ಕರಾಚಿ : ಪಾಕಿಸ್ಥಾನ ಮತ್ತು ಪ್ರವಾಸಿ ನ್ಯೂಜಿಲ್ಯಾಂಡ್ ನಡುವೆ ಕರಾಚಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾಗೊಂಡಿದೆ.
ಗೆಲುವಿಗೆ 15 ಓವರ್, ಒಂದು ಗಂಟೆಯ ಅವಧಿಯಲ್ಲಿ 138 ರನ್ ತೆಗೆಯುವ ಸವಾಲು ನ್ಯೂಜಿಲ್ಯಾಂಡ್‌ಗೆ ಎದುರಾಗಿತ್ತು. ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವಾಗ ಅದು 7.3 ಓವರ್‌ಗಳಲ್ಲಿ ಒಂದು ವಿಕೆಟಿಗೆ 61 ರನ್ ಮಾಡಿತ್ತು. ಬೆಳಕಿನ ಅಭಾವದಿಂದ ಪಂದ್ಯವನ್ನು ಬೇಗನೇ ಕೊನೆಗೊಳಿಸಲಾಯಿತು.
174 ರನ್ ಹಿನ್ನಡೆಗೆ ಸಿಲುಕಿದ ಪಾಕಿಸ್ಥಾನ, ದ್ವಿತೀಯ ಸರದಿಯಲ್ಲಿ 8 ವಿಕೆಟಿಗೆ 311 ರನ್ ಗಳಿಸಿ ಡಿಕ್ಲೇರ್ ಮಾಡಿತು. ಇಮಾಮ್ ಉಲ್ ಹಕ್ 96, ಸೌದ್ ಶಕೀಲ್ 55, ಸಫìರಾಜ್ ಅಹ್ಮದ್ 53 ರನ್ ಹೊಡೆದರು. ಐಶ್ ಸೋಧಿ 6 ವಿಕೆಟ್ ಕಿತ್ತು ಮಿಂಚಿದರು.
ಚೇಸಿಂಗ್‌ನಲ್ಲಿ ಒಂದು ಕೈ ನೋಡಿಯೇ ಬಿಡಲು ಸಜ್ಜಾಗಿ ಬಂದ ನ್ಯೂಜಿಲ್ಯಾಂಡ್, ಬಿಗ್ ಹಿಟ್ಟರ್ ಮೈಕಲ್ ಬ್ರೇಸ್‌ವೆಲ್ ಅವರನ್ನು ಆರಂಭಿಕನನ್ನಾಗಿ ಇಳಿಸಿತು. ಆದರೆ ಅವರು ಕೇವಲ 3 ರನ್ ಮಾಡಿ ನಿರ್ಗಮಿಸಿದರು. ಡೇವನ್ ಕಾನ್ವೇ 18 ಮತ್ತು ಟಾಮ್ ಲ್ಯಾಥಂ 35 ರನ್ ಬಾರಿಸಿ ಔಟಾಗದೆ ಉಳಿದರು.
ಸರಣಿಯ 2ನೇ ಟೆಸ್ಟ್ ಜ. 2ರಂದು ಕರಾಚಿಯಲ್ಲೇ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-438 ಮತ್ತು 8 ವಿಕೆಟಿಗೆ 311 ಡಿಕ್ಲೇರ್ (ಇಮಾಮ್ ಉಲ್ ಹಕ್ 96, ಸೌದ್ ಶಕೀಲ್ 55, ಸಫìರಾಜ್ ಅಹ್ಮದ್ 53, ಐಶ್ ಸೋಧಿ 86ಕ್ಕೆ 6, ಬ್ರೇಸ್‌ವೆಲ್ 82ಕ್ಕೆ 2). ನ್ಯೂಜಿಲ್ಯಾಂಡ್-612 ಮತ್ತು ಒಂದು ವಿಕೆಟಿಗೆ 61.