Advertisement

ಕಾರ್ಕಳ ತಾ| 10 ಸಾವಿರ ಅನಧಿಕೃತ ಮನೆಗಳು…!

01:00 AM Feb 26, 2019 | Harsha Rao |

ಬೆಳ್ಮಣ್‌: ಕಾರ್ಕಳ ತಾಲೂಕಿನ ಪುರಸಭೆ ಸೇರಿದಂತೆ 34 ಗ್ರಾ.ಪಂ. ವ್ಯಾಪ್ತಿಯ ಸುಮಾರು 10 ಸಾವಿರಕ್ಕೂ ಮಿಕ್ಕಿದ ಮನೆಗಳಿಗೆ ತೆರವು ಭೀತಿ ಉಂಟಾಗಿದ್ದು, 94ಸಿ ಹಾಗೂ 94 ಸಿಸಿಯಡಿಯಲ್ಲಿ ಅರ್ಜಿ ಸಲ್ಲಿಸಿ ಮನೆ ಕಟ್ಟಿಕೊಂಡ ಫ‌ಲಾನುಭವಿಗಳು ಇದೀಗ ನೆಲೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

Advertisement

ಬೆಳ್ಮಣ್‌ನಿಂದ ಪ್ರಾರಂಭ
ಬೆಳ್ಮಣ್‌ ಗ್ರಾ.ಪಂ.ನಿಂದ ಈ ತೆರವು ಕಾರ್ಯಚರಣೆಗೆ ಚಾಲನೆ ದೊರೆತಿದ್ದು ಈ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸರ್ವೇ ನಂಬ್ರ 454 ಸರಕಾರಿ ಜಮೀನಿನಲ್ಲಿ ಅನಧಿಕೃತ ಶೆಡ್‌ ರಚಿಸಿ ಮನೆ ಕಟ್ಟಿ ಕುಳಿತು ಕೊಂಡ ಮಂಜುಳಾ ಎಂಬುವರಿಗೆ ತೆರವು ಗೊಳಿಸುವಂತೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ನೋಟಿಸ್‌ ನೀಡುವ ಮೂಲಕ ಈ ಕಾರ್ಯಾಚರಣೆಗೆ ಚಾಲನೆ ದೊರಕಿದೆ. ಇಲ್ಲಿನ ಪಂಚಾಯತ್‌ ಆಡಳಿತ ಈ ನಿರ್ಣಯ ಕೈಗೊಂಡಿದ್ದು ಇದು ಇಡೀ ತಾಲೂಕಿನಲ್ಲಿ ಅನಧಿಕೃತ ಮನೆಗಳನ್ನು ಕೆಡಹುವ ಬಗ್ಗೆ ಸೂಚನೆ ಎನ್ನಲಾಗಿದೆಯಲ್ಲದೆ  ವೋಟಿಗಾಗಿ ಮಾತು ಕೇಳಿ ಮನೆ ಕಟ್ಟಿಸಿಕೊಂಡ ಅಮಾಯಕರು ದಿಕ್ಕು ಕಾಣದೆ ಕಂಗಾಲಾಗಿದ್ದಾರೆ.

ಸ್ಥಳೀಯರ ಆಕ್ರೋಶ
ಬೆಳ್ಮಣ್‌ನಲ್ಲಿ ಮನೆಗಳನ್ನು ಕೆಡವುದರೊಂದಿಗೆ ತಾಲೂಕಿನಲ್ಲಿರುವ ಎಲ್ಲಾ ಅಕ್ರಮ ಮನೆಗಳ ವಿರುದ್ದ ಕ್ರಮ ಕೈಗೊಳ್ಳುವಲ್ಲಿ ಚಾಲನೆ ನೀಡಿದ ಬೆಳ್ಮಣ್‌ ಗ್ರಾ.ಪಂ.ನ ಆಡಳಿತದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದು 5 ವರ್ಷದ ಆಡಳಿತದಲ್ಲಿ ನಿವೇಶನ ನೀಡಲು ಅಸಮರ್ಥರಾದ ಜನ ಇದೀಗ ಅಮಾಯಕರ ಮನೆ ಕೆಡವಿದ್ದು ಅಧಿಕಾರದ ಪರಮಾವಧಿ ಎಂದಿದ್ದಾರೆ. ಬೆಳ್ಮಣ್‌ ಗ್ರಾ.ಪಂ.ನ ಧೋರಣೆಯನ್ನು ಖಂಡಿಸಿ ಹೋರಾಟ ಕೈಗೆತ್ತಿಕೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾನೂನಿಲ್ಲಿ ತಾರತಮ್ಯ
ಕಾರ್ಕಳ ತಾಲೂಕಿನಲ್ಲಿ ನಮೂನೆ-53ರಲ್ಲಿ ಡೀಮ್ಡ್, ರಿಸರ್ವ್‌ ಅರಣ್ಯದಲ್ಲಿ ಹಕ್ಕು ಪತ್ರ ನೀಡಿ ಎಕರೆಗಟ್ಟಲೇ ಭೂಮಿಯನ್ನು ಶ್ರೀಮಂತರ ಹೆಸರಿಗೆ ಮಾಡಿ ಕೊಡುವ ಮೂಲಕ ಕಾನೂನನ್ನು ಮೀರಿ  ಕಾರ್ಯನಿರ್ವಹಿಸಿರುವ ಈ ಜನ ಬಡಪಾಯಿ ಒಬ್ಬ ಬದುಕಲು ಹಿಡಿಭೂಮಿಯಲ್ಲಿ ವಾಸ್ತವ್ಯ ಹೂಡಿದರೆ ಆತನ ವಿರುದ್ಧ ಕೆಡಹುವ ಕ್ರಮಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಬವವಾಗಿದೆ.

