ಉಡುಪಿ: ಜಿಲ್ಲೆಯ ಕೃಷಿ, ಪ್ರವಾಸೋದ್ಯಮ, ಮೀನುಗಾರಿಕೆ ಹಾಗೂ ತೋಟಗಾರಿಕೆ ಸಹಿತ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್/ ಅನುದಾನ ನಿರೀಕ್ಷಿಸಲಾಗಿತ್ತು. ಸ್ವರ್ಣಾ ಏತ ನೀರಾವರಿ ಹೊರತುಪಡಿಸಿ ಹೊಸ ಯೋಜನೆ ಘೋಷಣೆಯಾಗಿಲ್ಲ.
ಸ್ವರ್ಣಾ ನದಿಗೆ ಉಪ್ಪು ನೀರು ಬರುವುದನ್ನು ತಡೆಯಲು ಡ್ಯಾಮ್ ಕಮ್ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ಸಂಗ್ರಹವಾದ ಸಿಹಿ ನೀರನ್ನು ನಾಲೆಗಳ ಮೂಲಕ ಕೃಷಿ ಚಟುವಟಿಕೆಗೆ ಬಳಸಲು ಪೂರಕವಾಗುವ ಸ್ವರ್ಣ ಏತ ಯೋಜನೆ ಘೋಷಿಸಲಾಗಿದೆ. ಸಿದ್ದಾಪುರ ಏತ ನೀರಾವರಿ ಯೋಜನೆಯ ಪುನಶ್ಚೇತನ ಪ್ರಸ್ತಾವಿಸಲಾಗಿದೆ.
ಮೀನುಗಾರಿಕೆಗೆ ಉತ್ತಮ ಅನುದಾನ ಹಂಚಿಕೆಯಾಗಿದ್ದರೂ ಉಡುಪಿ ಜಿಲ್ಲೆಗೆ ವಿಶೇಷವೇನೂ ಸಿಕಿಲ್ಲ. 7 ಕೋ.ರೂ. ವೆಚ್ಚದಲ್ಲಿ ಸೀ ಆ್ಯಂಬುಲೆನ್ಸ್ ಖರೀದಿಗೆ ಒಪ್ಪಿಗೆ ನೀಡಿದ್ದರಿಂದ ಮಲ್ಪೆಗೆ ಇದು ಬಂದರೆ ದ.ಕ. ಮತ್ತು ಉ.ಕ. ಜಿಲ್ಲೆಯ ಕೇಂದ್ರ ಸ್ಥಾನವಾಗಿ ಉಡುಪಿಯಿಂದಲೇ ಕಾರ್ಯಾಚರಿಸಲು ಅನುಕೂಲವಾಗಲಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮಲ್ಪೆ ಬಂದರಿನ ನಾಲ್ಕನೇ ಹಂತದ ಅಭಿವೃದ್ಧಿ ಘೋಷಿಸಲಾಗಿದೆ. ಆದರೆ ಜಿಲ್ಲೆಯ ಬಹುದೊಡ್ಡ ಸಮಸ್ಯೆಯಾದ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಥವಾ ಈಗಾಗಲೇ ಪ್ರಸ್ತಾವನೆ ಹಂತದಲ್ಲಿರುವ ಯೋಜನೆಗೆ ಅನುದಾನದ ಹಂಚಿಕೆಯನ್ನು ಮಾಡಿಲ್ಲ.
ಉಡುಪಿ ಸಹಿತ ಐದು ಜಿಲ್ಲೆಗಳಲ್ಲಿ ಅಂದಾಜು 36 ಕೋ.ರೂ. ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನ ಪರೀಕ್ಷ ಪಥ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಅಲೆವೂರಿನಲ್ಲಿ ಇದಕ್ಕಾಗಿ ಈಗಾಗಲೇ 5 ಎಕ್ರೆಗೂ ಅಧಿಕ ಜಾಗ ಗುರುತಿಸಿದ್ದರೂ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಚಾಲನ ಪಥ ನಿರ್ಮಾಣವಾಗಿಲ್ಲ.
ಉಡುಪಿಯಲ್ಲೂ ಕ್ರಿಟಿಕಲ್ ಬ್ಲಾಕ್ ಸ್ಥಾಪನೆಯಾಗಲಿದೆ. ಉಡುಪಿ ಸಮೀಪದ ಅಲೆವೂರಿನಲ್ಲಿ ವಿಜ್ಞಾನ ಕೇಂದ್ರದ ಕಾಮಗಾರಿ ನಡೆಯುತ್ತಿದೆ. ತುಳು, ಬ್ಯಾರಿ, ಕೊಂಕಣಿ ಕರ್ನಾಟಕದ ಪ್ರಾದೇಶಿಕ ಭಾಷೆಗಳಾಗಿದ್ದು ಅವುಗಳ ಅಭಿವೃದ್ಧಿಗೆ ಅಕಾಡೆಮಿಗಳ ಮೂಲಕ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಪ್ರೋತ್ಸಾಹಿಸುವ ಘೋಷಣೆ ಮಾಡಿದ್ದರಿಂದ ಜಿಲ್ಲೆಯ ಸಾಹಿತ್ಯ ವಲಯಕ್ಕೂ ಇದು ಸಹಕಾರಿ ಯಾಗಲಿದೆ.
ಜಿಲ್ಲೆಯ ಕೃಷಿ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ, ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ಹಲವು ನಿರೀಕ್ಷೆಗಳಿದ್ದು, ಅವುಗಳು ಈಡೇರಿಲ್ಲ. ಧಾರ್ಮಿಕ ಕ್ಷೇತ್ರ, ಬೀಚ್, ಜಲಪಾತ ಸಹಿತ ಪ್ರವಾಸೋದ್ಯಮ ಸ್ಥಳಗಳನ್ನು ಸಂಪರ್ಕಿಸುವ ಟೂರಿಸಂ ಸರ್ಕ್ಯೂಟ್ ಬಲವರ್ಧನೆಗೆ ಆದ್ಯತೆ ಸಿಕ್ಕಿಲ್ಲ.
ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಂದಿಲ್ಲ. ಬ್ರಹ್ಮಾವರ ಕೃಷಿ ಕಾಲೇಜು, ಸರಕಾರಿ ವೈದ್ಯಕೀಯ ಕಾಲೇಜು, ಸರಕಾರಿ ಎಂಜಿನಿಯರಿಂಗ್ ಕಾಲೇಜು ಬೇಡಿಕೆಯಾಗಿಯೇ ಉಳಿದಿದೆ. ವಾರಾಹಿ ಯೋಜನೆಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಮುಕ್ತಿ ನೀಡುವ ಯಾವುದೇ ಭರವಸೆಯೂ ಸಿಕ್ಕಿಲ್ಲ.
ಉಡುಪಿ ನಗರಕ್ಕೆ ಪೂರಕವಾದ 330 ಕೋ.ರೂ. ಯುಜಿಡಿ ಕಾಮಗಾರಿಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿಲ್ಲ. ಮಣಿಪಾಲಕ್ಕೆ ಅಗ್ನಿಶಾಮ ದಳ ಬರಲಿಲ್ಲ.