟಾ ಲೆಕ್ಕಾಚಾರದಲ್ಲಿ ಮಂಜುಳಾ ಕರಡಿ ಅವರಿಗೆ ಟಿಕೆಟ್‌ ಘೋಷಣೆ ಮಾಡಿ ಅಚ್ಚರಿ ಮೂಡಿಸಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮುಖಂಡ ಸಿ.ವಿ. ಚಂದ್ರಶೇಖರ ಹಾಗೂ ಸಂಸದ ಸಂಗಣ್ಣ ಕರಡಿ ಅವರ ನಡುವೆ ಟಿಕೆಟ್‌ಗೆ ಬಾರಿ ಪೈಪೋಟಿ ನಡೆದಿತ್ತು. ಈಚೆಗೆ ಕ್ಷೇತ್ರದಲ್ಲಿ ನಡೆಸಿದ ಬಿಜೆಪಿ ಆಂತರಿಕ ಸರ್ವೇ ವರದಿ, ಜಿಲ್ಲಾ ಕೋರ್‌ ಕಮಿಟಿ ಹಾಗೂ ಆಂತರಿಕ ಬಿಜೆಪಿ ಅಪೇಕ್ಷಿತರ ಮತದಾನದಲ್ಲಿ ಮಂಜುಳಾ ಕರಡಿ ಅವರ ಹೆಸರು ಇರಲೇ ಇಲ್ಲ. ರಾಜ್ಯ ಕೋರ್‌ ಕಮಿಟಿಯಲ್ಲೂ ಇವರ ಹೆಸರು ಇರಲಿಲ್ಲ. ಕೊನೆಗೆ ಬಿಜೆಪಿ ಹೈಕಮಾಂಡ್‌ ಲೆಕ್ಕಾಚಾರ ಹಾಕಿ ಪಂಚಮಸಾಲಿ ಸಮುದಾಯದ ಕೋಟಾದಡಿ ಸಂಸದರ ಸೊಸೆ ಮಂಜುಳಾ ಕರಡಿ ಅವರಿಗೆ ಟಿಕೆಟ್‌ ಘೋಷಣೆ ಮಾಡಿದೆ.

ಸಂಜೀವ ಐಹೊಳೆ
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ಮೀಸಲು ಕ್ಷೇತ್ರಕ್ಕೆ ಮೂರನೇ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಎಲ್ಲೂ ಕೇಳಿ ಬಾರದ ಸಂಘ ಪರಿವಾರದ ಸಂಜೀವ ಐಹೊಳೆ ಹೆಸರನ್ನು ಪ್ರಕಟಿಸುವ ಮೂಲಕ ಅಚ್ಚರಿ ನೀಡಿದ್ದಾರೆ. ಕಳೆದ ಎರಡು ಚುನಾವಣೆಗಳಂತೆ ಮೂರನೇ ಬಾರಿಯೂ ಹೊಸ ಮುಖ ಪರಿ ಚಯಿಸಿದ್ದಾರೆ.  ಸಂಜೀವ ಐಹೊಳೆ ಬಿಜೆಪಿ ವಿಜಯಪುರ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದು ಇಂಡಿ ತಾಲೂಕಿನ ಅಗರಖೇಡ್‌ ಗ್ರಾಮದವರು. 42 ವರ್ಷದ ಸಂಜೀವ ಬಿಎ ಪದವೀಧರ. ಜಿಪಂ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿರುವ ಅನುಭವ ಇದೆ. ಬಾಲ್ಯದಿಂದಲೇ ಸಂಘ ಪರಿವಾರದ ನಂಟು ಬೆಳೆಸಿಕೊಂಡಿರುವ ಸಂಜೀವ, ಸ್ವಯಂ ಸೇವಕರಾಗಿ ಶಾಖೆಗಳಲ್ಲಿ ತಮ್ಮ ಪಾಡಿಗೆ ತಾವು ಪಾಲ್ಗೊಳ್ಳುತ್ತ ಸಾಗಿದವರು. ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಗಳ ಮೇಲೆ ಹಿಡಿತವಿದೆ.

ಬಿ.ರಾಮಣ್ಣ
ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಬಿ.ರಾಮಣ್ಣ ಅವರ ಹೆಸರು ಘೋಷಿಸಿದೆ. ಬಿಎ ಪದವೀಧರರಾಗಿರುವ ರಾಮಣ್ಣ ವೃತ್ತಿಯಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದಾರೆ. ಈ ಹಿಂದೆ ಜಿಪಂ ಚುನಾವಣೆಯಲ್ಲಿ ಪರಾಭವಗೊಂಡಿರುವ ಇವರು, 2018ರ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅಂದಿನ ಸಚಿವ ಎಚ್‌.ಆಂಜನೇಯ ಮೂಲಕ ಶತಪ್ರಯತ್ನ ನಡೆಸಿದರಾದರೂ ಫಲ ಸಿಗಲಿಲ್ಲ. ನಂತರ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಬಿಜೆಪಿ ಸೇರಿ ಸದ್ಯ ದಿಶಾ ಸಮಿತಿ ಸದಸ್ಯರಾಗಿದ್ದಾರೆ. ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬರದಿದ್ದರೂ ಸಾಮಾಜಿಕ ಕಾರ್ಯಗಳ ಮೂಲಕ ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದಿದ್ದಾರೆ.

