Advertisement

ದಿಟ್ಟತನದ ಕೊರತೆ ಕಾಡಿತು: ವಿರಾಟ್‌ ಕೊಹ್ಲಿ

08:36 PM Nov 01, 2021 | Team Udayavani |

ದುಬಾೖ: ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್‌ ವಿರುದ್ದದ ಎರಡೂ ಪಂದ್ಯಗಳಲ್ಲಿ ನಮ್ಮ ಆಟಗಾರರಲ್ಲಿ ದಿಟ್ಟತನದ ಕೊರತೆ ಕಾಡಿತು. ಇದು ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ರವಿವಾರ ನ್ಯೂಜಿಲ್ಯಾಂಡ್‌ ವಿರುದ್ಧ ಅನುಭವಿಸಿದ 8 ವಿಕೆಟ್‌ಗಳ ಸೋಲಿನ ಬಳಿಕ ಮಾತನಾಡಿದ ಕೊಹ್ಲಿ “ಇದೊಂದು ವಿಲಕ್ಷಣ ಸ್ಥಿತಿ. ಬ್ಯಾಟಿಂಗ್‌ ಅಥವಾ ಬೌಲಿಂಗ್‌ನಲ್ಲಿ ನಾವು ದಿಟ್ಟತನ ತೋರಿದ್ದೇವೆಂದು ನಾನು ಭಾವಿಸುವುದಿಲ್ಲ. ನಮ್ಮನ್ನು ನಾವು ಹೆಚ್ಚು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಮೈದಾನಕ್ಕೆ ಕಾಲಿಟ್ಟಾಗಲೇ ನಾವು ಧೈರ್ಯಗೆಟ್ಟಂತಿದ್ದೆವು. ಇನ್ನೇನು ಲಯ ಕಂಡುಕೊಳ್ಳಬೇಕೆನ್ನುವಾಗಲೇ ನಮ್ಮ ವಿಕೆಟ್‌ಗಳು ಉರುಳುತ್ತಿದ್ದವು. ಟಿ20 ಕ್ರಿಕೆಟ್‌ನಲ್ಲಿ ಕೆಲವು ಹಿಂಜರಿಕೆ ಕಂಡುಬಂದಾಗ ಇಂಥ ಘಟನೆಗಳು ಸಂಭವಿಸುತ್ತವೆ’ ಎಂದು ವಿರಾಟ್‌ ಕೊಹ್ಲಿ ಹೇಳಿದರು.

“ಭಾರತ ತಂಡದ ಪರ ಆಡುವಾಗ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಇಂಥ ನಿರೀಕ್ಷೆಯನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲ, ಆಟಗಾರರೂ ಹೊಂದಿರುತ್ತಾರೆ. ಇದು ನಮ್ಮ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ. ಇದನ್ನು ಕಳೆದ ಹಲವು ವರ್ಷಗಳಿಂದ ನಾವು ಸ್ವೀಕರಿಸಿದ್ದೇವೆ. ಒಂದು ತಂಡವಾಗಿ ಆಡಿದಾಗ ಈ ರೀತಿಯ ಒತ್ತಡವನ್ನು ಮೆಟ್ಟಿ ನಿಲ್ಲಬಹುದು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ನಮ್ಮಿಂದ ಇದು ಸಾಧ್ಯವಾಗಿಲ್ಲ’ ಎಂದು ವಿರಾಟ್‌ ಕೊಹ್ಲಿ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ನೋ ಕ್ವಾರಂಟೈನ್: ಕೋವಾಕ್ಸಿನ್ ಲಸಿಕೆಯನ್ನು ಅಂಗೀಕರಿಸಿದ ಆಸ್ಟ್ರೇಲಿಯಾ

ಕಪಿಲ್‌ದೇವ್‌ ಆಕ್ರೋಶ
ಆಟಗಾರರಲ್ಲಿ ದಿಟ್ಟತನವಿರಲಿಲ್ಲ, ಧೈರ್ಯ ಸಾಕಾಗಲಿಲ್ಲ ಎಂಬ ವಿರಾಟ್‌ ಹೊಹ್ಲಿಯ ಹೇಳಿಕೆಗೆ ಟೀಮ್‌ ಇಂಡಿಯಾದ ಮಾಜಿ ನಾಯಕ ಕಪಿಲ್‌ದೇವ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

“ಓರ್ವ ನಾಯಕನಾಗಿ, ಶ್ರೇಷ್ಠ ಮಟ್ಟದ ಆಟಗಾರನಾಗಿ ಈ ರೀತಿಯ ಹೇಳಿಕೆ ನೀಡಿರುವುದು ನಿಜಕ್ಕೂ ಬೇಸರ ತಂದಿದೆ. ದೈರ್ಯವಿಲ್ಲದೆ ಯಾವುದೇ ಕೆಲಸವನ್ನು ಮಾಡಬಾರದು. ನಾಯಕನಿಗೆ ಪಂದ್ಯ ಗೆಲ್ಲುವ ವಿಶ್ವಾಸ ಇಲ್ಲ ಎಂದಾದರೆ ತಂಡದ ಉಳಿದ ಆಟಗಾರ ಆತ್ಮಸ್ಥೈರ್ಯ ಇನ್ನಷ್ಟು ಕುಸಿಯುತ್ತದೆ. ಕೊಹ್ಲಿಯ ಈ ಹೇಳಿಕೆಯನ್ನು ಗಮನಿಸುವಾಗ ಅವರಿಂದ ತಂಡವನ್ನು ಮೇಲೆತ್ತಲು ಸಾಧ್ಯವಿಲ್ಲ ಮತ್ತು ತಂಡದ ಹಿನ್ನೆಡೆಗೆ ಅವರೇ ಮುಖ್ಯ ಕಾರಣರಾಗುತ್ತಾರೆ’ ಎಂದು ಕಪಿಲ್‌ದೇವ್‌.

Advertisement

Udayavani is now on Telegram. Click here to join our channel and stay updated with the latest news.

Next