Advertisement
ಅಥಣಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರ ಆಕ್ರೋಶ ಗುರುವಾರವೂ ಮುಂದುವರಿದಿದೆ. ಅವರ ಮನವೊಲಿಸಲು ಬಂದ ಬಿಜೆಪಿ ಜಿಲ್ಲಾಧ್ಯಕ್ಷರ ಕಾರಿಗೆ ಸವದಿ ಬೆಂಬಲಿಗರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಸವದಿ ಬಿಜೆಪಿ ತೊರೆಯಲು ನಿರ್ಧರಿಸಿದ್ದು, ಶುಕ್ರವಾರ ನಿರ್ಧಾರ ಪ್ರಕಟಿಸಲಿದ್ದಾರೆ. ಇನ್ನೊಂದೆಡೆ ಹಾವೇರಿ ಶಾಸಕ ನೆಹರು ಓಲೇಕಾರ್ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧವೇ ಗುಡುಗಿ ಪಕ್ಷ ತ್ಯಾಗಕ್ಕೆ ನಿರ್ಧರಿಸಿದ್ದಾರೆ. ಬೊಮ್ಮಾಯಿ ವಿರುದ್ಧ ಅವರು 1,500 ಕೋಟಿ ರೂ. ಹಗರಣದ ಆರೋಪ ಮಾಡಿದ್ದಾರೆ. ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, “ನನಗೆ ಟಿಕೆಟ್ ತಪ್ಪುವುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಾರಣ’ ಎಂದು ನೇರವಾಗಿ ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ದೀಪಕ್ ದೊಡ್ಡಯ್ಯ ಪರ ಕೆಲಸ ಮಾಡುವುದಿಲ್ಲ ಎಂದವರು ಹೇಳಿದ್ದಾರೆ.
ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರೂ ಸ್ಪೀಕರ್ ಕಾಗೇರಿಯವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಜನಾರ್ದನ ರೆಡ್ಡಿ ಪಕ್ಷ ಸೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಜೆಡಿಎಸ್‌ನಿಂದಲೂ ಆಹ್ವಾನವಿದೆ ಎಂದು ಗೂಳಿಹಟ್ಟಿ ಹೇಳಿದ್ದಾರೆ. ಚನ್ನಗಿರಿಯಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಟಿಕೆಟ್ ನೀಡದಿರುವುದಕ್ಕೆ ಅಲ್ಲೂ ಪ್ರತಿಭಟನೆ ನಡೆದಿದೆ. ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನಗೆ ಟಿಕೆಟ್ ನೀಡಬೇಕಿತ್ತೆಂದು ಅವರ ಬೆಂಬಲಿಗರು ಬಿಜೆಪಿ ಧ್ವಜ ಸುಟ್ಟು ಹಾಕಿದ್ದಾರೆ. ಮಾಡಾಳು ಮಲ್ಲಿಕಾರ್ಜುನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ತುಮಕೂರು ವ್ಯಾಪ್ತಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿಗೆ ವಿದಾಯ ಹೇಳಿದ್ದಾರೆ. ಕೃಷ್ಣರಾಜ ಕ್ಷೇತ್ರದಲ್ಲಿ ರಾಮದಾಸ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಮಹಾದೇವಪುರ ಕ್ಷೇತ್ರದ ಹಾಲಿ ಶಾಸಕ ಅರವಿಂದ ಲಿಂಬಾವಳಿ ಹೊಸದಿಲ್ಲಿ ಯಲ್ಲೇ ಬೀಡು ಬಿಟ್ಟಿದ್ದಾರೆ. ಅರಸೀಕೆರೆಯಲ್ಲಿ ಬಿಎಸ್‌ವೈ ಆಪ್ತ ಎನ್.ಆರ್. ಸಂತೋಷ್ ಬಿಜೆಪಿ ಟಿಕೆಟ್ ತಪ್ಪಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಅವರ ಬೆಂಬಲಿಗರು ಬಿಜೆಪಿ ಬಾವುಟಕ್ಕೆ ಬೆಂಕಿ ಹಾಕಿದ್ದಾರೆ. ಒಟ್ಟಾರೆಯಾಗಿ 25ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಾಗಿದೆ.
Related Articles
ಹೊಸದಿಲ್ಲಿ ಪ್ರವಾಸದ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ. ನನಗೆ ಟಿಕೆಟ್ ಸಿಗುತ್ತದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
Advertisement
ಬಿಜೆಪಿ ಕಚೇರಿಗೆ ಮುತ್ತಿಗೆ ಚಾಮರಾಜಪೇಟೆ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸೈಲೆಂಟ್ ಸುನೀಲ್ ಬೆಂಬಲಿಗರು ಗುರುವಾರವೂ ಕೂಡ ಬಿಜೆಪಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಜಗನ್ನಾಥ ಭವನಕ್ಕೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಮಾತನಾಡುತ್ತೇವೆ: ಕಟೀಲು
ಬಂಡಾಯಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರ ಜತೆಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್, ಎಂ.ಪಿ. ಕುಮಾರಸ್ವಾಮಿ, ನೆಹರು ಓಲೇಕಾರ್ ಜತೆ ಮಾತನಾಡುತ್ತೇನೆ. ಜಗದೀಶ್ ಶೆಟ್ಟರ್ ಜತೆ ವರಿಷ್ಠರು ಚರ್ಚೆ ನಡೆಸಿದ್ದಾರೆ. ಅವರಿಗೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು. ಈ ನಡುವೆ ಈಶ್ವರಪ್ಪ ಪುತ್ರ ಕಾಂತೇಶ್, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಅವರನ್ನು ಭೇಟಿ ಮಾಡಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ನನಗೊಂದು ಅವಕಾಶ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಇದ್ದೇನೆ. ಪಕ್ಷ ನಮ್ಮ ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಜಯೇಂದ್ರ ಅಪ್ತನ ವಿರುದ್ಧ ದೂರು
ವಿಜಯೇಂದ್ರ ಹಾಗೂ ಸೋಮಣ್ಣ ನಡುವಿನ ಫೈಟ್ ಮುಂದುವರಿದಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿರುವ ಸೋಮಣ್ಣ ಪುತ್ರ ಅರುಣ್ ಸೋಮಣ್ಣ, ವಿಜಯೇಂದ್ರ ಆಪ್ತ ರುದ್ರೇಶ್ ವಿರುದ್ಧ ದೂರು ನೀಡಿದ್ದಾರೆ. ತಂದೆಯನ್ನು ಸೋಲಿಸಲು ಚಾಮರಾಜನಗರದಲ್ಲಿ ಕೆಲಸ ಮಾಡುತ್ತಾರೆ ಎಂದು ದೂರಿದ್ದಾರೆ. ಬಿಎಸ್‌ವೈ ಬುಲಾವ್
ಈ ಮಧ್ಯೆ ಟಿಕೆಟ್ ವಂಚಿತ ಶಾಸಕರು ಹಾಗೂ ಅಸಮಾಧಾನಿತರಿಗೆ ಯಡಿಯೂರಪ್ಪ ಬುಲಾವ್ ನೀಡಿದ್ದು, ಬಂಡಾಯ ಶಮನ ಕಾರ್ಯ ಆರಂಭಿಸಿದ್ದಾರೆ. ವರಿಷ್ಠರ ಸೂಚನೆ ಮೇರೆಗೆ ಬಿಎಸ್‌ವೈರಿಂದಲೇ ಮನವೊಲಿಕೆ ಪ್ರಯತ್ನ ಆರಂಭಿಸಿದ್ದಾರೆ.