Advertisement

ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ?

09:44 AM May 29, 2017 | Karthik A |

ಬೆಂಗಳೂರು: ರಾಜ್ಯ ವಿಧಾನಸಭೆಗೆ ಡಿಸೆಂಬರ್‌ನಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಈಗಿನಿಂದಲೇ ಸಜ್ಜಾಗುವಂತೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಈ ವರ್ಷಾಂತ್ಯಕ್ಕೆ ನಡೆಯುವ ಗುಜರಾತ್‌ ಚುನಾವಣೆ ಜತೆಗೆ ಕರ್ನಾಟಕ ವಿಧಾನಸಭೆಗೂ ಚುನಾವಣೆ ನಡೆಯಬಹುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸಹ ಹೇಳಿದ್ದರಾದರೂ ಈಗ ಯಡಿಯೂರಪ್ಪ ಕೂಡ ಡಿಸೆಂಬರ್‌ನಲ್ಲೇ ಚುನಾವಣೆ ಎದುರಾಗಲಿದೆ ಎಂದು ಹೇಳಿ ಭಿನ್ನಮತ ಬದಿಗೊತ್ತಿ ರಣಕಹಳೆ ಮೊಳಗಿಸಿರುವುದು ಕುತೂಹಲ ಮೂಡಿಸಿದೆ.

Advertisement

ಜತೆಗೆ ಕಾಂಗ್ರೆಸ್‌ನಲ್ಲೂ  ಇನ್ನೇನು ಚುನಾವಣೆ ಬಂದೇಬಿಟ್ಟಿತು ಎಂಬಂತೆ ರಾಜ್ಯ ಉಸ್ತುವಾರಿ ನಾಲ್ಕು ದಿನ ನಿರಂತರ ಸಭೆ ನಡೆಸಿದ್ದು, ಈಗ ಕೆಪಿಸಿಸಿ ಅಧ್ಯಕ್ಷರ ನೇಮಕ ಸಹಿತ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲದೆ ಕೇಂದ್ರ ನಾಯಕರು ರಾಜ್ಯದ ಎಲ್ಲ ಮುಖಂಡರನ್ನು ದಿಲ್ಲಿಗೆ ಕರೆಸಿ ಮಾತುಕತೆಯಲ್ಲಿ ತೊಡಗಿರುವುದು ಅವಧಿಪೂರ್ವ ಚುನಾವಣೆಯ ಮುನ್ಸೂಚನೆಯಂತಿದೆ. ಕರ್ನಾಟಕದಲ್ಲಿ ಅವಧಿಪೂರ್ವ ಚುನಾವಣೆ ನಡೆಯುವ ಸುಳಿವು ದೊರೆತಿರುವುದರಿಂದಲೇ ಆಡಳಿತಾರೂಢ ಕಾಂಗ್ರೆಸ್‌, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಸಮರೋಪಾದಿಯಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ. ಒಂದು ಸುತ್ತಿನ ಅಭ್ಯರ್ಥಿಗಳ ಆಯ್ಕೆ ಮಟ್ಟದ ಸಭೆಯನ್ನು ಮೂರೂ ಪಕ್ಷಗಳು ಮಾಡಿ ಮುಗಿಸಿವೆ. ಇವೆಲ್ಲವೂ ಚುನಾವಣೆ ಎದುರಾಗುವ ಲಕ್ಷಣಗಳೇ ಎಂದು ವಾಖ್ಯಾನಿಸಲಾಗುತ್ತಿದೆ.

ಬಿಎಸ್‌ವೈ ಏನೆಂದರು?: ರಾಜ್ಯ ಯುವ ಮೋರ್ಚಾ ಹಮ್ಮಿಕೊಂಡಿದ್ದ ಯುವ ಸಂಪರ್ಕ ಅಭಿಯಾನದ ಸಮಾರೋಪ ಮತ್ತು ಕಾರ್ಯಕಾರಿಣಿಯಲ್ಲಿ ಮಾತನಾಡಿದ ಯಡಿಯೂರಪ್ಪ, ‘ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಡಿಸೆಂಬರ್‌ನಲ್ಲೇ ಚುನಾವಣೆ ನಡೆಯಲಿದ್ದು, ಟಿಕೆಟ್‌ ಆಕಾಂಕ್ಷೆ ಬದಿಗಿಟ್ಟು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ’ ಎಂದಿದ್ದಾರೆ. ರವಿವಾರ ಒಂದೇ ದಿನ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ಮತ್ತು ರೈತ ಮೋರ್ಚಾ ಕಾರ್ಯಕಾರಿಣಿ ನಡೆಸಲಾಗಿದೆ. ಅಲ್ಲದೆ, ಇಡೀ ದಿನ ಯುವ ಸಂಪರ್ಕ ಅಭಿಯಾನ ಆಯೋಜಿಸಲಾಗಿತ್ತು. ಜತೆಗೆ ಪಕ್ಷದ ಮಾಧ್ಯಮ ಪ್ರಮುಖ್‌ಗಳಿಗೆ ಮಾಧ್ಯಮ ಕಾರ್ಯಾಗಾರವನ್ನೂ ಏರ್ಪಡಿಸಲಾಗಿತ್ತು. ಸಂಜೆ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ರಾಜ್ಯ ಪ್ರವಾಸ ಕಾರ್ಯಕ್ರಮಕ್ಕೆ ಎಲ್ಲರೂ ಬೆಂಬಲಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಮಾತ್ರವಲ್ಲದೆ ಜುಲೈ1 ಮತ್ತು 2ರಂದು ರಣನೀತಿ ಸಭೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next