ತಾಲೂಕಿನಲ್ಲಿ 10 ಸಾವಿರ ಮನೆಗಳು
ಈಗಾಗಲೇ ಕಾರ್ಕಳ ತಾಲೂಕಿನಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿದ ಮನೆಗಳು ಅನಧಿಕೃತವಾಗಿದೆಯಲ್ಲದೆ ಯಾವುದೇ ಅಧಿಕೃತ ದಾಖಲೆಯಿಲ್ಲದೆ ಆಯಾ ಪಂಚಾಯತ್‌ಗಳ ಪಿಡಿಒಗಳು ಡೋರ್‌ ನಂಬ್ರ ನೀಡಿ ಪೇಚಿಗೆ ಸಿಲುಕಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಒತ್ತಡದಿಂದ ಕಾನೂಗಾಳಿಗೆ ತೂರಿ ಕೊಟ್ಟ ಪರವಾನಿಗೆಯಿಂದ ಈ ಸಮಸ್ಯೆ ಎದುರಾಗಿದ್ದು ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಬೇಕಾಗಿದೆ ಎಂದು ಸಂತೃಸ್ತರು ತಿಳಿಸಿದ್ದಾರೆ.

Advertisement

ಸಂಘಟಿತ ಹೋರಾಟ 
ಗ್ರಾ.ಪಂ. ಪಿಡಿಒಗಳ ಈ  ಕ್ರಮ ಯಾವ ನ್ಯಾಯ, ಬೆಳ್ಮಣ್‌ನಲ್ಲಿ ಈ ಗುಡಿಸಲುಗಳು ತೆರವಾದಲ್ಲಿ, ತಾಲೂಕಿನಲ್ಲಿರುವ 10 ಸಾವಿರದಷ್ಟು ಅನಧಿಕೃತ ಮನೆಗಳು ಕೂಡಾ ಧರಾಶಾಹಿಯಾಗಬೇಕು. ಸ್ಥಳೀಯ ಪಿಡಿಒಗಳೇ ಅದರ ನೇತೃತ್ವ ವಹಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸಂಘಟಿತ ಹೋರಾಟ ನಡೆಯಲಿದೆ. 
-ಪ್ರದೀಪ್‌ ಬೆಳ್ಮಣ್‌ , ಸಾಮಾಜಿಕ ಹೋರಾಟಗಾರ

ತೆರವಿಗೆ ಪಿಡಿಒ ನೋಟಿಸ್‌ ಜಾರಿ 
ಬೆೆಳ್ಮಣ್‌ ಗ್ರಾ.ಪಂ.ವ್ಯಾಪ್ತಿಯಲ್ಲಿ ಅನಧಿಕೃತ ಮನೆಗಳ ತೆರವಿಗೆ ಪಿಡಿಒ ನೋಟೀಸ್‌ ಜಾರಿ ಮಾಡಿದ್ದಾರೆ. ನೋಟಿಸ್‌ ನೀಡದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ.
– ಮೊಹಮ್ಮದ್‌ ಇಸಾಕ್‌, ತಹಶೀಲ್ದಾರ್‌ ಕಾರ್ಕಳ

ಬೆಳ್ಮಣ್‌ ಪಂ.ಗೆ ಮಾತ್ರ ಸೀಮಿತವಲ್ಲ 
ಈಗಾಗಲೇ 3 ಮನೆಗಳಿಗೆ ಮೂರು ಬಾರಿ ನೋಟಿಸು ಜಾರಿ ಮಾಡಲಾಗಿದೆ, 2017ರ ಬಳಿಕದ 94 ಸಿಯ ಅರ್ಜಿಗಳೆಲ್ಲವೂ ತಿರಸ್ಕೃತಗೊಳ್ಳಲಿವೆ. ಇದು ಕೇವಲ ಬೆಳ್ಮಣ್‌ ಪಂಚಾಯತ್‌ಗೆ ಮಾತ್ರ ಸೀಮಿತವಲ್ಲ ಬದಲಾಗಿ ರಾಜ್ಯವ್ಯಾಪಿ ನಿರ್ಧಾರ. ಕಾನೂನು ಬದಲಾದರೆ ಖಂಡಿತ ಹಕ್ಕು ಪತ್ರ ನೀಡಬಹುದು.
– ಪ್ರಕಾಶ್‌, ಬೆಳ್ಮಣ್‌ ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next