Advertisement
ಕಾರ್ಕಳ ತಾಲೂಕಿನಲ್ಲೂ ಈ ಸಮಸ್ಯೆ ತೀವ್ರವಾಗಿದೆ. ಕಾರ್ಕಳ ತಾಲೂಕು ಒಂದರಲ್ಲಿಯೇ ಸಾವಿರಾರು ಎಕ್ರೆ ಆಸ್ತಿ ಮೃತಪಟ್ಟವರ ಹೆಸರಲ್ಲಿದೆ. ಈ ಸಮಸ್ಯೆಯನ್ನು ಸರಿಪಡಿಸಲು ಹತ್ತಾರು ದಾಖಲೆ, ಹಲವು ಇಲಾಖೆಗಳ ಮೆಟ್ಟಿಲು ಹತ್ತಬೇಕಾದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯು ಜನ ಸಮಾನ್ಯರಿಗೆ ಒಂದೆ ವೇದಿಕೆಯಡಿ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ ಪೌತಿ ಖಾತೆ ಆಂದೋಲನ ಹಮ್ಮಿಕೊಂಡಿದೆ. ಕಾರ್ಕಳ ತಾಲೂಕಿನಲ್ಲಿ ನವೆಂಬರ್ 11ರಂದು ಪೌತಿ ಖಾತೆ ಆಂದೋಲನ ನಡೆಯಲಿದೆ
ಆಸ್ತಿ ಮಾಲಕರು ನಿಧನ ಹೊಂದಿದ ಬಳಿಕ ಜಮೀನು ವರ್ಗಾವಣೆ ಮಾಡಿಕೊಳ್ಳದಿದ್ದರೆ ಜಮೀನುಗಳ ಸ್ವಾಧೀನ ಹೊಂದಿದ್ದರೂ ಉಪಯೋಗವಿಲ್ಲದಂತಾಗುತ್ತದೆ.
ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ ವಿಮೆಯಾಗಲಿ ಅಥವಾ ನಷ್ಟ ಪರಿಹಾರವಾಗಲೀ ಸಿಗುವುದಿಲ್ಲ. ಬ್ಯಾಂಕ್ಗಳಿಂದ ಸಾಲ – ಸೌಲಭ್ಯ ಪಡೆಯಲು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
ಮುಂದೆ ಹೊಸ ಕಾನೂನು, ಭೂ ದಾಖಲೆ ನಿಯಮಾವಳಿಗಳು ಬಂದು ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ. ಹಾಗಾಗಿ ಆಸ್ತಿಯನ್ನು ಪೌತಿ ಖಾತೆಯಡಿ ಬದಲಾವಣೆ ಮಾಡಿಕೊಳ್ಳಲು ಮುತುವರ್ಜಿ ವಹಿಸಬೇಕಿದೆ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.
Related Articles
ಮರಣ ಹೊಂದಿದ ವ್ಯಕ್ತಿ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಹೆಸರಿಗೆ ಖಾತೆ ವರ್ಗಾವಣೆ ಮಾಡುವುದು ‘ಪೌತಿ ಖಾತೆ’ ಎನ್ನಲಾಗುತ್ತದೆ. ಜಮೀನು ಮಾಲಕ ನಿಧನ ಹೊಂದಿದ ಅನಂತರ ಸರಕಾರದ ಸೂಚಿಸಿರುವ ಮೂಲಗಳ ಪ್ರಕಾರ ಮರಣ ಹೊಂದಿದ ಮಾಲಕ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಪಡೆದು ನಮೂನೆ-1 ರಲ್ಲಿ ಅರ್ಜಿ ಸಲ್ಲಿಸಬೇಕು. ಪೌತಿ ಖಾತೆ ಮಾಡಿಕೊಳ್ಳಲು ಅರ್ಜಿ ನಮೂನೆ-1 ಅರ್ಜಿ ನಾಡಕಚೇರಿಗಳಲ್ಲಿ ಸಿಗುತ್ತದೆ. ವಂಶ ವೃಕ್ಷ ಇಲ್ಲದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿ ನೋಟರಿ ಮಾಡಿ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ದಾಖಲಿಸಬಹುದು. ಉದಾಹರಣೆಗೆ, ಒಂದು ಕುಟುಂಬದಲ್ಲಿ ಮೂರ್ನಾಲ್ಕು ಮಕ್ಕಳಿದ್ದರೆ ಯಾರ ಹೆಸರಿನ ಮೇಲೆ ಎಷ್ಟು ಜಮೀನು ವರ್ಗಾವಣೆ ಮಾಡಬೇಕೆಂಬ ವಿವರ ಅರ್ಜಿಯಲ್ಲಿರಬೇಕು. ಜಮೀನು ದಾಖಲೆಗಳಲ್ಲಿ ಹೆಸರು, ಹಿಸ್ಸಾ, ನಂಬರ್ ತಪ್ಪಾಗಿದ್ದರೆ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು.
