ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರವು ಇದೀಗ ಬೇರೆ ಭಾಷೆಗಳಲ್ಲೂ ಸಖತ್ ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಯಶಸ್ವಿಯಾದ ಚಿತ್ರವು ಇದೀಗ ಹಿಂದಿ ಮತ್ತು ತೆಲುಗು ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಮೊದಲ ದಿನವೇ 4 ಕೋಟಿ ರೂ. ಗಳಿಸಿದ “ಕಾಂತಾರ” ತೆಲುಗು ಆವೃತ್ತಿಯು, ಎರಡನೇ ದಿನವು ತನ್ನ ಓಟವನ್ನು ಮುಂದುವರಿಸಿದೆ. ಮತ್ತೆ ಆರು ಕೋಟಿ ರೂ. ಗಳಿಸಿರುವ ಕಾಂತಾರ ತೆಲುಗು ಆವೃತ್ತಿ ಎರಡೇ ದಿನದಲ್ಲಿ ಹತ್ತು ಕೋಟಿ ಕಲೆಕ್ಷನ್ ಮಾಡಿದೆ.
ರಿಷಬ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಕನ್ನಡದಲ್ಲಿ ಸೆ.30ರಂದು ತೆರೆಕಂಡ ಚಿತ್ರವನ್ನು ‘ಗೀತಾ ಆರ್ಟ್ಸ್’ ತೆಲುಗಿನಲ್ಲಿ ಅ.15ರಂದು ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಅತಿರೇಕದ ವರ್ತನೆಯೊಂದಿಗೆ “ಕಾಂತಾರ” ವಿಮರ್ಶೆ ಮಾಡಿದ ಯೂಟ್ಯೂಬರ್: ಹಲವರ ಆಕ್ರೋಶ
“ಕಾಂತಾರ” ಚಿತ್ರಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಇದು ಮೆಗಾಸ್ಟಾರ್ ಚಿರಂಜೀವಿ ಅವರ “ಗಾಡ್‌ಫಾದರ್” ಸಿನಿಮಾಗೆ ದುಃಸ್ವಪ್ನವಾಗಿ ಕಾಡಿದೆ. ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳು ಮತ್ತು ಉತ್ತಮ ವಿಮರ್ಶೆಗಳ ಹೊರತಾಗಿಯೂ, “ಗಾಡ್‌ಫಾದರ್” ಎರಡನೇ ವಾರದಲ್ಲಿ ತನ್ನ ಕಲೆಕ್ಷನ್ ನಲ್ಲಿ ಹೆಚ್ಚಿನ ಸುಧಾರಣೆ ಕಂಡಿಲ್ಲ.
ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿರುವ ಚಿತ್ರಕ್ಕೆ ಅರವಿಂದ ಕಶ್ಯಪ್ ಕ್ಯಾಮರ್ ಕೆಲಸವಿದೆ.