Advertisement
ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ನ ಜನಧ್ವನಿ ಕಾರ್ಯಕಮದಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ರಾಹುಲ್ ಗಾಂಧಿ, ರಫೇಲ್ ಯುದ್ಧ ವಿಮಾನ ತಯಾರಿಕೆ ಸಂಬಂಧ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಭಾರಿ ಭ್ರಷ್ಟಾಚಾರ ಎಸಗಿ ಈಗ ಮೌನಕ್ಕೆ ಶರಣಾಗಿದೆ. ಸದನದಲ್ಲಿ ಪ್ರಶ್ನಿಸಿದರೆ ಸರಿಯಾಗಿ ಉತ್ತರ ನೀಡಿಲ್ಲ. ತಪ್ಪು ಎಸಗಿದ್ದರಿಂದಲೇ ನನ್ನ ಜತೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲಿಲ್ಲ ಎಂದು ಆರೋಪಿಸಿದರು.
Related Articles
Advertisement
ಸುಳ್ಳು ಹೇಳುವವರ ಸರ್ಕಾರವನ್ನು ಕಳೆದ ನಾಲ್ಕೂವರೆ ವರ್ಷಗಳಿಂದ ದೇಶದ ಜನರು ಸಹಿಸಿಕೊಂಡು ಬಂದಿದ್ದಾರೆ. 2019ರಲ್ಲಿ ಹೊಸ ಸರ್ಕಾರದ ಅಗತ್ಯವಿದೆ. ನುಡಿದಂತೆ ನಡೆಯುವ ಸರ್ಕಾರ ಬೇಕಿದೆ. ಗಬ್ಬರ್ ಸಿಂಗ್ ಟ್ಯಾಕ್ಸ್ ಮೂಲಕ ಸಣ್ಣ ವ್ಯಾಪಾರಿಗಳನ್ನು ಸದೆಬಡಿಯುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಇಂಥ ತೆರಿಗೆಯಿಂದ ದೊಡ್ಡ ದೊಡ್ಡ ಉದ್ಯಮಿಗಳಿಗಷ್ಟೇ ಲಾಭವಾಗುತ್ತಿದೆ. ಸಣ್ಣ ವ್ಯಾಪಾರಿಗಳು ಉದ್ಯೋಗ ಕಳೆದುಕೊಂಡು ದಿಗ್ಭ್ರಾಂತರಾಗಿದ್ದಾರೆ. ದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಂಗ್ರೆಸ್ ಸರ್ಕಾರ ಅ ಧಿಕಾರಕ್ಕೆ ಬಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಸಂಪೂರ್ಣ ರದ್ದು ಮಾಡಿ ಸಾಧಾರಣ ತೆರಿಗೆ ನೀತಿ ಜಾರಿಗೆ ತರಲಾಗುವುದು. ಆ ಮೂಲಕ ಸಣ್ಣ ವ್ಯಾಪಾರಿಗಳನ್ನು ಮತ್ತೆ ಹಳಿಗೆ ತರುತ್ತೇವೆ ಎಂದರು.
ಕೇಳಲು ಮಾತ್ರ ಇಂಪು:ಬೇಟಿ ಪಡಾವೋ, ಬೇಟಿ ಬಚಾವೋ ಎಂಬ ನಾರಾ ಕೇಳಲು ಮಾತ್ರ ಇಂಪಾಗಿದೆ. ಆದರೆ, ವಾಸ್ತವದಲ್ಲಿ ಏನಾಗುತ್ತಿದೆ? ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಿಹಾರದಲ್ಲಿ ಬಿಜೆಪಿಗೆ ಸೇರಿದ ನಾಯಕನೊಬ್ಬ ಹಲವಾರು ಬಾಲಕಿಯರ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಇವರಿಗೆಲ್ಲ ಕಾನೂನಿನ ಭಯವಿಲ್ಲವೇ? ಇಂಥ ಘಟನೆಗಳು ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದರೂ ಮೋದಿ ಮಾತ್ರ ಬಾಯಿ ಬಿಚ್ಚಿ ಇಂತಹ ಘಟನೆಗಳಿಗೆಲ್ಲ ಪ್ರತಿಕ್ರಿಯೆ ನೀಡುವುದಿಲ್ಲ. ಚಿಕ್ಕ ಮಕ್ಕಳ ಮೇಲೆ ಕೂಡ ಅತ್ಯಾಚಾರ ನಡೆಯುತ್ತಿರುವುದು ನೋವು ತಂದಿದೆ ಎಂದರು. 15 ಶ್ರೀಮಂತರಿಗೆ ಮಾತ್ರ ಪ್ರಧಾನಿ!