ಟಿ.ಎಸ್‌. ಶ್ರೀವತ್ಸ
ಬಿಜೆಪಿ ಕೃಷ್ಣರಾಜ ಕ್ಷೇತ್ರದಲ್ಲಿ ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್‌.ಶ್ರೀವತ್ಸ ಅವರನ್ನು ಕಣಕ್ಕೆ ಇಳಿಸಿದೆ.  ಶ್ರೀವತ್ಸ ಅವರು ಬಿಜೆಪಿ ನಾಯಕ ಬಿ.ಎಲ್‌.ಸಂತೋಷ್‌ ಅವರ ನಿಕಟವರ್ತಿ. ಬಿಜೆಪಿಯಲ್ಲಿ ಶ್ರೀವತ್ಸ ತಳಮಟ್ಟದಿಂದ ಸಾಮಾನ್ಯ ಕಾರ್ಯಕರ್ತರಾಗಿ ಬೆಳೆದು ಬಂದವರು. 56 ವರ್ಷದ ಶ್ರೀವತ್ಸ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಬ್ರಾಹ್ಮಣ ಸಮಾಜದ ಶ್ರೀವತ್ಸ ಅವರು ಬಿಜೆಪಿಯಲ್ಲಿ ವಾರ್ಡ್‌ ಪ್ರಧಾನ ಕಾರ್ಯದರ್ಶಿ, ವಾರ್ಡ್‌ ಅಧ್ಯಕ್ಷ, ಕೃಷ್ಣರಾಜ ಕ್ಷೇತ್ರ ಪ್ರಧಾನ ಕಾರ್ಯದರ್ಶಿ, ವಿಭಾಗ ಸಂಘಟನ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ನಂತರ  ಮೈಸೂರು ನಗರ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಶ್ರೀವತ್ಸ ಬಿಕಾಂ ಪದವೀಧರರು. ಸ್ವಂತ ಉದ್ಯಮ ನಡೆಸುತ್ತಿದ್ದಾರೆ.

ರಾಜಕುಮಾರ ಪಾಟೀಲ್‌
ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರಕ್ಕೆ ಹಾಲಿ ಶಾಸಕ ರಾಜಕುಮಾರ ಪಾಟೀಲ್‌ ತೇಲ್ಕೂರ ಹೆಸರನ್ನೇ ಅಂತಿಮಗೊಳಿಸಲಾಗಿದೆ. ರಾಜಕುಮಾರ ಪಾಟೀಲ್‌ ಬದಲು ಪತ್ನಿ ಸಂತೋಷಿರಾಣಿಗೆ ಅವರಿಗೆ ಕೊಡಲಾಗುತ್ತದೆ ಎಂಬ ಚರ್ಚೆಗಳಿದ್ದವು. ಅಲ್ಲದೆ ಕ್ಷೇತ್ರದಲ್ಲಿ ರಾಜಕುಮಾರ ಪಾಟೀಲ್‌ಗಿಂತ ಅವರ ಪತ್ನಿ ಸಂತೋಷಿರಾಣಿ ಅವರೇ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಿದ್ದಲ್ಲದೇ ಮಹಿಳಾ ಸ್ವ ಸಹಾಯ ಸಂಘ ರಚಿಸಿ ಸಂಘಗಳಿಗೆ ಸಾಲ ಕೊಡಿಸುವ ಮೂಲಕ ಮಹಿಳೆಯರ ಮನ ಗೆದ್ದಿದ್ದರಿಂದ ಇವರಿಗೆ ಟಿಕೆಟ್‌ ಕೊಟ್ಟರೆ ಪಕ್ಷಕ್ಕೆ ಹೆಚ್ಚಿನ ಅನುಕೂಲ ಎಂಬುದಾಗಿ ಮಾಹಿತಿ ಹಿನ್ನೆಲೆಯಲ್ಲಿ ಸಂತೋಷಿರಾಣಿ ಅವರಿಗೆ ಟಿಕೆಟ್‌ ಎನ್ನಲಾಗಿತ್ತು. ಕೊನೆಗೆ ಅಳೆದು ತೂಗಿ ರಾಜಕುಮಾರ ಪಾಟೀಲ್‌ ತೇಲ್ಕೂರ ಅವರಿಗೆ ಟಿಕೆಟ್‌ ನೀಡಲಾಗಿದೆ.

ಕಳಕಪ್ಪ ಬಂಡಿ
ಗದಗ ಜಿಲ್ಲೆಯ ಅತೀ ದೊಡ್ಡ ವಿಧಾನಸಭೆ ಕ್ಷೇತ್ರ ರೋ ಣದಲ್ಲಿ ಸತತ 5ನೇ ಬಾರಿಗೆ ಕಳಕಪ್ಪ ಬಂಡಿಗೆ ಬಿಜೆಪಿ ಟಿಕೆಟ್‌ ನೀಡಲಾಗಿದೆ. ಹಾಲಿ ಬಿಜೆಪಿ ಶಾಸಕ ಹಾಗೂ ಪ್ರಬಲ ಆಕಾಂಕ್ಷಿ ಕಳಕಪ್ಪ ಬಂಡಿ ಅವರಿಗೆ ಸ್ವಪಕ್ಷದಲ್ಲಿಯೇ ಪೈ ಪೋಟಿ ನಡುವೆ ಬಿಜೆಪಿ ಟಿಕೆಟ್‌ ನೀಡಿದ್ದು, ಕಮಲ ಪಾಳಯದಲ್ಲಿ ಕುತೂಹಲ ಮೂಡಿಸಿದೆ. ಕಳೆ ದೆರಡು ದಿನಗಳಿಂದ ಕಳಕಪ್ಪ ಬಂಡಿ ಅವರ ಪತ್ನಿ ಸಂಯುಕ್ತಾ ಬಂಡಿ ಅವರಿಗೆ ಟಿಕೆಟ್‌ ಫೈನಲ್‌ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ರೋಣ ಮತಕ್ಷೇತ್ರದಲ್ಲಿ ಯಾವುದೇ ಬದಲಾವಣೆಗೆ ಮುಂದಾಗದೇ ಹಾಲಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಮಣೆ ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next