ಬೆಂಗಳೂರು: ವಸತಿ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರುವ ಉದ್ದೇಶದಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹಲವಾರು ಯೋಜನೆಗಳನ್ನು ಈ ಬಾರಿಯ ಆಯ-ವ್ಯಯದಲ್ಲಿ ಘೋಷಿಸಿದ್ದಾರೆ. ಮಾತ್ರವಲ್ಲದೇ ನಿರ್ಲಕ್ಷಿತ ವರ್ಗವೆಂದೇ ಪರಿಗಣಿತವಾಗಿರುವ ಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿ ಮುಖ್ಯಮಂತ್ರಿಯವರು ಒಂದಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ. ಇವುಗಳ ವಿವರ ಇಲ್ಲಿದೆ.
1) ವಿವಿಧ ವಸತಿ ಯೋಜನೆಗಳಡಿಯಲ್ಲಿ 2019-20ನೇ ಸಾಲಿನಲ್ಲಿ ಒಟ್ಟು 4 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ.
2) ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚಾಗಿ ವಾಸಿಸುವ ಬೆಂಗಳೂರಿನಲ್ಲಿರುವ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗಾಗಿ 300 ಕೋಟಿ ರೂ. ಮೀಸಲು.
3) ‘ಸಾರಥಿಯ ಸೂರು’ ಹೆಸರಿನಲ್ಲಿ ಬೆಂಗಳೂರಿನ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ 50 ಕೋಟಿ ರೂ. ವೆಚ್ಚದಲ್ಲಿ ಬಾಡಿಗೆ ಆಧಾರದ ವಸತಿ ಯೋಜನೆ. ಮತ್ತು ಸಿದ್ಧ ಉಡುಪು ಕಾರ್ಮಿಕರಿಗೆ ಬಾಡಿಗೆ ಆಧಾರದ ವಸತಿ ಯೋಜನೆಗೆ 50 ಕೋಟಿ ರೂಪಾಯಿ ಅನುದಾನ.
4) ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರಿಗಾಗಿ ‘ಶ್ರಮಿಕ ಸೌರಭ’ ಯೋಜನೆ. ಇದರಲ್ಲಿ ಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿಯಲ್ಲಿ 5 ಲಕ್ಷ ರೂಪಾಯಿಗಳವರೆಗೆ ಮುಂಗಡ ಹಣ, ಸ್ವಂತ ಮನೆಯಿರುವ ಕಾರ್ಮಿಕರ ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ರೂ. ಮರುಪಾವತಿ. 1.5 ಲಕ್ಷ ರೂ.ಗಳವರೆಗೆ ಚಿಕಿತ್ಸಾ ವೆಚ್ಚ ಮರುಪಾವತಿ, ಕೆಲಸ ಮಾಡುವ ಸ್ಥಳದಲ್ಲಿ ಅಪಘಾತದಿಂದ ಮರಣಹೊಂದಿದಲ್ಲಿ 2 ಲಕ್ಷ ರೂ. ಪರಿಹಾರ, ಕಾರ್ಮಿಕರ ಮಕ್ಕಳ ಕಿಂಡರ್ ಗಾರ್ಡನ್/ಪ್ರೀ ಸ್ಕೂಲ್/ನರ್ಸರಿ ಶಿಕ್ಷಣಕ್ಕೆ ರೂ. 2000 ಮತ್ತು ರೂ. 2500ರ ಸೌಲಭ್ಯ.
5) ಗಾರ್ಮೆಂಟ್ಸ್ ಕಾರ್ಖಾನೆಗಳ ಮಹಿಳಾ ಕಾರ್ಮಿಕರಿಗೆ ಶಿಶುಪಾಲನಾ ಕೇಂದ್ರ , ಅಪಘಾತ ಪರಿಹಾರ ಸಹಾಯಧನ ಮತ್ತಿತರ ಅನುಕೂಲ ಕಲ್ಪಿಸಲು 10 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್. ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಪ.ಜಾತಿ ಮತ್ತು ಪ.ಪಂಗಡಗಳಿಗೆ ಸೇರಿದ 25,000 ಮಹಿಳಾ ಕಾರ್ಮಿಕರ ಕೌಶಲ್ಯ ಉನ್ನತೀಕರಣ ಹಾಗೂ ಶಿಶಿಕ್ಷು ತರಬೇತಿಗಾಗಿ 37.5 ಕೋಟಿ ರೂಪಾಯಿ ಅನುದಾನ.
6) ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ. ಪೆಟ್ರೋಲ್ ಆಟೋಗಳನ್ನು ಎಲೆಕ್ಟ್ರಿಕ್ ಆಟೋಗಳಾಗಿ ಪರಿವರ್ತಿಸಲು ಸಹಾಯಧನ. ಸಾರಿಗೆ ಇಲಾಖೆ ಮೂಲಕ ಈ ಯೋಜನೆ ಜಾರಿಗೆ 30 ಕೋಟಿ ರೂಪಾಯಿ ಅನುದಾನ.
7) ವಿವಿಧ ವಲಯಗಳ ಚಾಲಕರ ಸೇವೆ ಗುರುತಿಸಲು ಎಲ್ಲಾ ಜಿಲ್ಲೆಗಳಲ್ಲಿ ಚಾಲಕರ ದಿನಾಚರಣೆ ; ಪ್ರಾಮಾಣಿಕ ಮತ್ತು ಅಪಘಾತ ರಹಿತ ವಾಹನ ಚಾಲನೆ ಮಾಡಿದ ಪ್ರತೀ ಜಿಲ್ಲೆಯ ತಲಾ 10 ಚಾಲಕರಿಗೆ ತಲಾ 25 ಸಾವಿರ ರೂಪಾಯಿಗಳ ಪುರಸ್ಕಾರ.