Advertisement

Operation Fear: ಕಾಂಗ್ರೆಸ್‌ ಶಾಸಕರ ಮೇಲೆ ನಿಗಾ ವಹಿಸಿ: ಸಿಎಂ ಸಿದ್ದರಾಮಯ್ಯ

12:49 AM Nov 19, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿರುವ ಸುಭದ್ರ ಸರ್ಕಾರವನ್ನು ಕೆಡವಲು ಬಿಜೆಪಿ-ಜೆಡಿಎಸ್‌ ಪ್ರಯತ್ನಿಸುತ್ತಿದೆ ಎಂದು ಆರೋಪಿಸುತ್ತಲೇ ಬಂದಿರುವ ಸರ್ಕಾರ, ಇದನ್ನೇ ಪ್ರತಿಪಕ್ಷಗಳಿಗೆ ತಿರುಗುಬಾಣ ಮಾಡಲೂ ತಂತ್ರ ಹೂಡಿದೆ. ಸಿಎಂ ನಿವಾಸ ಕಾವೇರಿಯಲ್ಲಿ ಭಾನುವಾರ ಸಂಜೆ ನಡೆದ ಹಿರಿಯ ಸಚಿವರ ಸಭೆಯಲ್ಲಿ ಈ ವಿಚಾರವೂ ಪ್ರಸ್ತಾಪವಾಗಿದ್ದು, ಬಿಜೆಪಿ ಸಂಪರ್ಕದಲ್ಲಿ ಇರುವ ಕಾಂಗ್ರೆಸ್‌ ಶಾಸಕರ ಮೇಲೆ ನಿಗಾ ಇಡುವಂತೆ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಟಾಸ್ಕ್ ನೀಡಿದ್ದಾರೆ ಎನ್ನಲಾಗಿದೆ.

Advertisement

ಕಾಂಗ್ರೆಸ್‌ನ 50 ಶಾಸಕರನ್ನು ತಲಾ 50 ಕೋಟಿ ರೂ. ಕೊಟ್ಟು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. ಇದನ್ನು ಕೆಲ ಸಚಿವರು ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಏತನ್ಮಧ್ಯೆ, ಅದು 50 ಕೋಟಿ ರೂ. ಅಲ್ಲ, 100 ಕೋಟಿ ರೂ. ಎಂದು ಕಾಂಗ್ರೆಸ್‌ ಶಾಸಕ ರವಿ ಗಣಿಗ ಆಪಾದಿಸಿದ್ದರು. ಇಬ್ಬರು ಶಾಸಕರ ಹೆಸರನ್ನೂ ರವಿ ಗಣಿಗ ಹೇಳಿದ್ದರು. ಆದರೆ, ಈ ಇಬ್ಬರು ಶಾಸಕರು “ತಮಗೆ ಬಿಜೆಪಿಯಿಂದ ಅಂತಹ ಯಾವುದೇ ಆಫ‌ರ್‌ ಬಂದಿಲ್ಲ’ ಎಂದಿದ್ದಾರೆ.

ಇದೆಲ್ಲದರ ನಡುವೆ ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸಮಾಲೋಚನೆ ಆಗಿದ್ದು, ಸ್ಥಳೀಯವಾಗಿ ಬಿಜೆಪಿ ಸಂಪರ್ಕದಲ್ಲಿ ಯಾರಾದರೂ ಶಾಸಕರು ಇದ್ದರೆ ನಿಗಾ ಇಡಿ. ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಹಾಗೂ ಹಿರಿಯ ಸಚಿವರು ನಮ್ಮ ಶಾಸಕರ ಸಂಪರ್ಕದಲ್ಲಿ ನಿರಂತರವಾಗಿ ಇರಿ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಹಾಗೂ ಎಐಸಿಸಿ ಅಧಿವೇಶನಗಳಲ್ಲಿ ನಮ್ಮ ಯಾವುದೇ ಶಾಸಕರೂ ಗೈರು ಹಾಜರಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎಂದು ಆಪ್ತಮೂಲಗಳು ತಿಳಿಸಿವೆ.

ಬಿಜೆಪಿಗರು ಎಷ್ಟು ಕೋಟಿ ಬೇಕಿದ್ದರೂ ಆಮಿಷವೊಡ್ಡುತ್ತಾರೆ: ಸಚಿವ ದಿನೇಶ್‌

ಬಿಜೆಪಿಯವರಲ್ಲಿ ಸಾಕಷ್ಟು ಹಣವಿದೆ. ಅವರಲ್ಲಿ ಎಷ್ಟು ಕೋಟಿ ಬೇಕಾದರೂ ಆಮಿಷವೊಡ್ಡುವ ಶಕ್ತಿ ಇದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Advertisement

ಪತ್ರಕರ್ತರೊಂದಿಗೆ ಮಾತನಾಡಿ, ಗಣಿಗ ರವಿ ಕುಮಾರ್‌ ಬಳಿ ದಾಖಲೆಗಳೇನಾದರೂ ಇದ್ದರೆ ಬಿಡುಗಡೆ ಮಾಡಲಿ. ನನಗೆ ದಾಖಲೆ ಕುರಿತು ಯಾವುದೇ ಮಾಹಿತಿಯೂ ಇಲ್ಲ. ಬಿಜೆಪಿ ಮೊದಲಿನಿಂದ ಕಾಂಗ್ರೆಸ್‌ ಸರಕಾರವನ್ನು ಬೀಳಿಸುವ ಉದ್ದೇಶವನ್ನು ಹೊಂದಿದೆ. ಆದರೆ ಅದ್ಯಾವುದೂ ಸಾಧ್ಯವಾಗುವುದಿಲ್ಲ ಎಂದರು.

ನ್ಯಾ| ಮೈಕಲ್‌ ಡಿ’ಕುನ್ಹಾ ಅವರ ವರದಿ ಕೋವಿಡ್‌ ಸಂದರ್ಭ ಹಿಂದಿನ ಬಿಜೆಪಿ ಸರಕಾರ ಯಾವ ರೀತಿಯಾಗಿ ಲೂಟಿ ಮಾಡಿದೆ ಎನ್ನುವುದರ ಮಾಹಿತಿ ನೀಡಿದೆ. ಈ ಅಂಶಗಳು ತಾರ್ಕಿಕ ಹಂತಕ್ಕೆ ಹೋಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಅಂದಿನ ಸಚಿವರು, ಮುಖ್ಯಮಂತ್ರಿಗಳ ಅನುಮೋದನೆ ಇಲ್ಲದೇ ಇಂತಹ ತೀರ್ಮಾನಗಳನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಜ್ಯಕ್ಕೆ ಮಾಡಿರುವ ಮೋಸಕ್ಕೆ ಕಾನೂನು ಪ್ರಕಾರ ತಕ್ಕೆ ಶಿಕ್ಷೆ ನೀಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next