ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ನಾಲೆಗೆ ಉರುಳಿ ಬಿದ್ದ ಭೀಕರ ಘಟನೆಯಲ್ಲಿ 30 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಇದರಲ್ಲಿ 15 ಮಹಿಳೆಯರು, 6ಗಂಡಸರು ಹಾಗೂ 9 ಮಕ್ಕಳು ಜೀವಂತವಾಗಿ ಜಲಸಮಾಧಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಲು, ಸಾಲು ಶವಗಳನ್ನು ಕಂಡು ಕಣ್ಣೀರು ಹಾಕಿದರು. ಏತನ್ಮಧ್ಯೆ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಅಲ್ಲದೇ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು.
30 ಮಂದಿ ವೈದ್ಯರ ತಂಡ ಸ್ಥಳದಲ್ಲೇ ಶಾಮಿಯಾನ ಹಾಕಿ ಶವಗಳ ಪಂಚನಾಮೆ ನಡೆಸುತ್ತಿದ್ದಾರೆ. ವದೇ ಸಮುದ್ರದ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.
ಚಾಲಕನ ಅತೀಯಾದ ವೇಗ ಬಸ್ ನಾಲೆಗೆ ಉರಳಲು ಕಾರಣವಾಗಿದೆ. ಅಲ್ಲದೇ ಹಳೇ ಬಸ್ ಗೆ ಪರವಾನಿಗೆ ನೀಡಿದ್ದ ಮಂಡ್ಯ ಆರ್ ಟಿಒ ಅಧಿಕಾರಿಯನ್ನು ಅಮಾನತುಗೊಳಿಸಿ ಸಿಎಂ ಕುಮಾರಸ್ವಾಮಿ ಸ್ಥಳದಲ್ಲೇ ಆದೇಶ ಹೊರಡಿಸಿದ್ದಾರೆ.
ಮಂಡ್ಯದಿಂದ ಪಾಂಡವಪುರಕ್ಕೆ ಬಸ್ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಸ್ ಮುಂದೆ ನಿಂತಿದ್ದ ಕಂಡಕ್ಟರ್ ಮತ್ತು ಬಾಲಕ ಲೋಹಿತ್ ಮಾತ್ರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಂದ್ರು, ಪವಿತ್ರ, ಈರಯ್ಯ, ಪ್ರೀತಿ, ಜಯಲಕ್ಷ್ಮಿ, ಶಶಿಕಲಾ, ರತ್ನಮ್ಮ, ಸೌಮ್ಯ, ಪ್ರಶಾಂತ್, ಕೆಂಪಯ್ಯ, ನಿಂಗಮ್ಮ, ಕಲ್ಪನಾ, ದೇವರಾಜು, ಸಿದ್ದಯ್ಯ, ಚಿಕ್ಕಯ್ಯ, ಮಂಜುಳಾ, ಅನುಷಾ, ಸುಮಾ, ಯಶೋಧ, ಪಾಪಯ್ಯ, ಸಾವಿತ್ರಮ್ಮ ಮೃತಪಟ್ಟ ದುರ್ದೈವಿಗಳು.
ಫೋಟೋ; ಫಕ್ರುದ್ದೀನ್