Advertisement

ಯಲ್ಲಮ್ಮ ದೇವಿಯ ವೈಭವದ ಕರಗ ಶಕ್ತ್ಯೋತ್ಸವ

12:39 AM Apr 29, 2019 | Lakshmi GovindaRaju |

ಕೆಂಗೇರಿ: ಐತಿಹಾಸಿಕ ಕೆಂಗೇರಿ ಶ್ರೀ ಯಲ್ಲಮ್ಮ ದೇವಿಯ 45ನೇ ಕರಗ ಶಕ್ತ್ಯೋತ್ಸವವು ಶನಿವಾರ ತಡರಾತ್ರಿ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

Advertisement

ಶನಿವಾರ ರಾತ್ರಿ 1.35ಕ್ಕೆ ಸರಿಯಾಗಿ ಕರಗವನ್ನು ಹೊತ್ತ ಪೂಜಾರಿ ಆನಂದ ಅವರು ದೇವಿಯ ಗರ್ಭಗುಡಿಯಿಂದ ಹೊರಬಂದರು. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಸಹಸ್ರಾರು ಭಕ್ತರು ಗೋವಿಂದ ನಾಮಸ್ಮರಣೆ ಮಾಡುತ್ತಾ, ಮಲ್ಲಿಗೆ ಹೂಗಳನ್ನು ಚೆಲ್ಲುವ ಮೂಲಕ ಕರಗವನ್ನು ಬರಮಾಡಿಕೊಂಡರು.

ಕರಗವು ದೇವಾಲಯವನ್ನು ಮೂರು ಸುತ್ತು ಹಾಕಿ ಕೆಂಗೇರಿಯ ರಾಜಬೀದಿಗಳಲ್ಲಿ ಸಾಗಿತು. ನಂತರ, ಗ್ರಾಮದ ಗಾಣಿಗರ ಆಂಜನೇಯ ಸ್ವಾಮಿ ದೇವಾಲಯ, ಮುಸ್ಲಿಮರ ದರ್ಗಾ, ಮಾರಮ್ಮ, ಸೋಮೇಶ್ವರ, ಕೋಟೆ ಕರಗದಮ್ಮ, ಅಂಬಾ ಭವಾನಿ, ಕಸ್ತೂರಮ್ಮನ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಿಗೆ ತೆರಳಿ ಪೂಜೆ ಸ್ವೀಕರಿಸಿತು.

ಬಳಿಕ, ಮೇಗಳ ಬೀದಿ, ಅಂಚೇಕೇರಿ, ಕೋಟೆ, ಲಿಂಗಾಯಿತರ ಬೀದಿ,ಬಾಪೂಜಿ ಕಾಲೋನಿ, ಕುವೆಂಪು ರಸ್ತೆ, ಕೆಂಗೇರಿ ಮಾರುಕಟ್ಟೆ ಮೂಲಕ ಸಾಗಿ, ಭಾನುವಾರ ಬೆಳಗ್ಗೆ 10 ಗಂಟೆಗೆ ದೇವಾಲಯ ತಲುಪಿತು. ಕರಗ ಮಹೋತ್ಸವದ ಅಂಗವಾಗಿ ಜಾನಪದ ಜಾತ್ರೆ ಹಮ್ಮಿಕೊಳ್ಳಲಾಗಿತ್ತು.

ಕೀಲು ಕುದುರೆ,ಪಟದ ಕುಣಿತ, ವೀರಗಾಸೆ, ಪೂಜಾ ಕುಣಿತ, ಚಂಡೆ ವಾದ್ಯ, ಡೊಳ್ಳು, ನಾದಸ್ವರ, ತಮಟೆ ವಾದ್ಯ ಕಲಾವಿದರ ಪ್ರದರ್ಶನ, ಮಂಗಳವಾದ್ಯ, ವಾದ್ಯಗೂಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಕರಗ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಕೆಂಗೇರಿ ಹೋಬಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

ಇದೇ ವೇಳೆ ಶ್ರೀ ರಾಮದೇವರು, ಕಾಶಿ ವಿಶ್ವನಾಥ, ಯಲ್ಲಮ್ಮ ದೇವಿ, ಅಣ್ಣಮ್ಮ, ಬಲಮುರಿ ಗಣಪತಿ ಸೇರಿ ಕೆಂಗೇರಿಯ ಸುತ್ತಮುತ್ತಲಿನ 30ಕ್ಕೂ ಹೆಚ್ಚು ದೇವಾಲಯಗಳ ಉತ್ಸವ ಮೂರ್ತಿಗಳ ಹೂವಿನ ಪಲ್ಲಕ್ಕಿ, ಮುತ್ತಿನ ಪಲ್ಲಕ್ಕಿ ಹಾಗೂ ಬೆಳ್ಳಿ ರಥಗಳ ಮೆರವಣಿಗೆ ನಡೆಯಿತು.

ಉತ್ಸವ ಸಮಿತಿ ಅಧ್ಯಕ್ಷ ಎ.ಮುನಿರಾಜು, ಕಾರ್ಯದರ್ಶಿ ಪಿ.ಮುನಿರಾಜು ಧರ್ಮದರ್ಶಿ ಮುನಿಆಂಜಿನಪ್ಪ, ನಾಗೇಂದ್ರ, ಶಾಮಣ್ಣ, ಸಂಜೀವ, ಜೆ.ರಮೇಶ್‌, ಶಾಂತರಾಜ್‌, ನಾಗರಾಜ್‌, ಕೆ.ವೈ.ಕೃಷ್ಣ, ವಾಸು, ರಘು ಹಾಗೂ ಪೂಜಾರಿಗಳಾದ ಶ್ರೀನಿವಾಸ್‌, ಮುನಿರಾಜು ಮತ್ತು ಸಂಜೀವಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next