ಹೊಸದಿಲ್ಲಿ: ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನ ಹಿರಿಯ ನಾಯಕರು ಮತ್ತೆ ಅಸಮಾಧಾನಗೊಂಡಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಪ್ರದರ್ಶನ ತೋರಿದ ಬಳಿಕ ಕೈ ಹೈಕಮಾಂಡ್ ವಿರುದ್ಧ ಕಪಿಲ್ ಸಿಬಲ್ ಹರಿಹಾಯ್ದಿದ್ದಾರೆ.
ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಪಿಲ್ ಸಿಬಲ್ ಪಕ್ಷದ ಸ್ಥಿತಿಗತಿಯ ಬಗ್ಗೆ ಹೇಳಿಕೊಂಡಿದ್ದಾರೆ.
ದೇಶದ ಜನರಿಗೆ ಬಿಜೆಪಿಗೆ ನಾವು ಪರ್ಯಾಯ ಎಂದು ಅನಿಸುತ್ತಿಲ್ಲ. ಬಿಹಾರದಲ್ಲಿ ಆರ್ ಜೆಡಿ ಪರ್ಯಾಯ ಪಕ್ಷವಾಗಿತ್ತು. ಗುಜರಾತ್‌ನಲ್ಲಿ ನಡೆದ ಎಲ್ಲಾ ಉಪ ಚುನಾವಣೆಗಳಲ್ಲಿ ನಾವು ಸೋತಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ನಾವು ಅಲ್ಲಿ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 2% ಕ್ಕಿಂತ ಕಡಿಮೆ ಮತಗಳನ್ನು ಗಳಿಸಿದ್ದಾರೆ. ಗುಜರಾತ್‌ನಲ್ಲಿ ನಮ್ಮ ಮೂವರು ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡರು. ಕಾಂಗ್ರೆಸ್ ಪರಿಸ್ಥಿತಿ ಗೋಡೆಯ ಬರಹವಾಗಿದೆ ಎಂದು ಕಪಿಲ್ ಸಿಬಲ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಇಂದಿನಿಂದ ನಿತೀಶ್ 4.0 : ಸಂಜೆ ಪ್ರಮಾಣ , ತಾರ್ ಕಿಶೋರ್, ರೇಣುದೇವಿ ಡಿಸಿಎಂ?
ಕೆಲವು ತಿಂಗಳ ಹಿಂದೆ ನಾವುಗಳು ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆದಿದ್ದೆವು. ಆದರೆ ನಂತರ ನಾಯಕತ್ವದ ಬಗ್ಗೆ ಯಾವುದೇ ರೀತಿಯ ಮಾತುಕತೆಗಳಾಗಿಲ್ಲ. ನನ್ನ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ನಾನು ನಿರ್ಬಂಧಿತನಾಗಿದ್ದೇನೆ. ನಾನು ಕಾಂಗ್ರೆಸ್ಸಿಗನಾಗಿದ್ದೇನೆ ಮತ್ತು ಕಾಂಗ್ರೆಸ್ಸಿಗನಾಗಿ ಉಳಿಯುತ್ತೇನೆ ಎಂದು ಕಪಿಲ್ ಸಿಬಲ್ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ತನ್ನನ್ನು ತಾನೇ ಕಂಡುಹಿಡಿಯಬೇಕು. ನಮ್ಮ ನ್ಯೂನತೆಗಳನ್ನು ಗುರುತಿಸಲು ನಮಗೆ ಸಾಧ್ಯವಾಗದಿದ್ದರೆ, ಚುನಾವಣಾ ಪ್ರಕ್ರಿಯೆಯು ಸಹ ಅಪೇಕ್ಷಿತ ಫಲಿತಾಂಶಗಳಿಗೆ ಕಾರಣವಾಗುವುದಿಲ್ಲ. ನಾಮನಿರ್ದೇಶನಗಳ ಸಂಸ್ಕೃತಿ ಹೋಗಬೇಕು. ನಮ್ಮಲ್ಲಿ ಕೆಲವರು ನಮ್ಮ ಮಾತುಗಳನ್ನು ಕೇಳುವ ಬದಲು ಅವರು ನಮಗೆ ಬೆನ್ನು ತೋರಿಸಿದರು ಎಂದು ಕಪಿಲ್ ಸಿಬಲ್ ಅಸಮಾಧಾನ ತೋಡಿಕೊಂಡಿದ್ದಾರೆ.