Advertisement

Karnataka ನಾಳೆಯಿಂದ ವಿಧಾನ ಕಲಾಪ: ಹಲವು ಮಸೂದೆಗಳಿಗೆ ಅಂಗೀಕಾರ ಪಡೆಯುವ ಸಾಧ್ಯತೆ

11:17 PM Jul 13, 2024 | Team Udayavani |

ಬೆಂಗಳೂರು: ವಿಧಾನಮಂಡಲ ಅಧಿವೇಶನ ಸೋಮವಾರ ಆರಂಭವಾಗಲಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ, ಮುಡಾ ಹಗರಣಗಳನ್ನು ಮುಂದಿರಿಸಿ ಸರಕಾರದ ವಿರುದ್ಧ ಮುಗಿಬೀಳಲು ಬಿಜೆಪಿ-ಜೆಡಿಎಸ್‌ ಸಜ್ಜಾಗಿವೆ. ಇದರ ನಡುವೆ ಹಲವು ಮಸೂದೆಗಳಿಗೆ ಸದನದಲ್ಲಿ ಸರಕಾರ ಅಂಗೀಕಾರ ಪಡೆಯುವ ಸಾಧ್ಯತೆಯಿದೆ.

Advertisement

ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿ ಅಧಿವೇಶನ ನಡೆಯುತ್ತಿದ್ದು, ಬಿಜೆಪಿ, ಜೆಡಿಎಸ್‌ ವಿಪಕ್ಷ ಸ್ಥಾನದಲ್ಲಿದ್ದರೂ ಲೋಕಸಭೆ ಚುನಾವಣ ಫ‌ಲಿತಾಂಶದಿಂದ ಹೊಸ ಹುರುಪು ಪಡೆದಿವೆ. ಇದರೊಂದಿಗೆ ಮುಖ್ಯಮಂತ್ರಿ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಒಳಗೆ ನಡೆಯುತ್ತಿರುವ ಪೈಪೋಟಿ ಸರಕಾರಕ್ಕೆ ಚಿಂತೆ ಹುಟ್ಟಿಸಿದ್ದರೂ ವಿಪಕ್ಷಗಳ ಏಟಿಗೆ ಸೂಕ್ತ ಎದಿರೇಟು ನೀಡಲು ಸರಕಾರ ಸಜ್ಜಾಗಿದೆ.

ವಿಧಾನಪರಿಷತ್‌ನಲ್ಲಿ ವಿಪಕ್ಷ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿರು ವುದರಿಂದ ಅವರ ಸ್ಥಾನ ತುಂಬುವ ಕಸರತ್ತು ಬಿಜೆಪಿಯಲ್ಲಿ ನಡೆದಿದೆ.

ವಿಧಾನಸಭೆಯಲ್ಲಿ ಜೆಡಿಎಸ್‌ ನಾಯಕರಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿರುವುದರಿಂದ ಅವರ ಸ್ಥಾನ ಭರ್ತಿ ಮಾಡುವ ತಾಲೀಮನ್ನು ಜೆಡಿಎಸ್‌ ನಡೆಸಿದೆ. ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈಗ ಸಂಸದರಾಗಿದ್ದಾರೆ.

ಗ್ರೇಟರ್‌ ಬೆಂಗಳೂರು ಮಸೂದೆ?
ಸೊಸೈಟಿಗಳ ಸದಸ್ಯರಿಗೆ ಮತ ಹಾಕುವ ಅಧಿಕಾರ ನೀಡಲು ಅನುಕೂಲ ಮಾಡಿಕೊಡಬಲ್ಲ ಕರ್ನಾಟಕ ಸಹಕಾರ ಸೊಸೈಟಿಗಳ (ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆಗಳಿಗೆ ಕಳೆದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿತ್ತು. ಆದರೆ ವಿಧಾನಪರಿಷತ್‌ನಲ್ಲಿ ಅನುಮೋದನೆಯಾಗದೆ ಪರಿಶೀಲನ ಸಮಿತಿಯ ಮುಂದಿದೆ. ಈ ಬಗ್ಗೆ ಸಮಿತಿಯ ಅಭಿಪ್ರಾಯವು ಮೇಲ್ಮನೆಯಲ್ಲಿ ಮಂಡನೆಯಾಗಬಹುದು. ಅಲ್ಲದೆ ಬಿಬಿಎಂಪಿಯನ್ನು ವಿಸ್ತರಣೆ ಮಾಡುವ ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ-2024 ಮಂಡನೆಯಾಗುವ ಸಾಧ್ಯತೆಗಳಿವೆ.

