Advertisement

ಭಟ್‌, ರಾಮದಾಸ್‌ಗೆ ಟಿಕೆಟ್‌; 3ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

06:00 AM Apr 21, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ 58 ಅಭ್ಯಥಿಗಳ ಮೂರನೇ ಹಂತದ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್‌ನಿಂದ ವಲಸೆ ಬಂದಿರುವ ವೈ.ಎನ್‌.ಗೋಪಾಲಕೃಷ್ಣ, ಜಿ.ವಿ.ಬಲರಾಂ, ವಿ.ಸೋಮಣ್ಣ ಪುತ್ರ ಡಾ.ಅರುಣ್‌ ಸೋಮಣ್ಣ, ಜನಾರ್ದನ ರೆಡ್ಡಿ ಸಹೋದರ ಕರುಣಾಕರ ರೆಡ್ಡಿ, ರಾಮಚಂದ್ರಗೌಡ ಪುತ್ರ ಸಪ್ತಗಿರಿ ಗೌಡ, ಗೋವಿಂದ ಕಾರಜೋಳ ಪುತ್ರ ಗೋಪಾಲ್‌ ಕಾರಜೋಳ‌ ಸೇರಿದಂತೆ ಇನ್ನೂ ಕೆಲ ಪ್ರಮುಖರಿಗೆ ಟಿಕೆಟ್‌ ನೀಡಿದೆ.

Advertisement

ಬಾಗೇಪಲ್ಲಿಯಲ್ಲಿ ನಟ ಸಾಯಿಕುಮಾರ್‌ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಮೊದಲ ಪಟ್ಟಿಯಲ್ಲಿ ಘೋಷಿಸಲಾಗಿದ್ದ ಕ್ಷೇತ್ರಗಳ ಪೈಕಿ ಕೆಜಿಎಫ್, ಮಧುಗಿರಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಆದರೆ, ವರುಣಾ, ಬಾದಾಮಿ, ಯಶವಂತಪುರ ಕ್ಷೇತ್ರಗಳ‌ ಟಿಕೆಟ್‌ ಇನ್ನೂ ಘೋಷಣೆ ಮಾಡಿಲ್ಲ.

ಕೆಜಿಎಫ್ನಲ್ಲಿ ವೈ.ಸಂಪಂಗಿ ಬದಲು ಅವರ ಪುತ್ರಿ ಅಶ್ವಿ‌ನಿ ಅವರಿಗೆ, ಮಧುಗಿರಿಯಲ್ಲಿ ಹುಲಿನಾಯ್ಕರ ಬದಲಿಗೆ  ಎಂ.ಪಿ. ಕುಮಾರಸ್ವಾಮಿ ಎಂಬವರಿಗೆ ಟಿಕೆಟ್‌ ನೀಡಲಾಗಿದೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ಮಾಜಿ ಸಚಿವ ಎ.ರಾಮದಾಸ್‌ ಅವರಿಗೇ ಟಿಕೆಟ್‌ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೋಪಾಲ್‌ ರಾವ್‌ಗೆ ಟಿಕೆಟ್‌ ನೀಡಲಾಗಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಡಾ.ಭರತ್‌ ಶೆಟ್ಟಿ ಎಂಬವರಿಗೆ ಟಿಕೆಟ್‌ ನೀಡಲಾಗಿದ್ದು, ಇವರಿಗೆ ರಾಷ್ಟ್ರೀಯ ಅಧ್ಯಕ್ಷ  ಅಮಿತ್‌ ಶಾ ಶಿಫಾರಸಿನಿಂದ ಟಿಕೆಟ್‌ ದೊರೆತಿದೆ ಎಂದು ಹೇಳಲಾಗಿದೆ. ಉಡುಪಿ ಕ್ಷೇತ್ರದಿಂದ ರಘುಪತಿ ಭಟ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

