Advertisement

ಕನ್ನಡ ವಿರೋಧಿ ವರ್ತನೆ ವಿರುದ್ಧ ಕರ್ನಾಟಕ ಸೇನಾಪಡೆ ಪ್ರತಿಭಟನೆ

09:23 PM Aug 03, 2019 | Lakshmi GovindaRaj |

ಚಾಮರಾಜನಗರ: ನಗರದ ಇಂಡಿಯನ್‌ ಬ್ಯಾಂಕ್‌ ವ್ಯವಸ್ಥಾಪಕರು ಬ್ಯಾಂಕ್‌ಗೆ ಬರುವ ಗ್ರಾಹಕರನ್ನು ಹಿಂದಿಯಲ್ಲಿ ಮಾತನಾಡಿ ಎನ್ನುವ ಮೂಲಕ ಕನ್ನಡ ವಿರೋಧಿ ವರ್ತನೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿದರು. ನಗರದ ಭ್ರಮರಾಂಬ ಬಡಾವಣೆಯ ಇಂಡಿಯನ್‌ ಬ್ಯಾಂಕ್‌ ಎದುರು ಕರ್ನಾಟಕ ಸೇನಾಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧ ಧಿಕ್ಕಾರ ಕೂಗಿ ತರಾಟೆಗೆ ತೆಗೆದುಕೊಂಡರು.

Advertisement

ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ನಗರದ ಇಂಡಿಯನ್‌ ಬ್ಯಾಂಕ್‌ನ ವ್ಯವಸ್ಥಾಪಕರು ಬ್ಯಾಂಕ್‌ಗೆ ಬರುವ ಕನ್ನಡಿಗರ ಜೊತೆ ಕನ್ನಡದಲ್ಲಿ ವ್ಯವಹರಿಸುತ್ತಿಲ್ಲ. ಕನ್ನಡದಲ್ಲಿ ಮಾತನಾಡಿದರೆ, ಹಿಂದಿಯಲ್ಲಿ ಉತ್ತರ ನೀಡುತ್ತಾರೆ. ತನಗೆ ಕನ್ನಡ ಅರ್ಥವಾಗುವುದಿಲ್ಲ. ಹಿಂದಿಯಲ್ಲಿ ಮಾತನಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಕನ್ನಡದಲ್ಲಿ ಮಾತನಾಡಲು ಗ್ರಾಹಕರು ಒತ್ತಾಯಿಸಿದರೆ, ತನಗೆ ಬರುವುದಿಲ್ಲ. ನಮ್ಮ ಪ್ರಧಾನ ಕಚೇರಿಗೆ ದೂರು ನೀಡಿ ಎಂಬ ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

ಗಡಿ ಕನ್ನಡಿಗರ ಪ್ರದೇಶವಾದ ಚಾಮರಾಜನಗರದಲ್ಲಿ ಇಂಡಿಯನ್‌ ಬ್ಯಾಂಕ್‌ ವ್ಯವಸ್ಥಾಪಕರು ಬ್ಯಾಂಕ್‌ಗೆ ಬರುವ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಿಲ್ಲ. ಕನ್ನಡ ಭಾಷೆಗೆ ಅಗೌರವ ತರುವ ಕೆಲಸ ಮಾಡುತ್ತಿದ್ದಾರೆ. ಈ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೀಡ್‌ ವ್ಯವಸ್ಥಾಪಕರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಇಂಡಿಯನ್‌ ಬ್ಯಾಂಕ್‌ ವ್ಯವಸ್ಥಾಪಕರು, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ಇನ್ನು ಒಂದು ವಾರದೊಳಗೆ ಬ್ಯಾಂಕ್‌ ವ್ಯವಸ್ಥಾಪಕರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಸೇನಾಪಡೆ ಗೌರವ ಅಧ್ಯಕ್ಷ ಶಾ.ಮುರಳಿ ಮಾತನಾಡಿ, ಈ ಬ್ಯಾಂಕ್‌ ವ್ಯವಸ್ಥಾಪಕರು ಕರ್ನಾಟಕ ಶಾಖೆಯಲ್ಲಿ ಕೆಲಸ ಮಾಡುವಾಗ, ಕನ್ನಡ ಕಲಿಯಬೇಕು. ಗ್ರಾಹಕರೊಡನೆ ಅವರ ಭಾಷೆಯಲ್ಲಿ ವ್ಯವಹರಿಸಬೇಕು. ಅದು ಬಿಟ್ಟು ತಾನು ಉತ್ತರಪ್ರದೇಶದಿಂದ ಬಂದಿರುವುದಾಗಿಯೂ, ಹಿಂದಿಯಲ್ಲೇ ಮಾತನಾಡುವುದಾಗಿ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆಂದು ಟೀಕಿಸಿದರು.

ಕೇಂದ್ರ-ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಸಾಲ ಸೌಲಭ್ಯಗಳನ್ನು ಬ್ಯಾಂಕ್‌ ಮೂಲಕ ನೀಡಲಾಗುತ್ತಿದೆ. ಅದೇ ರೀತಿಯಲ್ಲೂ ಇಂಡಿಯನ್‌ ಬ್ಯಾಂಕ್‌ಗೆ ಸಹಾಯಧನ ವರ್ಗಾವಣೆ ಮಾಡಿದ್ದರೂ ಬ್ಯಾಂಕ್‌ ವ್ಯವಸ್ಥಾಪಕರು ಫ‌ಲಾನುಭವಿಗಳಿಗೆ ಸಹಾಯಧನ ನೀಡದೇ ಸತಾಯಿಸುತ್ತಿದ್ದಾರೆ. ಇದರಿಂದ ಫ‌ಲಾನುಭವಿಗಳಿಗೆ ತುಂಬಾ ಸಮಸ್ಯೆಯಾಗಿದೆ. ಬ್ಯಾಂಕ್‌ಗೆ ಬರುವ ಗ್ರಾಹಕರೊಂದಿಗೆ ಅತ್ಯಂತ ಬೇಜಾವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ.

Advertisement

ಜಿಲ್ಲಾಡಳಿತ ಕೂಡಲೇ ಇಂಡಿಯನ್‌ ಬ್ಯಾಂಕ್‌ ವ್ಯವಸ್ಥಾಪಕರನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ, ನಗರಸಭಾ ಮಾಜಿ ಸದಸ್ಯ ಸಿ.ಕೆ.ಮಂಜುನಾಥ್‌, ಸ್ವಾಮಿ, ಬಿ.ಎಲ್‌.ಮಹದೇವಸ್ವಾಮಿ, ಶಿವಣ್ಣ, ಗುಡ್ಡಯ್ಯ, ಕೇಶವ, ವೀರಭದ್ರ, ತಾಂಡವಮೂರ್ತಿ, ರವಿಚಂದ್ರಪ್ರಸಾದ್‌ ಕಹಳೆ, ಚಾ.ರಾ.ಕುಮಾರ್‌, ದೊರೆ, ಪಾಪು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next