Advertisement

ಪಾರುಪತ್ಯಕ್ಕೆ ಗೌಡರ ಛಾಯಾಕದನ

06:40 AM Apr 21, 2018 | |

ಏನಾದರೂ ಮಾಡಿ ಹಾಸನದಲ್ಲಿ ಪ್ರಭಾವ ಬೆಳೆಸಿಕೊಳ್ಳುತ್ತಿರುವ ಸಚಿವ ಎ.ಮಂಜು ಅವರನ್ನು ಕಟ್ಟಿ ಹಾಕಬೇಕು ಎಂಬುದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಪಟ್ಟು… ಹೇಗಾದರೂ ಮಾಡಿ ಹಾಸನ ಜಿಲ್ಲೆಯಲ್ಲಿರುವ ದೇವೇಗೌಡರ ಪ್ರಭಾವ ಇಳಿಸಬೇಕು ಎಂಬುದು ಈಗಾಗಲೇ ಗೆದ್ದು ಸಚಿವ ಸ್ಥಾನವನ್ನೂ ಅಲಂಕರಿಸಿರುವ ಮತ್ತು ಒಕ್ಕಲಿಗ ಮುಖಂಡನೂ ಆಗಿರುವ ಎ.ಮಂಜು ಅವರ ಮಹಾಪಟ್ಟು… 

Advertisement

ಈ ಎರಡು ಕಾರಣಗಳಿಂದಾಗಿ ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಮಂಜು ಎದುರಾಳಿಯಾಗಿ ಜೆಡಿಎಸ್‌ನಿಂದ ಎ.ಟಿ.ರಾಮಸ್ವಾಮಿ ಸ್ಪರ್ಧಿಸುತ್ತಿ ದ್ದಾರೆ. ಈ ಕ್ಷೇತ್ರದಲ್ಲಿಯೇ ಮೂರು ಬಾರಿ ಶಾಸಕರಾಗಿದ್ದ ಅವರು ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 

ಈ ಬಾರಿ ಎ. ಮಂಜು ಗೆದ್ದರೆ ಅದು ಹ್ಯಾಟ್ರಿಕ್‌ ಗೆಲುವು. ಹಾಗೆಯೇ ಅವರ ಪ್ರತಿಸ್ಪರ್ಧಿ ರಾಮ ಸ್ವಾಮಿ ವಿಜಯಿಯಾದರೂ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಶಾಸಕರೆಂಬ ದಾಖಲೆಯಾಗಲಿದೆ.  ಮಂಜು ಹಾಗೂ ರಾಮಸ್ವಾಮಿ ಈಗಾಗಲೇ ಮೂರು ಬಾರಿ ಶಾಸಕರಾಗಿ ಪ್ರತಿನಿಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್‌.ಯೋಗಾರಮೇಶ್‌ ಎರಡನೇ ಬಾರಿ ಕಣಕ್ಕಿಳಿಯುತ್ತಿದ್ದು ಚೊಚ್ಚಲ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ.  ಯೋಗಾರಮೇಶ್‌ ಸ್ಪರ್ಧೆ ಕಳೆದ ಬಾರಿಯ ಚುನಾವಣೆಯಲ್ಲಿ ರಾಮಸ್ವಾಮಿ ಗೆಲುವಿಗೆ ಅಡ್ಡಿಯಾಗಿತ್ತು ಎಂದು ವಿಶ್ಲೇಷಿಸಲಾಗಿತ್ತು. 

ಕುರುಬ ಹಾಗೂ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಹಳ್ಳಿಮೈಸೂರು ಹೋಬಳಿಯಲ್ಲಿ ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವರೆಂಬ ಕಾರಣಕ್ಕೆ ಮಂಜು ಅವರನ್ನು ಕುರುಬ ಸಮುದಾಯ ಬೆಂಬಲಿಸಿತ್ತು. 

Advertisement

ಈ ಬಾರಿ ಕುರುಬ ಮುಖಂಡರು ಮಂಜು ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಮುದಾಯದ ಯುವ ಮುಖಂಡ ಹಳ್ಳಿಮೈಸೂರಿನ ಎಂ.ಕೆ.ಶೇಷೇಗೌಡ ಅವರನ್ನು ಎ.ಮಂಜು ಅವರ ವಿರುದ್ಧ  ಸ್ಪರ್ಧೆಗಿಳಿಸುತ್ತಿದ್ದಾರೆ. ಅನೇಕ ಪ್ರಭಾವಿ ಕುರುಬ ಮುಖಂಡರು ಜೆಡಿಎಸ್‌‌ ಸೇರಿರುವುದು ಅವರಿಗೆ ತಲೆನೋವು. ಜೆಡಿಎಸ್‌ನ ಹಿರಿಯ ಮುಖಂಡ ದೊಡ್ಡಮಗ್ಗೆ ರಂಗಸ್ವಾಮಿ ಅವರು ಕೆಲ ದಿನಗಳಿಂದ ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಳ್ಳದೆ ಪಕ್ಷ ಸಂಘಟನೆಯಿಂದ ದೂರ ಉಳಿದಿದ್ದರು. ಅವರ ಸಹೋದರ ನಿವೃತ್ತ ಐಎಎಸ್‌ ಅಧಿಕಾರಿ ರಾಮೇಗೌಡ  ಬಿಜೆಪಿಯಿಂದ ಸ್ಪರ್ಧಿಸುವ ಪ್ರಯತ್ನ ನಡೆಸಿದ್ದರು. ಆದರೆ ಅವರಿಗೆ ಬಿಜೆಪಿ ಟಿಕೆಟ್‌ ಸಿಗಲಿಲ್ಲ. ಯೋಗಾರಮೇಶ್‌ ಅವರಿಗೆ ಟಿಕೆಟ್‌ ಘೋಷಣೆಯಾಗಿದೆ. ದೊಡ್ಡಮಗ್ಗೆ ರಂಗಸ್ವಾಮಿ ಕುಟುಂಬದವರೂ ಈಗ ಜೆಡಿಎಸ್‌ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ಎ.ಮಂಜು ಅವರಿಗೆ ಹಿಡಿದ ಕೆಲಸ ಮಾಡಿಯೇ ತೀರುವ ಬದ್ಧತೆ ಇಲ್ಲ. ಎರಡೂವರೆ ವರ್ಷ ಅಧಿಕಾರದಲ್ಲಿದ್ದರೂ ಗುರುತಿಸುವಂಥ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಆಗಿಲ್ಲ ಎಂಬ ಆರೋಪವಿದೆ. ಎದುರಾಳಿ ಎ.ಟಿ.ರಾಮಸ್ವಾಮಿ ಅವರು ಪ್ರಾಮಾಣಿಕ, ಬದ್ಧತೆಯಿರುವ ರಾಜಕಾರಣಿ ಎಂಬ ಭಾವನೆಯಿದೆ. 