12 ಕ್ಷೇತ್ರಗಳಲ್ಲಿ ಯಾಕಿಲ್ಲ?
ಬಾದಾಮಿ, ಯಶವಂತಪುರ, ಬಿಟಿಎಂ ಲೇಔಟ್‌ ಸೇರಿ 12 ಕ್ಷೇತ್ರಗಳ ಟಿಕೆಟ್‌ ಬಿಜೆಪಿ ಬಿಡುಗಡೆ ಮಾಡಿಲ್ಲ. ಈ ಪೈಕಿ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಅಭ್ಯರ್ಥಿಯಾದರೆ ಅವರ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆ ಇದೆ. ಅದೇ ರೀತಿ ವರುಣಾದಲ್ಲೂ ಕಾದು ನೋಡಿ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಇನ್ನು ಯಶವಂತಪುರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಇರುವ ಕಾರಣ ಅಮಿತ್‌ ಶಾ ಜತೆ ಚರ್ಚಿಸಿ ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ.

ಜೆಡಿಎಸ್‌, ಕಾಂಗ್ರೆಸ್‌ ಬಾಕಿ
ಜೆಡಿಎಸ್‌ 24, ಕಾಂಗ್ರೆಸ್‌ ಐದು ಕ್ಷೇತ್ರಗಳಲ್ಲಿ ಇನ್ನು ಟಿಕೆಟ್‌ ಘೋಷಿಸಬೇಕಿದೆ. ಜೆಡಿಎಸ್‌ಗೆ ಕೆಲವೆಡೆ ಅಭ್ಯರ್ಥಿಗಳ ಕೊರತೆ ಇರುವುದರಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಪೂರ್ಣ ಪಟ್ಟಿ ಬಿಡುಗಡೆ ಬಳಿಕ ಅತೃಪ್ತರನ್ನು ಸೆಳೆಯಲು ಕಾಯುತ್ತಿದೆ ಎಂದು ಹೇಳಲಾಗಿದೆ.

Advertisement

ಟಿಕೆಟ್‌ ಸಿಗದೇ ಅಸಮಾಧಾನ
ಬಿಜೆಪಿ ಮೂರನೇ ಪಟ್ಟಿಯಲ್ಲಿ ಕಲಬುರಗಿ ಗ್ರಾಮಾಂತರ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ರೇವೂ ನಾಯಕ್‌ ಬೆಳಮಗಿ ಅವರಿಗೆ ಟಿಕೆಟ್‌ ತಪ್ಪಿದ್ದು ಅವರ ಬದಲು ಬಸವರಾಜ್‌ ಮಟ್ಟಿಮೋಡ್‌ ಅವರಿಗೆ ನೀಡಲಾಗಿದೆ. ಅದೇ ರೀತಿ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೃಷ್ಣ ಪಾಲೇಮಾರ್‌ ಅವರಿಗೂ ಟಿಕೆಟ್‌ ಕೈ ತಪ್ಪಿದೆ. ಅಲ್ಲಿ ಡಾ.ಭರತ್‌ಶೆಟ್ಟಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಇನ್ನು, ಪಾವಗಡದಲ್ಲಿ ಆಕಾಂಕ್ಷಿಯಾಗಿದ್ದ ಕೃಷ್ಣನಾಯಕ್‌ ಬದಲಿಗೆ ಸರ್ಕಾರಿ ಸೇವೆಗೆ ಗುಡ್‌ಬೈ ಹೇಳಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದೇ ಬಿಜೆಪಿ ಸೇರಿದ್ದ ಬಿ.ವಿ.ಬಲರಾಂ ಅವರಿಗೆ ಟಿಕೆಟ್‌ ನೀಡಲಾಗಿದೆ. ಹೀಗಾಗಿ, ಮೂರು ಕ್ಷೇತ್ರಗಳ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ.

