Advertisement
ಕಾರ್ಕಳ:ಇತ್ತೀಚೆಗಷ್ಟೇ ಆರಂಭಿಸಿದ ಕಾರ್ಕಳ – ಉಡುಪಿ ನಗರ ಸಾರಿಗೆ ಬಸ್ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ನಗರದ ಪ್ರಯಾಣಿಕರಲ್ಲಿ ಸಂತಸ ಮೂಡಿಸಿರುವ ಬೆನ್ನಲ್ಲೇ ಇದೀಗ ಕಾರ್ಕಳ-ಮಂಗಳೂರು ದಾರಿಗೂ ಸರಕಾರಿ ಬಸ್ ಭಾಗ್ಯ ಬೇಕು ಎನ್ನುವ ಪ್ರಯಾಣಿಕರ ಒತ್ತಾಸೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.ಕಾರ್ಕಳ-ಮಂಗಳೂರು ದಾರಿ ಮಧ್ಯೆ ಯಾವುದೇ ಸರಕಾರಿ ಎಕ್ಸ್‌ಪ್ರೆಸ್ ಸೇವೆಗಳೂ ಅಥವಾ ನಗರ ಸಾರಿಗೆ ಬಸ್ ಸೇವೆಗಳೂ ಇಲ್ಲದೇ ಪ್ರಯಾಣಿಕ ಸರಕಾರಿ ಬಸ್ ಸೇವೆಗಳಿಂದ ವಂಚಿತನಾಗಿದ್ದಾನೆ.
ಕಾರ್ಕಳ-ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಕಾರ್ಕಳದತ್ತ ನಿತ್ಯ ಸಂಚರಿಸುವ ಬಸ್‌ಗಳಲ್ಲಿ ಅನಿಯಮಿತ ಪ್ರಯಾಣಿಕರನ್ನು ತುಂಬಿಸಲಾಗುತ್ತಿದೆ.ಬಸ್‌ನ ಸೀಟುಗಳಿಗಿಂತಲೂ ದುಪ್ಪಟ್ಟು ಜನರನ್ನು ತುಂಬಿಸಲಾಗುತ್ತಿದೆ.ಇದರಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ. ಜತೆಗೆ ಮಂಗಳೂರಿನಿಂದ ಕಾರ್ಕಳದವರೆಗೂ ಪ್ರಯಾಣಿಕರು ಹಣ ಕೊಟ್ಟು ನಿಂತೇ ಪ್ರಯಾಣ ಮಾಡುವ ದುಸ್ತರ ಸ್ಥಿತಿ ಎದುರಾಗಿದೆ. ಅಲ್ಲದೇ ನಿಯಮಗಳನ್ನು ಗಾಳಿಗೆ ತೂರಿ ಬಸ್‌ಗಳು ಸಂಚರಿಸುತ್ತಿವೆ. ಖಾಸಗಿ ಬಸ್‌ಗಳಲ್ಲಿ ಸೇವಾ ಕೊರತೆ ಇದ್ದು ಕೆಲವು ಕಡೆ ಪ್ರಯಾಣಿಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿ ಇಲ್ಲ ಎನ್ನುವುದು ಕೆಲ ಪ್ರಯಾಣಿಕರ ಅಭಿಪ್ರಾಯ. ಹೀಗಾಗಿ ಸರಕಾರಿ ಬಸ್‌ಗಳ ಆವಶ್ಯಕತೆ ಇದೆ, ಅಲ್ಲದೇ ಕಾರ್ಕಳ- ಮಂಗಳೂರು ದಾರಿಯಾಗಿ ದಿನೇ ದಿನೇ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ತೆರಳುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ ಪಾಸ್‌ಗಳಿಂದ ತೀರಾ ಉಳಿತಾಯವಾಗಲಿದೆ. ಖಾಸಗಿ ಬಸ್ ಪ್ರಯಾಣ ದರ ದಿನೇ ದಿನೇ ಜಾಸ್ತಿಯಾಗುತ್ತಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ತೀರಾ ಉಳಿತಾಯ ತಂದುಕೊಡುವ ಪಾಸ್‌ನ ವ್ಯವಸ್ಥೆಯೂ ಖಾಸಗಿ ಬಸ್‌ಗಳಲ್ಲಿಲ್ಲ. ಹಾಗಾಗಿ ಸರಕಾರಿ ಬಸ್ ಸೇವೆ ಅಗತ್ಯವಿದೆ ಎನ್ನುವುದು ವಿದ್ಯಾರ್ಥಿಗಳ ಹಾಗೂ ಮಂಗಳೂರಿಗೆ ಖಾಸಗಿ ಬಸ್‌ಗಳ ಮುಖಾಂತರ ಸಾಗುವ ಪ್ರಯಾಣಿಕರ ಒತ್ತಾಸೆ. ಆರ್‌ಟಿಒದಿಂದ ಸರಕಾರಿ ಬಸ್ ವಿರೋಧಿ ನೀತಿ
ಈ ಹಿಂದೆ ಮಂಗಳೂರಿಗೂ ಸರಕಾರಿ ಬಸ್‌ಗಳು ಬೇಕು ಎನ್ನುವ ಬೇಡಿಕೆಗಳು ಕೇಳಿ ಬಂದಿದ್ದವು. ಈ ಕುರಿತು ಆರ್‌ಟಿಒಗೆ ಮಾಹಿತಿ ಇದ್ದರೂ ಆರ್‌ಟಿಒ ಖಾಸಗಿ ಬಸ್‌ಗಳ ಕಾಣದ ಕೈಗಳ ಲಾಬಿಗೆ ಮಣಿದು ಸುಮ್ಮನೇ ಕುಳಿತಿದೆ ಮತ್ತು ಈ ಕುರಿತು ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲ. ಸರಕಾರಿ ಬಸ್ ವ್ಯವಸ್ಥೆಯನ್ನೇ ಈ ರೀತಿ ಕಡೆಗಣಿಸುವ ಹಾಗೂ ಸರಕಾರಿ ಬಸ್‌ಗಳಿಗೆ ಉತ್ತೇಜನ ಕೊಡದ ಆರ್‌ಟಿಒ ಅಧಿಕಾರಿಗಳು ಜನರನ್ನೂ ಸರಕಾರಿ ಬಸ್ ಸೇವೆಯಿಂದ ವಂಚಿತರನ್ನಾಗಿಸುವ ಜನವಿರೋಧಿ ನೀತಿ ಅನುಸರಿಸುತ್ತಿದೆ ಎನ್ನುವುದು ಆರ್‌ಟಿಒ ಮೇಲಿರುವ ಗಂಭೀರ ಆರೋಪ.
Related Articles
Advertisement
– ಪ್ರಸಾದ್ ಶೆಣೈ, ಕಾರ್ಕಳ