ಕ್ಷೇತ್ರದಲ್ಲಿ  ಬಿಜೆಪಿಗೆ ಭದ್ರ ನೆಲೆ ಇಲ್ಲ. ಯೋಗಾರಮೇಶ್‌ ಅವರು ಸ್ವಂತ ವರ್ಚಸ್ಸಿನಿಂದ ಮತ ಸೆಳೆಯಬೇಕಾಗಿದೆ. ಮತ ಸೆಳೆಯಬಹುದಾದ ವರ್ಚಸ್ವೀ ಬಿಜೆಪಿ ನಾಯಕರೂ ಈ ಕ್ಷೇತ್ರದಲ್ಲಿ ಯಾರೂ ಇಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಎ.ಟಿ.ರಾಮಸ್ವಾಮಿ ಅವರು ಸದ್ಯದ ಮಟ್ಟಿಗೆ ಪ್ರಬಲರಾಗಿ ಕಾಣುತ್ತಿದ್ದಾರೆ. ಅವರ ವೇಗವನ್ನು ಎ.ಮಂಜು ಹಾಗೂ ಯೋಗಾರಮೇಶ್‌ ಯಾವ ಮಟ್ಟಿಗೆ ತಡೆಯುವರೆಂಬ ಕುತೂಹಲ ಕ್ಷೇತ್ರದಲ್ಲಿದೆ.

ಮಂಜು ಚಿಂತೆ
ಕ್ಷೇತ್ರದ ಪ್ರಮುಖ ಮುಖಂಡರ ಪಡೆ ಎ.ಟಿ.ರಾಮಸ್ವಾಮಿ  ಜೊತೆಗಿದೆ. ಎಚ್‌.ಡಿ.ದೇವೇಗೌಡ, ಎಚ್‌.ಡಿ.ರೇವಣ್ಣ ಪ್ರಭಾವ ದಟ್ಟವಾಗಿದೆ. ಈ ಬೆಳವಣಿಗೆಗಳಿಂದ ಎ.ಟಿ.ರಾಮಸ್ವಾಮಿ ದಿನೇ ಬಲ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಶಿವರಾಂ ಸೇರಿ ಜಿಲ್ಲೆಯ ಯಾವ ಕಾಂಗ್ರೆಸ್‌ ಮುಖಂಡರೂ ಎ.ಮಂಜು ಪರವಾಗಿ ಪ್ರಚಾರ ಮಾಡಿ ಮತದಾರರನ್ನು ಸೆಳೆಯುವ ಪರಿಸ್ಥಿತಿ ಇಲ್ಲ. ಇದು ಎ.ಮಂಜು ಅವರನ್ನು ಚಿಂತೆಗೀಡು ಮಾಡಿವೆ.

2500 ಕೋಟಿ  ರೂ.ಗಳ ಅನುದಾನ ತಂದಿ ರುವೆ. ಇಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿದೆ. ಇದು ಈ ಚುನಾವಣೆಯಲ್ಲಿ ನನಗೆ ಶ್ರೀರಕ್ಷೆ.
– ಎ.ಮಂಜು, ಸಚಿವ, ಕಾಂಗ್ರೆಸ್‌ ಅಭ್ಯರ್ಥಿ

ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಲೂಟಿ ಮಾಡಿದ್ದಾರೆ. ಹಣಬಲದ ಹಿಂದೆ ಮತದಾರರು ಹೋಗುವುದಿಲ್ಲ.
– ಎ.ಟಿ.ರಾಮಸ್ವಾಮಿ, ಜೆಡಿಎಸ್‌ ಅಭ್ಯರ್ಥಿ

ಕ್ಷೇತ್ರದ ಜನರು ಹೊಸ ಮುಖದ ಕಾತುರ ದಲ್ಲಿದ್ದಾರೆ. ನನ್ನ ಎದುರಾಳಿ ಗಳಾಗಿರುವವರು ಮೂರು ಬಾರಿ ಶಾಸಕರಾಗಿದ್ದಾರೆ. 
– ಎಚ್‌.ಯೋಗಾರಮೇಶ್‌, ಬಿಜೆಪಿ ಅಭ್ಯರ್ಥಿ

– ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next