ಪ್ರಧಾನಿ ಮೋದಿ ದೇಶದ 15 ಶ್ರೀಮಂತರಿಗೆ ಮಾತ್ರ ಪ್ರಧಾನಿಗಳಾಗಿದ್ದಾರೆ. ಹಾಗಾಗಿ ಮೋದಿ ಸರ್ಕಾರದ ನೀತಿಗಳು ಉದ್ಯಮಿಗಳ ಪರವಾಗಿರುತ್ತವೆ. ಯಾವತ್ತೂ ಬಡವರ, ಹಿಂದುಳಿದವರ, ದಲಿತರ ಪರವಾದ ಯಾವ ಸುಧಾರಣೆ ಕ್ರಮಗಳನ್ನು ಸಹ ಮೋದಿ ಸರ್ಕಾರ ಮಾಡಿಲ್ಲ. ದೇಶದ ಶ್ರೀಮಂತ ಉದ್ಯಮಿಗಳ 2.50 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿರುವ ಮೋದಿ ಸರ್ಕಾರಕ್ಕೆ ದೇಶದ ಅನ್ನದಾತನ ಸಾಲ ಮನ್ನಾ ಮಾಡಲು ಆಗುತ್ತಿಲ್ಲ. ಇದನ್ನು ದೇಶದ ಜನರು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ಯುವ ಜನರು ಸರ್ಕಾರದ ಕಾರ್ಯವೈಖರಿ ಗಮನಿಸಬೇಕು ಎಂದು ರಾಹುಲ್ ಹೇಳಿದರು. ಸ್ಥಾವರ ಲಿಂಗ ಕಾಣಿಕೆ
ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತಲೆಗೆ ರುಮಾಲು ಸುತ್ತಿ ಸನ್ಮಾನಿಸಲಾಯಿತು. ನೆನಪಿನ ಕಾಣಿಕೆಯಾಗಿ ಸ್ಥಾವರ ಲಿಂಗ ನೀಡಿ ಗೌರವಿಸಲಾಯಿತು. ಕೇಂದ್ರ ರೈತರ ಸಾಲ ಮನ್ನಾ ಮಾಡಲಿ
ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಏಕೆ ಮಾಡುತ್ತಿಲ್ಲ? ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಕೂಡ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ, ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಕಾಳಜಿ ಇದ್ದರೆ ಕೂಡಲೇ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಿ ತೋರಿಸಲಿ. ಕೃಷಿ ಉತ್ಪನಗಳಿಗೆ ಬೆಂಬಲ ಬೆಲೆ(ಎಂಎಸ್‌ಪಿ) ಹೆಸರಿನಲ್ಲಿ ಕೇಂದ್ರ ಸರ್ಕಾರ ಒಟ್ಟಾರೆ 10 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಆದರೆ, ಕರ್ನಾಟಕ ರಾಜ್ಯ ಒಂದೇ ಕೇಂದ್ರದ ಎಂಎಸ್‌ಪಿಯ ಮೂರು ಪಟ್ಟು ಹಣ ರೈತರ ಸಾಲ ಮನ್ನಾ ಮಾಡಿದೆ.
– ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