Advertisement

J&K Assembly Poll: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ -ಎನ್‌ಸಿ ಮೈತ್ರಿ

06:01 PM Aug 22, 2024 | Team Udayavani |

ಶ್ರೀನಗರ (ಜಮ್ಮು-ಕಾಶ್ಮೀರ) :  ಆರ್ಟಿಕಲ್‌ 370 ರದ್ದಾದ ಬಳಿಕ ಮೊದಲ ಬಾರಿ ವಿಧಾನಸಭಾ ಚುನಾವಣೆ (Assembly Election) ಎದುರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸೆ. 18 ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿರುವ ಜಮ್ಮು ಮತ್ತು ಕಾಶ್ಮೀರದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷವು  ಕಾಂಗ್ರೆಸ್‌ (Congress)ನೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (National Conference)  ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಗುರುವಾರ ತಿಳಿಸಿದ್ದಾರೆ.

Advertisement

ಶ್ರೀನಗರಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್‌ ಗಾಂಧಿಯವರೊಂದಿಗೆ ಮಾತುಕತೆ ಬಳಿಕ ಮೈತ್ರಿ ಘೋಷಿಸಿದ ಫಾರೂಕ್ ಅಬ್ದುಲ್ಲಾ, “ನ್ಯಾಷನಲ್ ಕಾಂಗ್ರೆಸ್ -ಕಾಂಗ್ರೆಸ್ ಮೈತ್ರಿಯು ದೇಶದಲ್ಲಿ ವಿಭಜಕ ಶಕ್ತಿಗಳ ಸೋಲಿಸುವ ಗುರಿ  ಹೊಂದಿದೆ” ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನ್ಯಾಷನಲ್‌ ಕಾನ್ಫರೆನ್ಸ್‌  ಅಧ್ಯಕ್ಷ  ಫಾರೂಕ್ ಅಬ್ದುಲ್ಲಾ ಮತ್ತು  ಉಪಾಧ್ಯಕ್ಷ ಒಮರ್ ಅಬ್ದುಲ್ಲಾರನ್ನು ಶ್ರೀನಗರದ  ಗುಪ್ಕರ್ ರಸ್ತೆಯ ನಿವಾಸದಲ್ಲಿ ಬುಧವಾರ ತಡ ರಾತ್ರಿ ಭೇಟಿಯಾಗಿ ಮೈತ್ರಿ ಕುರಿತು ವಿಸ್ತೃತವಾಗಿ ಚರ್ಚಿಸಿದರು.

ಮೂಲಗಳ ಪ್ರಕಾರ ಕಾಂಗ್ರೆಸ್‌ ಪಕ್ಷವು ಕಾಶ್ಮೀರ ಕಣಿವೆ ಭಾಗದಲ್ಲಿ12 ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ವಹಿಸಿದ್ದು, ನ್ಯಾಷನಲ್‌ ಕಾನ್ಫರೆನ್ಸ್‌ಗೆ   ಜಮ್ಮು ವಿಭಾಗದಲ್ಲಿ 12 ಸ್ಥಾನಗಳ ಬಿಟ್ಟುಕೊಡಲು ಉತ್ಸುಕವಾಗಿದೆ.  ಸೀಟುಗಳ ಹಂಚಿಕೆ ಬಗ್ಗೆ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಿದೆ. ಎರಡು ಪಕ್ಷಗಳು ಮೈತ್ರಿಗಾಗಿ ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸುತ್ತಿವೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಎನ್‌ಸಿ ನಾಯಕರೊಬ್ಬರ ಪ್ರಕಾರ, ಪಕ್ಷಗಳು ಮೈತ್ರಿ ಬಗ್ಗೆ ಮತ್ತು ಅವುಗಳ ನಡುವೆ ಸೀಟು ಹಂಚಿಕೆಯ ಬಗ್ಗೆ ಮೂರು ಸುತ್ತಿನ ಚರ್ಚೆಗಳ ನಡೆಸಿವೆ. ಇಂಡಿಯಾ ಬ್ಲಾಕ್‌ನ ಭಾಗವಾಗಿ ಎರಡು ಪಕ್ಷಗಳು ಒಟ್ಟಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಕಾಶ್ಮೀರ ಕಣಿವೆಯಲ್ಲಿ ಸ್ಪರ್ಧಿಸಿದ ಮೂರು ಸೀಟುಗಳಲ್ಲಿ ಎನ್‌ಸಿ ಒಂದು ಕಳೆದುಕೊಂಡರೆ, ಜಮ್ಮುವಿನ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಸೋತಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಸೆ. 18, ಸೆ. 25 ಮತ್ತು ಅಕ್ಟೋಬರ್ 1 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4 ರಂದು ಮತ ಎಣಿಕೆ ಫಲಿತಾಂಶ ಹೊರ ಬೀಳಿಲಿದೆ.

Advertisement

ನಾಯಕರ ಗೌರವ ಉಳಿಸಿದಾಗ ಮೈತ್ರಿ ಸಂಭವಿಸುತ್ತದೆ: ರಾಹುಲ್‌ ಗಾಂಧಿ

ಶ್ರೀನಗರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರ ಗೌರವವನ್ನು ಉಳಿಸಿಕೊಂಡಾಗ ಮೈತ್ರಿ ಸಂಭವಿಸುತ್ತದೆ. ವಿಧಾನಸಭಾ ಚುನಾವಣೆಗೆ ಮೈತ್ರಿ ಇರುತ್ತದೆ. ಅದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಗೌರವವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಜಮ್ಮು ರಾಜ್ಯವು ಸಾಂಸ್ಕೃತಿಕ ಇತಿಹಾಸ ಹೊಂದಿರುವ ರಾಜ್ಯ, ಮಾತೆ ವೈಷ್ಣೋದೇವಿ ಭೂಮಿ, ಇಲ್ಲಿನ ಜನರ ಜೀವನಶೈಲಿ, ಯೋಚನಾ ಶೈಲಿ ವಿಭಿನ್ನ. ಇಲ್ಲಿನ ಸಂಸ್ಕೃತಿ, ಇತಿಹಾಸ, ಭಾಷೆಗಳ ರಕ್ಷಿಸುವ ಅಗತ್ಯವಿದೆ. ಆದರೆ ಬಿಜೆಪಿ ವಿಭಿನ್ನವಾಗಿ ಯೋಚಿಸುವ ಪಕ್ಷ. ಅವರು ಇಡೀ ದೇಶವನ್ನು ನಾಗಪುರದ ಆಣತಿಯಂತೆ ನಡೆಸುತ್ತಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.