ಕಾಪು : ಕಾಪು ತಾಲೂಕಿನಾದ್ಯಂತ ಮೊದಲ ಹಂತದ ಲಾಕ್ ಡೌನ್ ತೆರವಾಗಿ ಅನ್ ಲಾಕ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅರ್ಧ ಅನ್ ಲಾಕ್ ಪ್ರಕ್ರಿಯೆಯಲ್ಲೇ ಕಾಪು ಸಹಜ ಸ್ಥಿತಿಗೆ ಬಂದಿದೆ.
ಜೂ. 15 ರಿಂದ ಉಡುಪಿ ಜಿಲ್ಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದು ಅದರಂತೆ ಕಾಪು ತಾಲೂಕಿನಲ್ಲೂ ಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಅನ್ ಲಾಕ್ ಪ್ರಕ್ರಿಯೆ ಜಾರಿಗೆ ಬಂದ ಬಳಿಕ ಕಾಪು ಪೇಟೆ ಸಹಜ ಸ್ಥಿತಿಗೆ ಮರಳಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಪೇಟೆಯಲ್ಲಿ ಎಂದಿನಂತೆ ವ್ಯವಹಾರ, ವಾಹನ ಓಡಾಟ, ರಿಕ್ಷಾ ಪ್ರಯಾಣ ಸಹಿತ ಆರ್ಥಿಕ ಚಟುವಟಿಕೆಗಳು ಎಂದಿನಂತೆ ನಡೆಯಲಾರಂಭಿಸಿವೆ.
ಕಾಪು ಪೇಟೆಯಲ್ಲಿ ಮೆಡಿಕಲ್, ದಿನಸಿ, ಹಾಲು, ತರಕಾರಿ, ಹೂ ಸಹಿತ ಅಗತ್ಯ ಸಾಮಾಗ್ರಿಗಳ ಮಾರಾಟ ಮಳಿಗೆಗಳು ತೆರೆದು ಕೊಂಡಿದ್ದು, ಹೊಟೇಲ್ ಗಳಲ್ಲಿ ಪಾರ್ಸೆಲ್ ನಂತಹ ಚಟುವಟಿಕೆಗಳು ಮಧ್ಯಾಹ್ನದ ವರೆಗೆ ಬಿರುಸಿನಿಂದ ನಡೆಯಲಾರಂಭಿಸಿವೆ. ಬಟ್ಟೆ ಅಂಗಡಿ, ಸೆಲೂನ್, ಟೈಲರ್ ಶಾಪ್, ಗ್ಯಾರೇಜ್, ಮೊಬೈಲ್ ರಿಪೇರಿ ಮತ್ತು ಶಾಪ್, ಸ್ಟೇಷನರಿ ಮಳಿಗೆ, ಚಪ್ಪಲಿ ಅಂಗಡಿಗಳು, ಪಾತ್ರೆ ಮಳಿಗೆ, ಪೋಟೋ ಸ್ಟುಡಿಯೋ, ಬೇಕರಿ, ಜ್ಯುವೆಲ್ಲರಿ ಮಳಿಗೆಗಳು ಇನ್ನೂ ತೆರೆದುಕೊಂಡಿಲ್ಲ.
ಅನಗತ್ಯವಾಗಿ ಸಂಚರಿಸುತ್ತಿರುವವರು, ಮಾರ್ಗಸೂಚಿಯನ್ನು ಉಲ್ಲಂಘಿಸಿ ತೆರೆದಿರುವ ಅಂಗಡಿ, ವ್ಯಾಪಾರ ಮಳಿಗೆಗಳ ವಿರುದ್ದ ತಾಲೂಕು ಆಡಳಿತ, ಪೌರಾಡಳಿತ, ಪೊಲೀಸ್ ಇಲಾಖೆಯ ಅಧಿಕಾರಿಗಳು ಧಾಳಿ ಮುಂದುವರಿಸಿದ್ದು, ದಂಡ ವಿಧಿಸುವುದರ ಜೊತೆಗೆ ಎಚ್ಚರಿಕೆಯನ್ನೂ ನೀಡುತ್ತಿರುವುದು ಕಂಡು ಬಂದಿವೆ.
ಪೊಲೀಸ್, ಗೃರಕ್ಷಕರಿಂದ ಕಣ್ಗಾವಲು : ಲಾಕ್ ಡೌನ್ ಆರಂಭಗೊಂಡ ದಿನದಿಂದಲೂ ಕಾಪು ಪೇಟೆಯಲ್ಲಿ ಅಗತ್ಯವಾಗಿ ಸಂಚರಿಸುತ್ತಿರುವವರ ಮೇಲೆ ಪೊಲೀಸ್ ಕಣ್ಗಾವಲು ಜಾರಿಯಲ್ಲಿದ್ದು, ಕಣ್ಗಾವಲು ತಪ್ಪಿಸಿಕೊಂಡು ಬಂದವರಿಗೆ ಎಚ್ಚರಿಕೆ ಪಾಠ, ಎರಡನೇ ಸಲ ನಿಯಮ ಮುರಿದವರಿಗೆ ದಂಡ ವಿಧಿಸುವ ಪ್ರಕ್ರಿಯೆಗಳೂ ನಡೆಯುತ್ತಿವೆ.
ಗೃರಕ್ಷಕದಳ ಸಿಬಂದಿಗಳ ಸೇವೆಗೆ ಶ್ಲಾಘನೆ : ಕೊರೊನಾ ಆತಂಕದ ನಡುವೆಯೂ ಪೊಲೀಸ್ ಇಲಾಖೆಯ ಜೊತೆಗೆ ಗೃಹರಕ್ಷಕರೂ ಬಂದೋಬಸ್ತ್ ನಲ್ಲಿ ಸಹಕಾರ ನೀಡುತ್ತಿದ್ದು, ಸೇವಾ ಭದ್ರತೆಯಿರದಿದ್ದರೂ ಸಮುದಾಯದ ರಕ್ಷಣೆಗಾಗಿ ನಿರಂತರವಾಗಿವ ಸೇವಾ ನಿರತರಾಗಿರುವ ಗೃಹರಕ್ಷಕದಳದ ಸಿಬ್ಬಂದಿಗಳ ಸೇವೆಗೆ ಸಾರ್ವಜನಿಕರಿಂದ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.