Advertisement

ಕಾಂಗ್ರೆಸ್‌ಗೆ ಈಗ ಸಂಪುಟ ಸಂಕಟ; ಎಸ್‌.ಆರ್‌.ಪಾಟೀಲ್‌ ರಾಜೀನಾಮೆ

06:00 AM Jun 04, 2018 | |

ಬೆಂಗಳೂರು:  ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಮುಂಚೆಯೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ನ್ಪೋಟಗೊಂಡಂತಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ್‌ ರಾಜೀನಾಮೆ ನೀಡಿದ್ದಾರೆ.

Advertisement

ಉತ್ತರ ಕರ್ನಾಟಕ ಭಾಗದಲ್ಲಿ ನಾನು ಪಕ್ಷದ ಹೊಣೆಗಾರಿಕೆ ವಹಿಸಿಕೊಂಡಿದ್ದೆ. ಆದರೆ ನಿರೀಕ್ಷಿತ ಸ್ಥಾನ ತಂದುಕೊಡಲು ಸಾಧ್ಯವಾಗದಿರುವುದಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ. ಮೇ.25 ರಂದೇ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಎಸ್‌.ಆರ್‌.ಪಾಟೀಲ್‌ ಹೇಳಿದ್ದಾರೆ.

ಆದರೆ, ಆಂತರಿಕವಾಗಿ ಬೇರೆಯೇ ಕಾರಣಗಳಿವೆ. ಸಚಿವ ಸ್ಥಾನ ಕೊಡಲು ಸ್ಪಷ್ಟ ಭರವಸೆ ಸಿಗದ ಹಿನ್ನೆಲೆಯಲ್ಲಿ ಬೇಸರಗೊಂಡು ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದ ಮಾತುಕತೆಯಲ್ಲೂ ಕಾರ್ಯಾಧ್ಯಕ್ಷರಾದ ತಮ್ಮನ್ನು ಸೇರಿಸಿಕೊಂಡಿಲ್ಲ. ಯಾವ ಪ್ರಮುಖ ಸಭೆಗಳಿಗೂ ಕರೆಯುತ್ತಿರಲಿಲ್ಲ. ಹಾಗಾದರೆ ನಾವೇಕೆ ಇರಬೇಕು ಎಂದು ತಮ್ಮ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ವಿಧಾಪರಿಷತ್‌ನಿಂದ ಸಚಿವ ಸಂಪುಟಕ್ಕೆ ಒಬ್ಬರಿಗೆ ಮಾತ್ರ ಅವಕಾಶವಿದ್ದು ಆ ಕೋಟಾದಡಿ ಎಚ್‌.ಡಿ.ರೇವಣ್ಣ ಸೇರ್ಪಡೆಯಾಗುವ ಸಾಧ್ಯತೆಯಿದೆ. ಹಾಗಾದರೆ ಪರಿಷತ್‌ನಲ್ಲಿ ಅವರೇ ಸಭಾನಾಯಕ ಆಗುತ್ತಾರೆ. ಆಗ ನಾವೇನು ಮಾಡಬೇಕು.

ಹಿಂದೆಯೂ ಸಚಿವರಾಗಿ ಪರಿಷತ್‌ನಲ್ಲಿ ಸಭಾನಾಯಕನಾಗಿದ್ದೆ. ಆದರೆ, ಪಕ್ಷದ ಕೆಲಸ ಎಂದು ಪುನರ್‌ರಚನೆ ವೇಳೆ ಸಚಿವ ಸ್ಥಾನದಿಂದ ತೆಗೆದು ಕಾರ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದರು. ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಆದರೆ, ಕಾಂಗ್ರೆಸ್‌ಗೆ ಬಹುಮತ ಬರದ ಕಾರಣ ಜೆಡಿಎಸ್‌ ಜತೆ ಸೇರಿ ಸರ್ಕಾರ ರಚನೆ ಮಾಡಲಾಗುತ್ತಿದೆ. ಪಕ್ಷದ ಕಾರ್ಯಾಧ್ಯಕ್ಷನಾದ ತಮ್ಮನ್ನು ಯಾವುದಕ್ಕೂ ಪರಿಗಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಆದರೆ, ಮೇ. 25 ರಂದೇ  ಈ ಮೇಲ್‌ ಮೂಲಕ ಎಸ್‌.ಆರ್‌.ಪಾಟೀಲ್‌ ರಾಜೀನಾಮೆ ಸಲ್ಲಿಸಿದ್ದರೂ  ಇದುವರೆಗೂ ಯಾಕೆ ಬಹಿರಂಗಗೊಂಡಿಲ್ಲ. ಅದು ಯಾಕೆ ಅಂಗೀಕಾರವೂ ಆಗಿಲ್ಲ ಎಂಬ ಪ್ರಶ್ನೆಯೂ ಇದೆ. ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಲು ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಇಂದು ದೆಹಲಿಯಲ್ಲಿ ಸಂಪುಟ ಚರ್ಚೆ
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬುಧವಾರ ಮಹೂರ್ತ ನಿಗದಿಯಾಗಿರುವುದರಿಂದ ಕಾಂಗ್ರೆಸ್‌ ಪಟ್ಟಿ ಅಂತಿಮಗೊಳಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಸೋಮವಾರ ದೆಹಲಿಗೆ ತೆರಳಲಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ,  ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಸೋಮವಾರ ಮಧ್ಯಾಹ್ನ ರಾಹುಲ್‌, ವಿದೇಶ ಪ್ರವಾಸದಿಂದ ವಾಪಸ್‌ ಬರಲಿದ್ದು ಅವರ ಜತೆ ಚರ್ಚಿಸಲಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ನಿರೀಕ್ಷಿತ ಮಟ್ಟದಲ್ಲಿ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫ‌ಲವಾಗಿದೆ. ನಾನು ಆ ಭಾಗದ ಉಸ್ತುವಾರಿಯಾಗಿ ಆ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರಲು ಆಗದಿದ್ದ ಮೇಲೆ ಯಾರದಾರೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಹೀಗಾಗಿ, ನಾನು ಸೋಲಿನ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದ್ದೇನೆ.
– ಎಸ್‌.ಆರ್‌.ಪಾಟೀಲ್‌, ಮಾಜಿ ಸಚಿವ

ಐದು ವರ್ಷ ಕುಮಾರಸ್ವಾಮಿಯರೇ ಮುಖ್ಯಮಂತ್ರಿ ವಿಚಾರದಲ್ಲಿ ನಾನು ಏನೂ ಮಾತನಾಡಿಲ್ಲ. ವೇಣುಗೋಪಾಲ್‌ ಬಳಿಯೂ ಚರ್ಚಿಸಿಲ್ಲ. ಪಕ್ಷದ ಸಭೆಗೂ ಹೋಗಿಲ್ಲ. ಆದರೂ ನನ್ನ ಹೆಸರು ಸುಮ್ಮನೆ ಎಳೆದು ತರಲಾಗಿದೆ.
– ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌  ಹಿರಿಯ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next