Advertisement
ಇದರ ಪರಿಣಾಮ ಕಾವೇರಿ ಮತ್ತು ಕಪಿಲಾ ನದಿಗಳು ಉಕ್ಕಿ ಹರಿಯುತ್ತಿವೆ ನದಿ ಪಾತ್ರದ ಎಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ ತಾಲೂಕುಗಳಲ್ಲಿ ವಾರದಲ್ಲಿ ಎರಡನೇ ಬಾರಿಗೆ ಪ್ರವಾಹ ಎದುರಾಗಿದೆ. ಕೇರಳ ಗಡಿಯ ಎಚ್.ಡಿ.ಕೋಟೆ ತಾಲೂಕಿನ ಮಚ್ಚಾರು, ಡಿ.ಬಿ.ಕುಪ್ಪೆ, ಆನೆಮಾಳ, ವಡಕನಮಾಳ ಸೇರಿದಂತೆ ಗಿರಿ ಹಾಡಿಗಳಿಗೆ ನೀರು ನುಗ್ಗಿ, ನಿರಾಶ್ರಿತರಿಗೆ ತಾಲೂಕು ಆಡಳಿತ ಡಿ.ಬಿ.ಕುಪ್ಪೆಯ ಸರ್ಕಾರಿ ಶಾಲೆಯಲ್ಲಿ ಆಶ್ರಯ ಕಲ್ಪಿಸಿದೆ.
Related Articles
Advertisement
ನಂಜನಗೂಡು ಪಟ್ಟಣದ ಒಕ್ಕಲಗೇರಿ, ಹಳ್ಳದಕೇರಿ, ತೋಪಿನ ಬೀದಿಯ ಕೆಲ ಮನೆಗಳ ಜನರನ್ನು ಸ್ಥಳಾಂತರಿಸಲಾಗಿದೆ. ಹೆಮ್ಮಿಗೆ, ಸುತ್ತೂರು ಸೇತುವೆ ಮೇಲೆ ಕಪಿಲೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಪ್ರವಾಹ ಪೀಡಿತರಿಗೆ ಶ್ರೀಕಂಠೇಶ್ವರ ದೇವಸ್ಥಾನದ ದಾಸೋಹ ಭವನದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಹೆದ್ದಾರಿ ಬಂದ್: ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟ ಪರಿಣಾಮ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾರದಲ್ಲಿ ಎರಡನೇ ಬಾರಿಗೆ ಸಂಪರ್ಕ ಕಡಿತಗೊಂಡಿದೆ. ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಸೋಮವಾರವಷ್ಟೇ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.
ಮಲ್ಲನಮೂಲೆ ಮಠದ ಬಳಿ ಹೆದ್ದಾರಿಯ ಮೇಲೆ ಮೂರ್‍ನಾಲ್ಕು ಅಡಿಗಳಷ್ಟು ಕಪಿಲಾ ನದಿ ನೀರು ಹರಿಯುತ್ತಿರುವ ಕಾರಣ ಶುಕ್ರವಾರ ಬೆಳಗ್ಗೆಯಿಂದ ಪೊಲೀಸರು ಹೆದ್ದಾರಿಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನಿರಿಸಿ ವಾಹನ ಸಂಚಾರ ಸ್ಥಗಿತಗೊಳಿಸಿದೆ. ಈ ಮಾರ್ಗದಲ್ಲಿ ತೆರಳುವವರು ಕಡಕೊಳ ಬಳಿ ಎಡ ತಿರುವು ಪಡೆದು ಅಡಕನಹಳ್ಳಿ ಕೈಗಾರಿಕಾ ಪ್ರದೇಶ, ಹಿಮ್ಮಾವು, ಕೆಂಪಿಸಿದ್ಧನಹುಂಡಿ, ಬಸವನಪುರ ಮೂಲಕ ನಂಜನಗೂಡು ತಲುಪಬೇಕಿದೆ.