ಕಾಂಗ್ರೆಸ್‌ 50-60 ಸೀಟು ಗೆಲ್ಲುವುದು ಕಷ್ಟ. ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲೂ ಗೆಲ್ಲಲ್ಲ, ಚಾಮುಂಡೇಶ್ವರಿಯಲ್ಲೂ ಗೆಲ್ಲಲ್ಲ. ನಾನು ಶಿಕಾರಿಪುರದಿಂದ 50 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ಶತಸಿದ್ಧ.
– ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಬಿಜೆಪಿ ಅಭ್ಯರ್ಥಿಗಳ  ಮೂರನೇ ಪಟ್ಟಿ
ಬೆಳಗಾವಿ ಉತ್ತರ- ಅನಿಲ್‌ ಬೆನಕೆ
ಬೆಳಗಾವಿ ದಕ್ಷಿಣ- ಅಭಯ್‌ ಪಾಟೀಲ್‌
ಖಾನಾಪುರ- ವಿಠಲ್‌ ಹಲಗೇಕರ್‌
ಕಿತ್ತೂರು-ಮಹಂತೇಶ್‌ ದೊಡ್ಡಗೌಡರ್‌
ಬಸವನಬಾಗೇವಾಡಿ-ಸಂಗರಾಜ ದೇಸಾಯಿ
ನಾಗಠಾಣಾ- ಡಾ| ಗೋಪಾಲ್‌ ಕಾರಜೋಳ
ಚಿತ್ತಾಪುರ- ವಾಲ್ಮೀಕಿ ನಾಯಕ್‌
ಚಿಂಚೋಳಿ- ಸುನಿಲ್‌ ವಲ್ಯಾಪುರೆ
ಕಲಬುರಗಿ (ಗ್ರಾ)- ಬಸವರಾಜ್‌ ಮಟ್ಟಿಮೋಡ್‌
ಹುಮ್ನಾಬಾದ- ಸುಭಾಷ್‌ ಕಲ್ಲೂರ್‌
ಬೀದರ್‌ ದಕ್ಷಿಣ- ಡಾ| ಶೈಲೇಂದ್ರ ಬಿಲ್ದಾಲೆ
ಮಾನ್ವಿ-ಮಾನಪ್ಪ ನಾಯಕ್‌
ಸಿಂಧನೂರು-ಕೊಲ್ಲ ಶೇಷಗಿರಿರಾವ್‌
ಕುಂದಗೋಳ- ಎಸ್‌.ಐ.ಚಿಕ್ಕನಗೌಡರ್‌
ಹು.ಧಾ. ಪೂರ್ವ- ಚಂದ್ರಶೇಖರ ಗೋಕಾಕ್‌
ಕುಮಟಾ-ದಿನಕರ ಶೆಟ್ಟಿ
ಹಾವೇರಿ-ನೆಹರೂ ಓಲೇಕಾರ
ರಾಣೆಬೆನ್ನೂರು- ಡಾ| ಬಸವರಾಜ್‌ ಕೇಲ್ಗಾರ್‌
ಕೂಡ್ಲಿಗಿ-ಎನ್‌.ವೈ.ಗೋಪಾಲಕೃಷ್ಣ
ಜಗಳೂರು-ಎಸ್‌.ವಿ.ರಾಮಚಂದ್ರ
ಹರಪನಹಳ್ಳಿ-ಕರುಣಾಕರ ರೆಡ್ಡಿ
ಹರಿಹರ-ಬಿ.ಪಿ.ಹರೀಶ್‌
ದಾವಣಗೆರೆ ದ.- ಯಶವಂತರಾವ್‌ ಜಾದವ್‌
ಮಾಯಕೊಂಡ-ಲಿಂಗಣ್ಣ
ಉಡುಪಿ- ಕೆ.ರಘುಪತಿ ಭಟ್‌
ಕಾಪು-ಲಾಲಾಜಿ ಮೆಂಡನ್‌
