Advertisement

ಬರಪೀಡಿತ ಪಟ್ಟಿಯಲ್ಲಿ ಸೇರಿದ ಕಾರ್ಕಳಕ್ಕೆ 152 ಕೆರೆಗಳೇ ಶ್ರೀರಕ್ಷೆ

02:19 PM May 02, 2024 | Team Udayavani |

ಕಾರ್ಕಳ: ಕಾರ್ಕಳ ತಾಲೂಕು ಹೆಚ್ಚು ಮಳೆಯಾಗುವ ಭೂ ಪ್ರದೇಶ. ಇಷ್ಟಿದ್ದರೂ ಬರಪೀಡಿತ ಪಟ್ಟಿಯಲ್ಲಿ ತಾಲೂಕು ಸೇರಿಕೊಂಡಿದೆ. ತಾಲೂಕಿನಲ್ಲಿ 152 ಕೆರೆಗಳಿವೆ. ಅವುಗಳಲ್ಲಿ ಕೆಲವು ಅಭಿವೃದ್ಧಿ ಕಂಡಿವೆ. ಇನ್ನುಳಿದ ಕೆರೆಗಳು ಅನುದಾನ ಕೊರತೆ,
ಅನುದಾನ ವ್ಯವಸ್ಥಿತ ಸದ್ಬಳಕೆ ಆಗದ ಕಾರಣದಿಂದ ಅಭಿವೃದ್ಧಿ ಆಗುವಲ್ಲಿ ಹಿಂದುಳಿದಿದೆ. ಅಂತರ್ಜಲ ಮಟ್ಟ ಕಾಪಾಡುವಲ್ಲಿ ಇಲ್ಲಿನ ಕೆರೆಗಳೇ ಶ್ರೀರಕ್ಷೆಯಾಗಿದೆ.

Advertisement

ಅವಸಾನದ ಅಂಚಿನಲ್ಲಿರುವ ಇತರೆ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಭವಿಷ್ಯದಲ್ಲಿ ನಿರೀಕ್ಷಿತ ನೀರಿನ ಬರವನ್ನು ದೂರ ಮಾಡಬಹುದಾಗಿದೆ. ಕಾರ್ಕಳ ತಾ|ನಲ್ಲಿ ಒಟ್ಟು 152 ಕೆರೆಗಳಿವೆ. ಅವುಗಳು ಒಟ್ಟು 126.27 ಎಕರೆ ವಿಸ್ತೀರ್ಣ ಹೊಂದಿದೆ. ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ 17 ಕೆರೆಗಳಿವೆ. ರಾಮಸಮುದ್ರ 46.85 ಎಕರೆ, ಸಿಗಡಿಕೆರೆ, 5.99 ಎಕರೆ, ಆನೆಕೆರೆ 24.91 ಎಕರೆ, ತಾವರೆಕೆರೆ 7.98 ಎಕರೆ, ಪರೋಳಿ ಕೆರೆ 0.70 ಎಕರೆ, ವಿನಾಯಕ ಬೆಟ್ಟು ದೇಗುಲದ ಕೆರೆ 0.70 ಎಕರೆ, ಮರ್ತಪ್ಪ ಶೆಟ್ಟಿ ಕಾಲನಿ ಕೆರೆ 0.18, ಹಾತಾವು ಕೆರೆ 0.47 ಎಕರೆ, ಮಹಾಲಿಂಗೇಶ್ವರ ದೇವಸ್ಥಾನ 0.35 ಎಕರೆ, ಉಮಾಮಹೇಶ್ವರ ದೇಗುಲ ಕೆರೆ 0.73 ಎಕರೆ, ಗಾಂಧಿ ಮೈದಾನಬೈಲು ಕೆರೆ 0.10 ಎಕರೆ, ಹಿರಿಯಂಗಡಿ ಕೆರೆ 0.40 ಎಕರೆ, ಹಿರಿಯಂಗಡಿ ಕೇಶವ ಹೌಸ್‌ ಬಳಿಯ ಕೆರೆ 0.27 ಎಕರೆ, ಕಾಬೆಟ್ಟು ಕೆರೆ 0.27 ಎಕರೆ, ನಾಗರಬಾವಿ 0.40 ಎಕರೆ ವಿಸ್ತೀರ್ಣದಲ್ಲಿದೆ.

ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹಲವಾರು ಕೆರೆಗಳಿವೆ. ಬೋಳ ಗ್ರಾಮದಲ್ಲಿ 16 ಕೆರೆ, ಮುಂಡ್ಕೂರು 9, ನಂದಳಿಕೆ 7, ಯರ್ಲಪ್ಪಾಡಿ 4, ಎಳ್ಳಾರೆ 2, ಸೂಡ 4, ಸಾಣೂರು 4, ರೆಂಜಾಳ 3, ಪಳ್ಳಿ 2, ನೂರಾಲ್‌ ಬೆಟ್ಟು 2, ನಿಂಜೂರು 1, ನೀರೆ 2, ಬೋಳ , ಬೆಳ್ಮಣ್‌ನಲ್ಲಿ 3 ಕೆರೆ, ದುರ್ಗ 3, ಹಿರ್ಗಾನ 3, ಇನ್ನಾ 3, ಇರ್ವತ್ತೂರು 3, ಮುಡಾರು 2, ಮಿಯ್ನಾರು 6, ಮರ್ಣೆ 2, ಮಾಳ 1, ಕುಕ್ಕುಂದೂರು 7, ಕುಕ್ಕುಜೆ 4, ಕೌಡೂರು 5, ಕೆರ್ವಾಶೆ 1, ಕೆದಿಂಜೆ 1, ಕಾಂತಾವರ 2, ಕಣಜಾರು 1, ಕಲ್ಯಾ 7, ಕಡ್ತಲ 1 ಕೆರೆಗಳಿವೆ.

ನೀರಿನ ದೊಡ್ಡ ಮೂಲಗಳಿವು ರಾಮಸಮುದ್ರ ನಗರಕ್ಕೆ ನೀರಿನ ದೊಡ್ಡ ಮೂಲವಾಗಿದೆ. ಇದರ ವಿಸ್ತೀರ್ಣ 46.85 ಎಕರೆ ಇದ್ದು ತಾ|ನ ದೊಡ್ಡ ಕೆರೆ ಆಗಿದೆ. ಕೆರೆ ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ. ಆನೆಕೆರೆ 24.91 ಎಕರೆ ವಿಸ್ತೀರ್ಣ ಹೊಂದಿದೆ. ನಗರದ ಮಧ್ಯಭಾಗದಲ್ಲಿರುವ ಈ ಕೆರೆಯನ್ನು ಈ ಹಿಂದೆ ಸರಕಾರದ ಅನುದಾನದಿಂದ ಅಭಿವೃದ್ಧಿ ಪಡಿಸಲಾಗಿದೆ. ಕೆರೆಯ ಮಧ್ಯೆ ಬಸದಿಯೂ ಇದ್ದು ಸುತ್ತಲೂ ವಾಕ್‌ ಟ್ರ್ಯಾಕ್‌ ನಿರ್ಮಿಸಲಾಗಿದ್ದು ಕೆರೆಯನ್ನು ಪ್ರವಾಸಿ ತಾಣವಾಗಿಸುವ ಹಿನ್ನೆಲೆಯಲ್ಲಿ ನೀಲಿ ನಕ್ಷೆ ತಯಾರಿಸಲಾಗಿದೆ, ಆನೆಕರೆ ಪಕ್ಕದಲ್ಲಿ ಸಿಗಡಿಕೆರೆ 5.99 ಎಕರೆ ವಿಸ್ತೀರ್ಣದಲ್ಲಿದ್ದು ಅವಸಾನದಲ್ಲಿದ್ದ ಈ ಕೆರೆಯನ್ನು 2016-17ರಲ್ಲಿ ಶಾಸಕ ವಿ. ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿತ್ತು. ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆ, ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಕೆರ್ವಾಶೆ, ಕುಕ್ಕುಂದೂರಿನ ಕೆರೆಗಳು ಅಭಿವೃದ್ಧಿ ಕಂಡರೆ, ಹರಿಯಪ್ಪ ಕೆರೆ, ನಲ್ಲೂರು ಕೆರೆಗಳು ಸೇರಿದಂತೆ ಹಲವು ಕೆರೆಗಳು ಅಭಿವೃದ್ಧಿ ಕಂಡಿವೆ. ಅಮೃತ ಮಹೋತ್ಸವದ ಅಂಗವಾಗಿಯೂ ತಾಲೂಕಿನ ಹಲವಾರು ಕೆರೆಗಳು ಅಭಿವೃದ್ಧಿ ಕಂಡಿವೆ.