Advertisement

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಮಸೂದೆ?
ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಸರಕಾರಿ ಸೇವೆಯ ಯಾವುದೇ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಬದಲು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ವೇಳೆ ಮೀಸಲಾತಿ ನಿಗದಿಪಡಿಸುವ ಸಂಬಂಧ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲಾತಿ) (ತಿದ್ದುಪಡಿ) ಮಸೂದೆಯೂ ಮಂಡನೆಯಾಗಬಹುದು ಎನ್ನಲಾಗಿದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ, ವೈದ್ಯಕೀಯ ಸೇವೆಯಲ್ಲಿರುವವರ ಮೇಲಿನ ದೌರ್ಜನ್ಯ ಪ್ರಕರಣ, ಆಸ್ಪತ್ರೆಗಳ ಆಸ್ತಿ-ಪಾಸ್ತಿ ಹಾನಿಯನ್ನು ತಡೆಗಟ್ಟುವ ಸಲುವಾಗಿ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕಾನೂನು (ತಿದ್ದುಪಡಿ) ಮಸೂದೆ, ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಸಂಸದರನ್ನು ಸೇರಿಸಲು ಕರ್ನಾಟಕ ನರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 2022ಕ್ಕೆ ತಿದ್ದುಪಡಿ ಸೇರಿ ಒಟ್ಟು 8 ಮಸೂದೆಗಳು ಮಂಡನೆಯಾಗುವ ಸಾಧ್ಯತೆ ಇದೆ.

ಮಿತ್ರಕೂಟಕ್ಕೆ ಅಶೋಕ್‌ ಒಬ್ಬರೇ ಬಲ
ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟಕ್ಕೆ ಆರ್‌. ಅಶೋಕ್‌ ಮಾತ್ರ ಅನು ಭವಿ ನಾಯಕರಾಗಿದ್ದಾರೆ. ಸದ್ಯ ಅವರ ನೇತೃತ್ವ ದಲ್ಲೇ ಅಧಿವೇಶನದಲ್ಲಿ ರಾಜ್ಯ ಸರಕಾರದ ವಿರುದ್ಧ ಸೆಣಸಾಟಕ್ಕೆ ವಿಪಕ್ಷಗಳು ಸಜ್ಜಾಗಿವೆ.

ಎರಡೂ ಸದನಗಳಲ್ಲಿ ಜೆಡಿಎಸ್‌ಗೆ ನಾಯಕರಿಲ್ಲ
ವಿಧಾನಸಭೆ ಮತ್ತು ವಿಧಾನಪರಿಷತ್‌ ಎರಡರಲ್ಲೂ ಜೆಡಿಎಸ್‌ಗೆ ಇನ್ನೂ ನಾಯಕರ ಆಯ್ಕೆಯಾಗಿಲ್ಲ. ವಿಧಾನಸಭೆಯಲ್ಲಿ ಪಕ್ಷವನ್ನು ಮುನ್ನಡೆಸುತ್ತಿದ್ದ ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ ರಾಗಿರುವುದರಿಂದ ಅಲ್ಲಿ ಹೊಸ ನಾಯಕ ರೊಬ್ಬರ ಹುಡುಕಾಟ ನಡೆಸುವುದು ಅನಿವಾರ್ಯವಾಗಿದೆ. ವಿಧಾನಪರಿಷತ್‌ನಲ್ಲಿ ಜೆಡಿಎಸ್‌ ಶಾಸಕರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಇಲ್ಲೂ ಪ್ರಬಲ ನಾಯಕತ್ವಕ್ಕೆ ಶೋಧ ನಡೆದಿದೆ.

ಕಲಾಪ ವಿಸ್ತರಣೆ?
ಸೋಮವಾರ ಬೆಳಗ್ಗೆ 10.30ಕ್ಕೆ ಅಧಿ ವೇಶನ ಸಮಾವೇಶಗೊಳ್ಳಲಿದ್ದು, ಇತ್ತೀಚೆಗೆ ಅಗಲಿದ ಗಣ್ಯರಿಗೆ ಮೊದಲ ದಿನ ಸಂತಾಪ ಸೂಚಿಸಲಾಗುತ್ತದೆ. ಮೊದಲ ದಿನ ಸಂತಾಪ ಸಲ್ಲಿಕೆಗೆ ಸೀಮಿತವಾಗುವ ಸಾಧ್ಯತೆಗಳಿವೆ. ಜು. 16ರಂದು ಕಲಾಪ ನಡೆಯಲಿದ್ದು, ಜು. 17ರಂದು ಸರಕಾರಿ ರಜೆ ಇರುವುದರಿಂದ ಕಲಾಪ ಇರುವುದಿಲ್ಲ. ಜು. 18 ಮತ್ತು 19 ರಂದು ಕಲಾಪ ನಡೆಯಲಿದ್ದು, ಶನಿವಾರ ಹಾಗೂ ರವಿವಾರ ರಜೆ ಇರಲಿದೆ. ಮತ್ತೆ ಜು. 22ರಿಂದ 26ರ ವರೆಗೆ ಅಧಿವೇಶನ ನಡೆಯ ಲಿದ್ದು, ಇನ್ನೂ ಒಂದು ವಾರ ಕಲಾಪ ವಿಸ್ತರಣೆ ಮಾಡಲು ಬಿಜೆಪಿ, ಜೆಡಿಎಸ್‌ ಆಗ್ರಹಿಸಿವೆ. ಈ ಬಗ್ಗೆ ಕಲಾಪ ಸಲಹಾ ಸಮಿತಿಯಲ್ಲಿ ಚರ್ಚೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next