ಬೆಳ್ತಂಗಡಿ: ಗುರುಗಳ ಆಶೀರ್ವಾದವಿಲ್ಲದೆ ಈ ಭೂಮಿಯಲ್ಲಿ ಯಾವುದೂ ನೆರವೇರುವುದಿಲ್ಲ. ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಆಶೀರ್ವಾದದಿಂದ ಸಕಲವೂ ನೆರವೇರುತ್ತಿದೆ. ತಿರುಪತಿಯಲ್ಲಿ ಶೀಘ್ರವೇ ಶಾಖಾ ಮಠ ಸ್ಥಾಪಿಸುವ ಅವರ ಅಭಿಲಾಷೆಗೆ ನಮ್ಮ ಸಂಪೂರ್ಣ ಸಹಕಾರವಿದ್ದು, ಸರಕಾರದಿಂದಲೂ ಪೂರಕ ನೆರವು ಒದಗಿಸಲಾಗುವುದು ಎಂದು ಕರ್ನಾಟಕ ದ ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನ ನಿತ್ಯಾನಂದ ನಗರದ ಜಗದ್ಗುರು ಪೀಠದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಕ್ಷೇತ್ರದ ಶಾಖಾ ಮಠ ಉತ್ತರಾಖಂಡದ ದೇವ ಭೂಮಿ ಹರಿದ್ವಾರ ಶಾಖಾ ಮಠದಲ್ಲಿ ಶನಿವಾರ ಹಮ್ಮಿಕೊಂಡ 7ನೇ ವಾರ್ಷಿಕ ಉತ್ಸವದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಪಂಚೇಂದ್ರಿಯಗಳು ಮನುಷ್ಯನನ್ನು ನಿಯಂತ್ರಿಸುವುದರಿಂದ ಯಾವುದ ರಲ್ಲೂ ನೈಜ ಆನಂದವಿಲ್ಲ ಎಂಬಂತಾಗಿದೆ. ಇದಕ್ಕೆಲ್ಲ ಧ್ಯಾನ ಅನಿವಾರ್ಯವಾಗಿದ್ದು, ಮನುಷ್ಯ ಜನ್ಮದಲ್ಲಿ ಅಧ್ಯಾತ್ಮದ ರುಚಿ ಹೆಚ್ಚಿಸಬೇಕಾದ ಅನಿವಾರ್ಯವಿದ್ದು, ಆ ಕಾರ್ಯ ಸಂತರಿಂದ ಮಾತ್ರ ಸಾಧ್ಯ ಎಂದರು.
ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಸಂತರ ಆಶೀರ್ವಾದದಿಂದ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಸಂಗಮವಾಗಿದೆ. ಅರಮನೆ ಮತ್ತು ಗುರುಮನೆ ಹತ್ತಿರವಿದ್ದರೆ ರಾಜನೀತಿ ಸುಂದರವಾಗಿರುತ್ತದೆ ಎಂದರು.
ಅಂತಾರಾಷ್ಟ್ರೀಯ ಶ್ರೀ ಪಂಚದಶನಾಮ ಮಾನಿರ್ವಾಣಿ ಅಖಾಡ ಸಚಿವ ರವೀಂದ್ರ ಪುರೀಜಿ ಮಹಾರಾಜ್, ವಿವಿಧ ಅಖಾಡಗಳ ಮುಖ್ಯಸ್ಥರು, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿ ಬಿಜೆಪಿ ಅಧ್ಯಕ್ಷ ಜಯಂತ ಕೋಟ್ಯಾನ್, ಮನಪಾ ಸದಸ್ಯ ಕಿರಣ್ ಮೊದಲಾದವರು ಉಪಸ್ಥಿತದ್ದರು.
ಸಂಜೆ ಪವಿತ್ರ ಗಂಗಾರತಿ ನಡೆಯಿತು.