Advertisement

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

02:42 PM Dec 19, 2024 | Team Udayavani |

ಕಾರ್ಕಳ: ಮಂಗಳೂರು- ಕಾರ್ಕಳ ಚತುಷ್ಪಥ ರಸ್ತೆ ಕಾಮಗಾರಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಹೆದ್ದಾರಿಯಲ್ಲಿ ಕಾರ್ಕಳ ವ್ಯಾಪ್ತಿಗೆ ಬರುವ ಪುಲ್ಕೇರಿ ಬೈಪಾಸ್‌-ಮುರತ್ತಂಗಡಿವರೆಗೆ 4.5 ಕಿ. ಮೀಟರ್‌ ವ್ಯಾಪ್ತಿಯಲ್ಲಿ ಒಂದೇ ಒಂದು ಬಸ್‌ ತಂಗುದಾಣವಿಲ್ಲದೆ ಜನರು ಭಾರಿ ಸಮಸ್ಯೆಗೆ ಸಿಲುಕಿದ್ದಾರೆ.

Advertisement

ಈ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ವಾಹನಗಳಲ್ಲಿ ಓಡಾಟ ಮಾಡುವರಿಗೆ ಡೈವರ್ಶನ್‌ ಕಿರಿಕಿರಿಯಾದರೆ, ಬಸ್‌ನಲ್ಲಿ ಓಡಾಡುವ ವಿದ್ಯಾರ್ಥಿಗಳು, ಹಿರಿಯರಿಗೆ, ಮಹಿಳೆಯರಿಗೆ ಬಸ್‌ ತಂಗುದಾಣ ಇಲ್ಲದಿರುವುದು ದೊಡ್ಡ ಸಮಸ್ಯೆ. ಹಿಂದೆ ಈ ವ್ಯಾಪ್ತಿಯಲ್ಲಿ ಏಳು ತಂಗುದಾಣಗಳಿದ್ದವು. ಈಗ ಒಂದೂ ಇಲ್ಲ!

ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಮಳೆಯಲ್ಲಿ ನೆನೆದುಕೊಂಡೇ ಸಾರ್ವಜನಿಕರು ಬಸ್‌ಗೆ ಕಾದಿದ್ದಾರೆ. ಕೆಸರು ಮಣ್ಣಿನಲ್ಲಿ ಪರದಾಡಿದ್ದಾರೆ. ಇದೀಗ ಬೇಸಗೆಯಲ್ಲಿ ಧೂಳಿನ ವಾತಾವರಣದಿಂದ ಬಿಸಿಲ ದಗೆಯಲ್ಲಿ ಬಸ್‌ಗಾಗಿ ಕಾಯುವ ಪರಿಸ್ಥಿತಿ ಇಲ್ಲಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಾರ್ಕಳಕ್ಕೆ ಸಂಬಂಧಿಸಿ ನಾಲ್ಕುವರೆ ಕಿ.ಮೀ. ರಸ್ತೆ ಮಾತ್ರವಾದರೂ ಸಮಸ್ಯೆ ಮಾತ್ರ ಹಲವಾರು ಇದೆ. ಅದರಲ್ಲಿಯೂ ಬಸ್‌ ನಿಲ್ದಾಣದಂತ ಕನಿಷ್ಠ ಮೂಲ ಸೌಕರ್ಯವೂ ಇಲ್ಲದೆ ಜನರು ಹಲವಾರು ವರ್ಷಗಳಿಂದ ಕಷ್ಟಪಡುವಂತಾಗಿದೆ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮಂಗಳೂರು, ಕಾರ್ಕಳ, ಉಡುಪಿ ಕಡೆಗೆ ತೆರಳುವ ಸಾಕಷ್ಟು ಮಂದಿ ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿ ಬಸ್‌ಗಾಗಿ ಕಾಯುತ್ತಾರೆ.

Advertisement

ಸಾರ್ವಜನಿಕ ಹಿತದೃಷ್ಟಿಯಿಂದ ಹೆದ್ದಾರಿ ಪ್ರಾಧಿಕಾರ ಪರ್ಯಾಯವಾಗಿ ತಾತ್ಕಲಿಕ ಬಸ್‌ ನಿಲ್ದಾಣ ರೂಪಿಸಲು ಕ್ರಮ ವಹಿಸಬೇಕು ಎಂದು ಸಾಣೂರಿನ ಪ್ರಸಾದ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಏಳು ಕಡೆ ಬಸ್‌ ತಂಗುದಾಣವಿತ್ತು
ಮುರತ್ತಂಗಡಿ ಇರ್ವತ್ತೂರು ರಸ್ತೆ ತಿರುವಿನ ಬಳಿ ಬಾಲಾಂಜನೇಯ ಯುವಕ ಸಂಘ ಬಸ್‌ ನಿಲ್ದಾಣ ನಿರ್ಮಿಸಿತ್ತು, ಸಾಣೂರಿನಲ್ಲಿ ಯುವಕರ ಸಂಘದ ವತಿಯಿಂದ ಬಸ್‌ ನಿಲ್ದಾಣ ರೂಪಿಸಲಾಗಿತ್ತು, ಮುರತ್ತಂಗಡಿ ಹೈಸ್ಕೂಲು ಬಳಿ ಬ್ಯಾಂಕ್‌ ಆಫ್ ಬರೋಡ ಬಸ್‌ ನಿಲ್ದಾಣ ಕಟ್ಟಿಸಿತ್ತು. ಎರಡು ಬದಿಗಳಲ್ಲಿ 7ಕ್ಕೂ ಅಧಿಕ ಬಸ್‌ ನಿಲ್ದಾಣಗಳನ್ನು ಹೆದ್ದಾರಿ ಕಾಮಗಾರಿಗೆ ಪೂರಕವಾಗಿ ಕೆಡವಲಾಗಿದೆ. ಆದರೆ, ಎಲ್ಲಿಯೂ ಹೊಸದಾಗಿ ನಿರ್ಮಿಸಿಲ್ಲ. ಸಾರ್ವಜನಿಕರು ಸಾಕಷ್ಟು ಬಾರಿ ಮನವಿ ಮಾಡಿದರೂ ಸೂಕ್ತ ಸ್ಪಂದನೆ ಇಲ್ಲ.

ಬಸ್‌ ನಿಲ್ದಾಣ ವ್ಯವಸ್ಥೆಯಾಗಲಿ
ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಬಾಲಾಂಜನೇಯ ಯುವಕ ಸಂಘದ ವತಿಯಿಂದ ಬಸ್‌ ನಿಲ್ದಾಣ ಕಟ್ಟಿದ್ದೆವು. ಹೆದ್ದಾರಿ ಕಾಮಗಾರಿ ವೇಳೆ ತೆರವು ಮಾಡಲಾಯಿತು. ಜನರಿಗೆ ಸಮಸ್ಯೆಯಾಗದಂತೆ ತಾತ್ಕಾಲಿಕ ನೆಲೆಯಲ್ಲಿಯಾದರೂ ಬಸ್‌ ನಿಲ್ದಾಣ ವ್ಯವಸ್ಥೆ ಮಾಡಿಕೊಡಬೇಕು. ಕಾಮಗಾರಿ ವ್ಯವಸ್ಥಿತವಾಗಿ ಶೀಘ್ರ ಪೂರ್ಣಗೊಳಿಸಿ ಅನಂತರ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣವಾಗಬೇಕು.
-ಮಾಧವ ಭಂಡಾರ್ಕರ್‌, ಮುರತ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next