Advertisement

ಉಪ ಚುನಾವಣೆಗೆ 30 ಕೋಟಿ ರೂ. ವೆಚ್ಚ! ; ಚುನಾವಣೆಗಳ ಖರ್ಚು-ವೆಚ್ಚ ಜನರ ಜೇಬಿಗೆ ಹೊರೆ!

09:38 AM Nov 28, 2019 | Hari Prasad |

ಬೆಂಗಳೂರು: ರಾಜಕೀಯ ಪಕ್ಷಗಳ ಹಣದ ‘ಹರಿದಾಟ’ದ ವಿಚಾರದಲ್ಲಿ ಕರ್ನಾಟಕದ ಚುನಾವಣೆಗಳು ಅತ್ಯಂತ ದುಬಾರಿ ಎಂಬ ಮಾತಿದೆ. ಅದೇ ರೀತಿ ಚುನಾವಣೆ ನಡೆಸಬೇಕಾದರೆ ಚುನಾವಣ ಆಯೋಗಕ್ಕೂ ಕೋಟಿಗಟ್ಟಲೆ ರೂ. ಬೇಕು. ಈಗ ನಡೆಯುತ್ತಿರುವ ರಾಜ್ಯದ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಅಂದಾಜು 30 ಕೋಟಿ ರೂ. ವೆಚ್ಚ ಬರಲಿದೆ. ಚುನಾವಣ ಆಯೋಗ ವೆಚ್ಚ ಮಾಡುವ ಈ ಹಣ ಸಾರ್ವಜನಿಕರ ತೆರಿಗೆ ಹಣವೇ ಆಗಿದೆ.

Advertisement

2018ರ ವಿಧಾನಸಭೆ ಚುನಾವಣೆ ವೇಳೆ ಎಲ್ಲ 224 ಕ್ಷೇತ್ರಗಳಿಗೆ ಚುನಾವಣ ಆಯೋಗ 393 ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಿತ್ತು. ಅದರಂತೆ ಪ್ರತಿ ಕ್ಷೇತ್ರಕ್ಕೆ ಅಂದಾಜು 1.75 ಕೋಟಿ ರೂ. ವೆಚ್ಚ ಆಗಿತ್ತು. ಚುನಾವಣೆ ನಡೆದು ಇನ್ನೇನು ಒಂದೂವರೆ ವರ್ಷವಷ್ಟೇ ಆಗಿದ್ದರಿಂದ ಪ್ರತಿ ಕ್ಷೇತ್ರದ ಚುನಾವಣ ಖರ್ಚು ಹೆಚ್ಚು-ಕಡಿಮೆ ಅಷ್ಟೇ ಆಗಲಿದೆ. ಹೀಗಾಗಿ 15 ಕ್ಷೇತ್ರಗಳಿಗೆ ತಲಾ ಅಂದಾಜು 1.75 ಕೋಟಿ ರೂ. ಗಳಂತೆ ಸರಾಸರಿ 26ರಿಂದ 30 ಕೋಟಿ ರೂ. ಖರ್ಚು ಬರಲಿದೆ ಅನ್ನುವುದು ಚುನಾವಣ ಆಯೋಗದ ಲೆಕ್ಕಾಚಾರ.

ಒಟ್ಟು ಕ್ಷೇತ್ರಗಳಿಗೆ ತಗಲಿದ ವೆಚ್ಚವನ್ನು ಒಟ್ಟು ಮತಗಟ್ಟೆಗಳು ಮತ್ತು ಮತದಾರರ ಸಂಖ್ಯೆಯಿಂದ ಭಾಗಿಸಿ ಒಂದು ಮತಗಟ್ಟೆಗೆ, ಒಬ್ಬ ಮತದಾರನಿಗೆ ಎಷ್ಟು ವೆಚ್ಚ ಆಗಲಿದೆ ಎಂದು ಚುನಾವಣ ಆಯೋಗ ಅಂದಾಜಿಸುತ್ತದೆ. ಅದರಂತೆ 15 ಕ್ಷೇತ್ರಗಳಿಗೆ 26ರಿಂದ 30 ಕೋಟಿ ರೂ. ಒಟ್ಟು ವೆಚ್ಚ ಎಂದು ಲೆಕ್ಕ ಅಂದಾಜು ಮಾಡಿದರೆ ಈ 15 ಕ್ಷೇತ್ರಗಳಲ್ಲಿ 37.77 ಲಕ್ಷ ಮತದಾರರಿದ್ದು, 4,185 ಮತ ಗಟ್ಟೆಗಳಿವೆ. ಈ ರೀತಿ ಒಬ್ಬ ಮತದಾರನ ಮೇಲೆ 70ರಿಂದ 90 ರೂ. ಹಾಗೂ ಒಂದು ಮತಗಟ್ಟೆಗೆ 60ರಿಂದ 64 ಸಾವಿರ ರೂ. ಖರ್ಚು ಬರಬಹುದು ಅನ್ನುವುದು ಲೆಕ್ಕಾಚಾರ.

ಆದರೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಚುನಾವಣ ಖರ್ಚು ವ್ಯತ್ಯಾಸವಾಗಿರುತ್ತದೆ. ಸಾಮಾನ್ಯ ಮತ ಗಟ್ಟೆಗಳು, ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆ, ಗಡಿಭಾಗ, ಗುಡ್ಡಗಾಡು ಪ್ರದೇಶ,
ಮತಗಟ್ಟೆಗಳ ಒಟ್ಟು ಸಂಖ್ಯೆ, ಆಡಳಿತಾತ್ಮಕ ವಿಷಯಗಳು, ಕಾನೂನು – ಸುವ್ಯವಸ್ಥೆ ಇತ್ಯಾದಿಗಳ ಮೇಲೆ ಚುನಾವಣ ಖರ್ಚು ಅಂದಾಜಿಸಲಾಗುತ್ತದೆ.

ಅಭ್ಯರ್ಥಿಗೆ 28 ಲಕ್ಷ ರೂ. ಮಿತಿ
ವಿಧಾನಸಭೆ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಮಾಡುವ ವೆಚ್ಚಕ್ಕೆ ಮಿತಿ ಇರುವುದಿಲ್ಲ. ಆದರೆ ಅಭ್ಯರ್ಥಿಗಳಿಗೆ ಮಿತಿ ಹೇರಲಾಗಿರುತ್ತದೆ. ಅದರಂತೆ ಕರ್ನಾಟಕದ ವಿಧಾನಸಭೆ ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಠ 28 ಲಕ್ಷ ರೂ. ವೆಚ್ಚ ಮಾಡಬಹುದು.

Advertisement

ಆದರೆ ಚುನಾವಣೆಗಳಿಗೆ ಹಣ ಬಲವೇ ಮುಖ್ಯ ಆಧಾರ ಆಗಿರುವ ಈಗಿನ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಚುನಾವಣ ವೆಚ್ಚ ‘ಕಾಗೆ ಲೆಕ್ಕ-ಗುಬ್ಬಿ ಲೆಕ್ಕ’ ಆಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next