ತರೀಕೆರೆ- ಡಿ.ಎಸ್‌.ಸುರೇಶ್‌
ಕುಣಿಗಲ್‌- ಡಿ.ಕೃಷ್ಣಕುಮಾರ್‌
ಪಾವಗಡ-ಜಿ.ವಿ.ಬಲರಾಂ
ಗೌರಿಬಿದನೂರು-ಜೈಪಾಲ್‌ ರೆಡ್ಡಿ
ಬಾಗೇಪಲ್ಲಿ -ಸಾಯಿಕುಮಾರ್‌
ಚಿಂತಾಮಣಿ- ಎನ್‌.ಶಂಕರ್‌
ಶ್ರೀನಿವಾಸಪುರ-ವೆಂಕಟೇಗೌಡ
ಮುಳಬಾಗಿಲು- ಅಮರೀಶ್‌
ಪುಲಿಕೇಶಿನಗರ- ಸುಶೀಲಾ ದೇವರಾಜ್‌
ಸರ್ವಜ್ಞನಗರ-ಎಂ.ಎನ್‌.ರೆಡ್ಡಿ
ಗಾಂಧಿನಗರ- ಸಪ್ತಗಿರಿಗೌಡ
ಚಾಮರಾಜಪೇಟೆ-ಎಂ.ಲಕ್ಷ್ಮೀನಾರಾಯಣ
ದೇವನಹಳ್ಳಿ-ಕೆ.ನಾಗೇಶ್‌
ನೆಲಮಂಗಲ-ಎಂ.ವಿ.ನಾಗರಾಜ್‌
ಮದ್ದೂರು-ಸತೀಶ್‌
ಮೇಲುಕೋಟೆ- ಎಚ್‌.ಮಂಜುನಾಥ್‌
ಮಂಡ್ಯ-ಬಸವೇಗೌಡ
ನಾಗಮಂಗಲ-ಡಾ| ಪಾರ್ಥಸಾರಥಿ
ಕೆ.ಆರ್‌.ಪೇಟೆ-ಬೂಕಹಳ್ಳಿ ಮಂಜುನಾಥ್‌
ಶ್ರವಣಬೆಳಗೊಳ-ಶಿವನಂಜೇಗೌಡ
ಅರಸೀಕೆರೆ- ಡಾ| ಅರುಣ್‌ ಸೋಮಣ್ಣ
ಹೊಳೆನರಸೀಪುರ- ಎಚ್‌.ರಾಜುಗೌಡ
ಮಂಗಳೂರು ನಗರ ಉತ್ತರ-ಡಾ| ಭರತ್‌ ಶೆಟ್ಟಿ
ಮಂಗಳೂರು ನಗರ ದ.- ವೇದವ್ಯಾಸ್‌ ಕಾಮತ್‌
ಮಂಗಳೂರು-ಸಂತೋಷ್‌ ಕುಮಾರ್‌ ರೈ
ವಿರಾಜಪೇಟೆ-ಕೆ.ಜಿ.ಬೋಪಯ್ಯ
ಕೆ.ಆರ್‌.ನಗರ-ಶ್ವೇತಾ ಗೋಪಾಲ್‌
ಹುಣಸೂರು-ರಮೇಶ್‌ ಕುಮಾರ್‌
ಚಾಮುಂಡೇಶ್ವರಿ-ಗೋಪಾಲ್‌ರಾವ್‌
ಕೃಷ್ಣರಾಜ-ರಾಮದಾಸ್‌
ಚಾಮರಾಜ- ಎಲ್‌.ನಾಗೇಂದ್ರ
ಟಿ.ನರಸೀಪುರ-ಎಸ್‌.ಶಂಕರ್‌
ಬದಲು
ಕೆಜಿಎಫ್- ಎಸ್‌.ಅಶ್ವಿ‌ನಿ 
(ಮಾಜಿ ಶಾಸಕ ಸಂಪಂಗಿ ಮಗಳು)
ಮಧುಗಿರಿ- ಎಂ.ಪಿ.ಕುಮಾರಸ್ವಾಮಿ 
(ಮೊದಲು ಹುಲಿ ನಾಯ್ಕರ್‌ಗೆ ಘೋಷಿಸಲಾಗಿತ್ತು)

Advertisement

Udayavani is now on Telegram. Click here to join our channel and stay updated with the latest news.

Next