ದೇಗುಲ ಜಲಾವೃತ: ತಿ.ನರಸೀಪುರ ತಾಲೂಕಿನಲ್ಲಿ ಕಾವೇರಿ-ಕಪಿಲಾ ನದಿ ಸಂಗಮವಾಗಿ ಹರಿಯುವುದರಿಂದ ತಾಲೂಕಿನ ಐತಿಹಾಸಿಕ ಸ್ಥಳ ತಲಕಾಡು ಸಮೀಪದ ತಡಿಮಾಲಂಗಿ ಗ್ರಾಮದ ಆಂಜನೇಯ ಮತ್ತು ಅಲಮೇಲಮ್ಮ ದೇವಸ್ಥಾನಗಳು ಜಲಾವೃತವಾಗಿವೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಜೊತೆಗೆ ಗ್ರಾಮದಲ್ಲಿನ ನದಿ ಪಾತ್ರದ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳಿಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಕೊಡಗು ಸಂಪರ್ಕ ಕಡಿತ: ಭಾರೀ ಮಳೆಯಿಂದ ತತ್ತರಿಸುತ್ತಿರುವ ಕೊಡಗು ಜಿಲ್ಲೆಗೆ ಇದೇ ಮೊದಲ ಬಾರಿಗೆ ರಸ್ತೆ ಸಂಪರ್ಕವೂ ಕಡಿತಗೊಂಡಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಕುಶಾಲನಗರ ಪಟ್ಟಣದ ಹಲವು ಬಡಾವಣೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದ್ದರೆ,
ಮೈಸೂರು ಜಿಲ್ಲೆಯ ಗಡಿಯಲ್ಲಿ ಬರುವ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಮಟ್ಟಕ್ಕೆ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಸೇತುವೆಯ ಮೇಲೆ ಭಾರೀ ವಾಹನಗಳ ಸಂಚಾರ ಸ್ಥಗಿತಗೊಳಿಸಿದೆ. ಭಾರೀ ವಾಹನಗಳನ್ನು ಪಿರಿಯಾಪಟ್ಟಣದಲ್ಲೇ ತಡೆದು ಗೋಣಿಕೊಪ್ಪ-ಸಿದ್ದಾಪುರ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ಕಂದಾಯ ಸಚಿವರ ಭೇಟಿ: ಮೈಸೂರು ಜಿಲ್ಲೆಯ ಕೊಡಗಿನ ಗಡಿ ಗ್ರಾಮ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮಕ್ಕೆ ಶುಕ್ರವಾರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಭೇಟಿ ನೀಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಮಳೆಯಿಂದ ಮುಳುಗಡೆಯಾಗಿರುವ ಗ್ರಾಮಗಳು, ನದಿ ಪಾತ್ರದ ಜಮೀನು ಜಲಾವೃತದಿಂದ ಆಗಿರುವ ಹಾನಿ, ಕೊಪ್ಪ ಗ್ರಾಮದಲ್ಲಿ ತೆರೆದಿರುವ ಗಂಜಿ ಕೇಂದ್ರ ಪರಿಶೀಲಿಸಿದರು. ಜಿಲ್ಲಾಡಳಿತದಿಂದ ಪ್ರವಾಹ ಹಾನಿ ಕುರಿತು ಮಾಹಿತಿ ಪಡೆದರು.
ಪ್ರವಾಹ ಪೀಡಿತರು ಆತಂಕಕ್ಕೆ ಒಳಗಾಗಬೇಡಿ. ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸುತ್ತದೆ. ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಸ್ಥಳಗಳಲ್ಲಿಯೇ ಮೊಕ್ಕಾಂ ಹೂಡಿ ಅಗತ್ಯ ಕ್ರಮ ಕೈಗೊಳ್ಳುವರು. ಧೈರ್ಯವಾಗಿರಿ.-ಆರ್.ವಿ.ದೇಶಪಾಂಡೆ, ಕಂದಾಯ ಸಚಿವ