Advertisement
ಪೌತಿ ಖಾತೆಗೆ ಬೇಕಾದ ದಾಖಲೆಗಳುಮರಣ ಪ್ರಮಾಣ ಪತ್ರ, ವಂಶಾವಳಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಓಟರ್ ಐಡಿ, ರೇಷನ್ ಕಾರ್ಡ್, ಇತ್ತೀಚಿನ ಪಹಣಿ, ಮ್ಯುಟೇಷನ್. ಆಧಾರ್ ಸೀಡಿಂಗ್ನಲ್ಲಿ ಪತ್ತೆ
ಬಹಳಷ್ಟು ರೈತರು ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿಲ್ಲ ಎಂಬುದು ಇತ್ತೀಚೆಗೆ ಸರಕಾರ ನಡೆಸಿದ ಆಧಾರ್ ಸೀಡಿಂಗ್ ಪರಿಶೀಲನೆ ವೇಳೆ ಕಂದಾಯ ಇಲಾಖೆ ಪತ್ತೆ ಮಾಡಿದೆ. ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ 53,783 ಖಾತೆಗಳು ಮೃತರ ಹೆಸರಿನಲ್ಲೇ ಇವೆ. ಇದರಲ್ಲಿ ಒಂದು ಆರ್ಟಿಸಿಯಲ್ಲಿ ಒಬ್ಬರ ಹೆಸರು ಇದ್ದರೂ ಇರಬಹುದು, ಮೂರ್ನಾಲ್ಕು ಹೆಸರಿರುವ ಸಾಧ್ಯತೆಯೂ ಇದೆ. ಬಹುತೇಕರಿಗೆ ಮಾಹಿತಿ ಕೊರತೆ
ಆಸ್ತಿಯ ಮೂಲ ಮಾಲಕರ ಮರಣ ಪ್ರಮಾಣ ಪತ್ರ ಇಲ್ಲದೇ ಜಮೀನಿನ ಖಾತೆ ವರ್ಗಾವಣೆ ಆಗುವುದಿಲ್ಲ. ಪೂರ್ವಿಕರ ಮರಣ ಪ್ರಮಾಣ ಪತ್ರಗಳು ಸಿಗದೆ ಆಸ್ತಿ ವರ್ಗಾವಣೆ ಮಾಡಿಕೊಂಡಿಲ್ಲ ಎಂದು ಕೆಲವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ನಿಯಮದ ಪ್ರಕಾರ ಗ್ರಾಮಗಳಲ್ಲಿ ವ್ಯಕ್ತಿ ನಿಧನರಾದ 28 ದಿನದೊಳಗೆ ಸಂಬಂಧಪಟ್ಟ ಗ್ರಾಮ ಲೆಕ್ಕಿಗರೇ ಮರಣ ಪ್ರಮಾಣ ಪತ್ರ ನೀಡಬೇಕು. ಒಂದು ವರ್ಷದೊಳಗಿದ್ದರೆ ತಹಶೀಲ್ದಾರ್ ನೀಡಬಹುದು. ಒಂದು ವರ್ಷ ಮೇಲ್ಪಟ್ಟ ಪ್ರಕರಣಗಳಿದ್ದರೆ ಜೆಎಂಎಫ್ ನ್ಯಾಯಾಲಯದ ಮೂಲಕ ದಾವೆ ಹೂಡಿ ಮರಣ ಪ್ರಮಾಣ ಪತ್ರ ಪಡೆದು ಪೌತಿ ಖಾತೆಗೆ ಅರ್ಜಿ ಸಲ್ಲಿಸಬೇಕು. ನ. 11ರಂದು ಆಂದೋಲನದಲ್ಲಿ ಭಾಗವಹಿಸಿ
ತಾಲೂಕಿಗೆ ಸಂಬಂಧಿಸಿದ ಮರಣ ಹೊಂದಿದ ಖಾತದಾರರ ಹೆಸರಿನ ಪಹಣಿಗಳ ಪೌತಿ ಖಾತೆಯ ಬಗ್ಗೆ ಸ್ಥಳದಲ್ಲೆ ಇತ್ಯರ್ಥಪಡಿಸಲು ನ. 11ರಂದು ಕಾರ್ಕಳ ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಕುಂದಾಪುರ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಪೌತಿ ಖಾತೆ ಆಂದೋಲನ ನಡೆಯಲಿದೆ. ಬಹುತೇಕರು ಅನುಭವಿಸುತ್ತಿರುವ ಕಿರಿಕಿರಿ ತಪ್ಪಿಸಲು ಆಂದೋಲನ ಹಮ್ಮಿಕೊಳ್ಳಲಾಗಿದೆ.
– ಡಾ| ಪ್ರತಿಭಾ ಆರ್., ತಹಶೀಲ್ದಾರ್, ಕಾರ್ಕಳ -ಅವಿನ್ ಶೆಟ್ಟಿ