ಬೆಂಗಳೂರು: ರಾಜ್ಯ 222 ಸ್ಥಾನಗಳಿಗೆ ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ 5 ಗಂಟೆಯ ವರೆಗೆ ಶೇಕಡಾ 64ರಷ್ಟು ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ದಾಖಲೆಯ ಶೇ.59 ಮತ್ತು ಅನಂತರದಲ್ಲಿ ಉಡುಪಿಯಲ್ಲಿ ಶೇ.58 ಮತದಾನ ಆಗಿರುವುದು ವರದಿಯಾಗಿದೆ.
ಒಟ್ಟು 224 ಸ್ಥಾನಗಳ ಪೈಕಿ 222 ಇಂದು ಶನಿವಾರ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದು ಎಲ್ಲೆಡೆ ಶಾಂತಿಯುತ ಮತ್ತು ಬಿರುಸಿನ ಮತದಾನ ನಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ.ಅಲ್ಲಲ್ಲಿ ಕಾಂಗ್ರೆಸ್-ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ, ಸಣ್ಣ ಪುಟ್ಟ ಹೊಡೆದಾಟಗಳು ನಡೆದಿದ್ದು, ಯಾವುದು ವಿಕೋಪಕ್ಕೆ ತಿರುಗಿಲ್ಲ.
ರಾಜ್ಯದಲ್ಲಿ 4.96 ಕೋಟಿಗೂ ಹೆಚ್ಚು ಅರ್ಹ ಮತದಾರರು ಇದ್ದಾರೆ; 2,600ಕ್ಕೂ ಸ್ವಲ್ಪ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ; ಪುರುಷ ಮತದಾರರ ಸಂಖ್ಯೆ 2.52 ಕೋಟಿ ಇದೆ; ಮಹಿಳಾ ಮತದಾರರ ಸಂಖ್ಯೆ 2.44 ಕೋಟಿ ಇದೆ; 4,552 ಲಿಂಗಾಂತರಿ ಮತದಾರರು ಇದ್ದಾರೆ. ರಾಜ್ಯಾದ್ಯಂತ 55,600ಕ್ಕೂ ಹೆಚ್ಚು ಮತಗಟ್ಟೆಗಳಿವೆ. 3.5 ಲಕ್ಷ ಸಿಬಂದಿಗಳು ಸುಗಮ ಚುನಾವಣಾ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರತರಾಗಿದ್ದಾರೆ.
ಬಾದಾಮಿ ಕ್ಷೇತ್ರದಲ್ಲಿ ಸಿಎಂ ಸಿದ್ಧರಾಮಯ್ಯ ಎದುರು ಸ್ಪರ್ಧಿಸುತ್ತಿರುವ ಬಿಜೆಪಿಯ ಬಿ ಶ್ರೀರಾಮುಲು ಅವರು ಇಂದು ಶನಿವಾರ ಮತ ಹಾಕಲು ಹೋಗುವ ಮುನ್ನ ಬಳ್ಳಾರಿಯಲ್ಲಿ ಗೋಪೂಜೆ ನಡೆಸಿದರು.
ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಮತದಾನಕ್ಕೆ ಮುನ್ನ ಜಯನಗರದಲಿಲನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ತೆರಳಿ ನಿರ್ಮಲನಾಂದನಾಥ ಮಹಾಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಹಾಸನದ ಮತಗಟ್ಟೆಯಲ್ಲಿ ಇಂದು ಮತಯಂತ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಸ್ವಲ್ಪ ಕಾಲ ಮತದಾನಕ್ಕೆ ಅಡಚಣೆ ಉಂಟಾಯಿತು.
ಮಾಜಿ ಪ್ರಧಾನಿ ದೇವೇಗೌಡ, ಅವರ ಪತ್ನಿ ಚನ್ನಮ್ಮ ದೇವೇ ಗೌಡ, ಮಗ ಎಚ್ ಡಿ ರೇವಣ ಮತ್ತು ಇತರ ಕುಟುಂಬ ಸದಸ್ಯರು ಹಾಸನ ಜಿಲ್ಲೆಯ ಹೊಳೆನರಸೀಪರ ಪಟ್ಟಣದಲ್ಲಿನ ಬೂತ್ ನಂಬರ್ 244ರಲ್ಲಿ ಮತ ಚಲಾಯಿಸಿದರು.