Advertisement
ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ರಾಜ್ಯಾ ಡಳಿತದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಗೆದ್ದ ನಾಸಿರ್ ಹುಸೇನ್ ಪರ ಘೋಷಣೆಗಳನ್ನು ಕೂಗಿದರು. ಮತ ಎಣಿಕೆ ಕೇಂದ್ರದ ಬಳಿಯೇ ನಾಸಿರ್ ಹುಸೇನ್ ಅವರನ್ನು ಎತ್ತಿಕೊಂಡು ಸಂಭ್ರಮಿಸಿದ ಕಾರ್ಯಕರ್ತರು ಜೈಕಾರ ಕೂಗುತ್ತಿರುವ ಮಧ್ಯೆಯೇ ಕಾರ್ಯಕರ್ತನೊಬ್ಬ ಪಾಕಿಸ್ಥಾನ ಜಿಂದಾಬಾದ್ ಎಂದು ಎರಡು ಸಲ ಕೂಗಿರುವ ವೀಡಿಯೋ ವೈರಲ್‌ಆಗಿದೆ. ಅಲ್ಲಿಯೇ ಇದ್ದ ಪತ್ರಕರ್ತರು ನಾಸಿರ್ ಅವರನ್ನು ಈ ಬಗ್ಗೆ ಪ್ರಶ್ನಿಸಿದರು. ಆಗ ಅವರು ಪ್ರಶ್ನಿಸಿದ ಪತ್ರಕರ್ತರ ವಿರುದ್ಧವೇ ಕೂಗಾಡಿದ ಘಟನೆಯೂ ನಡೆದಿದೆ.
ಸಂಭ್ರಮಾಚರಣೆಯಲ್ಲಿ ತೇಲುತ್ತಿದ್ದ ನಾಸಿರ್ ಹುಸೇನ್ ತಮ್ಮನ್ನು ಈ ಬಗ್ಗೆ ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗಳನ್ನು ತಳ್ಳಿಕೊಂಡು ಹೊರನಡೆದರು. ಕಾಂಗ್ರೆಸ್‌ನ ಒಟ್ಟಾರೆ ನಡೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು, ನಾಸಿರ್ ಹುಸೇನ್ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಅಲ್ಲದೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಅಧಿವೇಶನದಲ್ಲೂ ಅನುರಣನ?
ಬುಧವಾರ ವಿಧಾನಮಂಡಲ ಅಧಿವೇಶನದಲ್ಲೂ ಈ ವಿಷಯವನ್ನು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಪ್ರಸ್ತಾವಿಸುವ ಸಾಧ್ಯತೆಗಳಿದ್ದು, ಇದೇ ವಿಚಾರವನ್ನು ಇಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ರಾಜಕೀಯ ದಾಳ ಉರುಳಿಸಲಿದೆ. ಅದರಲ್ಲೂ ವಿಧಾನಸೌಧದಲ್ಲಿ ಚುನಾವಣೆ ಹಾಗೂ ಮತ ಎಣಿಕೆ ನಡೆಯುತ್ತಿದ್ದ ಕೊಠಡಿಯ ಬಳಿಯೇ ಈ ಪ್ರಕರಣ ನಡೆದಿದ್ದು, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರೇ ವಿಧಾನಸೌಧ ಕಟ್ಟಡದ ಮುಖ್ಯಸ್ಥರೂ ಆಗಿರುವುದರಿಂದ ಗಂಭೀರವಾಗಿ ಪರಿಗಣಿಸುವಂತೆ ಒತ್ತಡ ಹೇರಲು ಬಿಜೆಪಿ ತಯಾರಿ ನಡೆಸಿದೆ.
Related Articles
ಪ್ರಕರಣದಿಂದ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ಮೂವರು ಅಭ್ಯರ್ಥಿಗಳು ಗೆದ್ದಿದ್ದರೂ ಸಂಭ್ರಮಪಡದ ಸ್ಥಿತಿ ಸೃಷ್ಟಿಯಾಗಿದೆ. ವಿವಾದದಿಂದ ಹೇಗೆ ತಪ್ಪಿಸಿ ಕೊಳ್ಳಬೇಕೆಂದು ಚಿಂತಿಸುವಂತಾಗಿದೆ. ವಿಧಾನ ಮಂಡಲ ದಲ್ಲಿ ಸರಕಾರಕ್ಕೆ ಆಗುವ ಮುಜುಗರದಿಂದ ತಪ್ಪಿಸಿಕೊಳ್ಳಬೇಕಿದ್ದು, ಸ್ಪೀಕರ್ ಅವರಿಗೂ ಇರುಸುಮುರುಸು ಸೃಷ್ಟಿಸುವ ಸಾಧ್ಯತೆಗಳು ಇವೆ.
Advertisement