ಹೈದರಾಬಾದ್: ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಚಿತ್ರ ಬಿಡುಗಡೆಯಾದ ದಿನದಿಂದ ಈವರೆಗೆ ಹಲವು ದಾಖಲೆ ಬರೆದಿದೆ. ಕಾಂತಾರ ಚಿತ್ರ ಬಿಡುಗಡೆಯಾಗಿ ನವೆಂಬರ್ 18ಕ್ಕೆ 50 ದಿನಗಳನ್ನು ಪೂರೈಸಲಿದೆ. ಈ ಸಿನಿಮಾದ ಹಾಡು, ನಟನೆ, ಸಂಭಾಷಣೆ ಅದೆಷ್ಟು ಮೋಡಿ ಮಾಡಿ ಎಂಬುದಕ್ಕೆ ಮತ್ತೊಂದು ಪುರಾವೆ ಎಂಬಂತೆ ಆಂಧ್ರಪ್ರದೇಶದ ವಿಜಯನಗರಂ ತಹಸೀಲ್ದಾರ್ ಕಾಂತಾರ ಚಿತ್ರದ ಪಂಜುರ್ಲಿ ದೈವದ ವೇಷದಲ್ಲಿ ಬಂದು ಎಲ್ಲರನ್ನೂ ಅಚ್ಚರಿಗೊಳಿಸಿದ ಘಟನೆ ನಡೆದಿದೆ.
ಗುಂಟೂರಿನ ನಾಗಾರ್ಜುನ ಯೂನಿರ್ವಸಿಟಿಯಲ್ಲಿ ಆಂಧ್ರಪ್ರದೇಶ ರಾಜ್ಯ ಕಂದಾಯ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿಜಯನಗರಂ ಜಿಲ್ಲೆಯ ತಹಸೀಲ್ದಾರ್ ಪ್ರಸಾದ್ ರಾವ್ ಅವರು ಕಾಂತಾರ ಸಿನಿಮಾದ ಪಂಜುರ್ಲಿಯಂತೆ ವೇಷ ಧರಿಸಿ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ತಹಸೀಲ್ದಾರ್ ಪ್ರಸಾದ್ ರಾವ್ ಅವರ ಕಾಂತಾರ ಚಿತ್ರದ ಪಂಜುರ್ಲಿ ದೈವದ ವೇಷ ಕಂಡು ಕಾರ್ಯಕ್ರಮದಲ್ಲಿದ್ದ ಗುಂಟೂರು ಜಿಲ್ಲಾಧಿಕಾರಿ ಕೂಡಾ ಶ್ಲಾಘಿಸಿದ್ದು, ಜೊತೆಗೆ ಪ್ರಸಾದ್ ರಾವ್ ಜತೆ ಸೆಲ್ಫಿ ತೆಗೆಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಪ್ರಸಾದ್ ರಾವ್ ಅವರ ವೇಷಕ್ಕೆ ಕಂದಾಯ ಇಲಾಖೆಯ ಇತರ ಅಧಿಕಾರಿಗಳು, ಸಿಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. 2022ನೇ ಸಾಲಿನ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿಯೂ ಕಾಂತಾರ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ.
ಕನ್ನಡದಲ್ಲಿ ಆರಂಭವಾದ ಕಾಂತಾರ ಗೆಲುವಿನ ಓಟ ಎಲ್ಲಾ ಭಾಷೆಗಳಿಗೂ ಹಬ್ಬಿದೆ. ಬಾಲಿವುಡ್ ನಲ್ಲಿ ಕಾಂತಾರ ಸಿನಿಮಾ ಈಗಾಗಲೇ 76 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ ಘಟಾನುಘಟಿಗಳ ಹುಬ್ಬೇರಿಸುವಂತೆ ಮಾಡಿದೆ.