Advertisement
ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಉಡುಪಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಗ್ರಾಮ ಪಂಚಾಯತ್‌ಗೆ ಪ್ರಥಮ ಹಂತದಲ್ಲಿ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ ಮೂರು ತಾಲೂಕುಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ನಾಲ್ಕು ಲಕ್ಷಕ್ಕೂ ಮಿಕ್ಕಿದ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು ಕಾಪು ತಾಲೂಕಿನಲ್ಲಿ 290, ಕುಂದಾಪುರ ತಾಲೂಕಿನಲ್ಲಿ 554 ಮತ್ತು ಕಾರ್ಕಳ ತಾಲೂಕಿನಲ್ಲಿ 399 ಸ್ಥಾನಗಳಿಗೆ ಮತದಾನ ನಡೆಯಲಿದೆ. ಇದರಲ್ಲಿ ಕಾಪು-10, ಕುಂದಾಪುರ 24 ಮತ್ತು ಕಾರ್ಕಳ 31 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 2708 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಹೇಳಿದರು.
Related Articles
Advertisement
ಕಾಪು ತಹಶೀಲ್ದಾರ್ ರಶ್ಮಿ ಅವರು ಮಸ್ಟರಿಂಗ್ ಕೇಂದ್ರದ ಬಗ್ಗೆ ಮಾಹಿತಿ ನೀಡಿ, ಗ್ರಾಮ ಪಂಚಾಯತ್ ಚುನಾವಣೆಗೆ ಪ್ರಥಮ ಬಾರಿಗೆ ಕಾಪು ತಾಲೂಕು ಕೇಂದ್ರದಲ್ಲೇ ಮಸ್ಟರ್‍ಟಿಂಗ್, ಡಿಮಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರವನ್ನು ಸಿದ್ಧಪಡಿಸಲಾಗಿದೆ. ಕಾಪು ತಾಲೂಕಿನಲ್ಲಿ 16 ಗ್ರಾಮ ಪಂಚಾಯತ್‌ಗಳಿಗೆ ಮತದಾನ ನಡೆಯಲಿದ್ದು, 650 ಮಂದಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. 140 ಮತಗಟ್ಟೆಗಳಿದ್ದು, 11 ಅತೀ ಸೂಕ್ಷ್ಮ, 52 ಸೂಕ್ಷ್ಮ ಮತಗಟ್ಟೆಗಳಿವೆ. 627 ಪೋಲಿಂಗ್ ಸಿಬಂದಿಗಳು, 150ಕ್ಕೂ ಅಧಿಕ ಮಂದಿ ಪೊಲೀಸ್ ಸಿಬಂದಿಗಳು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ ಎಂದರು.
ಚುನಾವಣಾ ವೀಕ್ಷಕ ದಿನೇಶ್, ನೋಡಲ್ ಅಧಿಕಾರಿ ಮಹಮ್ಮದ್ ಇಸಾಕ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಉಪತಹಶೀಲ್ದಾರ್ ಅಶೋಕ್, ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ ಅವರು ಮಸ್ಟರಿಂಗ್ ಕೇಂದ್ರದಲ್ಲಿ ಉಪಸ್ಥಿತರಿದ್ದು, ಮತಗಟ್ಟೆಗೆ ತೆರಳುವ ಅಧಿಕಾರಿಗಳು ಮತ್ತು ಸಿಬಂದಿಗಳಿಗೆ ಸೂಕ್ತ ತರಬೇತಿ ನೀಡಿ, ಅಂತಿಮ ಹಂತದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿ ಶುಭ ಕೋರಿದರು.