ಕೃಷಿ ಅವಲಂಬಿತರು ಹೆಚ್ಚು
ಕಾರ್ಕಳ ತಾಲೂಕಿನಲ್ಲಿ ಕೃಷಿ ಅವಲಂಬಿತರೇ ಹೆಚ್ಚು. ಅಡಿಕೆ, ಕಂಗು, ತೆಂಗು ಬೆಳೆಗಾರರಿದ್ದು ಅದಕ್ಕಿಂತ ಹೆಚ್ಚಾಗಿ ಭತ್ತ ಬೇಸಾಯ
ಮಾಡುವವರು ಹೆಚ್ಚು. ಇತ್ತೀಚಿನ ವರ್ಷಗಳಲ್ಲಿ ಮಳೆಯ ಏರುಪೇರಿನಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಭತ್ತ ಬೇಸಾಯ
ಆಗುತ್ತಿಲ್ಲವಾದರೂ ಭತ್ತ ಬೇಸಾಯದ ಆಸಕ್ತಿ ಇಲ್ಲಿನ ಜನರಲ್ಲಿ ಕುಂದಿಲ್ಲ. ಪ್ರಸ್ತುತ ಭತ್ತ ಬೇಸಾಯ ಕುಂಠಿತವಾಗುತಿದ್ದು ಕೆರೆಗಳನ್ನು ಕಾಪಾಡುವಲ್ಲಿ ಸರಕಾರ ಹೆಚ್ಚಿನ ಅನುದಾನ ಆದ್ಯತೆಯನ್ನು ನೀಡಬೇಕಿದೆ.

Advertisement

ಅನುದಾನ ಲಭ್ಯತೆ ಆಧಾರದಲ್ಲಿ ಅಭಿವೃದ್ಧಿ
ನಗರದ ಕೆರೆಗಳನ್ನು ಸರಕಾರದ ಲಭ್ಯ ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ದಾನಿಗಳ ನೆರವನ್ನು ಪಡೆದುಕೊಳ್ಳಲಾಗಿದೆ. ನಗರ ವ್ಯಾಪ್ತಿಯಲ್ಲಿ ದೊಡ್ಡ ಕೆರೆಗಳು ಸಾಕಷ್ಟಿದ್ದು ಅವುಗಳು ನೀರಿನ ಬೇಡಿಕೆಯನ್ನು ಒದಗಿಸುತ್ತಿವೆ. ಜಲಸಂಪನ್ಮೂಲ ರಕ್ಷಿಸುವಲ್ಲಿ ಹೆಚ್ಚಿನ ಕೆರೆಗಳ ಅಭಿವೃದ್ಧಿ ಅಗತ್ಯವೂ ಆಗಿದೆ.
*ರೂಪಾ ಟಿ. ಶೆಟ್ಟಿ , ಮುಖ್ಯಾಧಿಕಾರಿ ಪುರಸಭೆ

* ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next