ಕಾಂತಾರ ಚಿತ್ರದ ನಟ- ನಿರ್ದೇಶಕ ರಿಷಬ್ ಶೆಟ್ಟಿ ಅವರು ಸದ್ಯ ಯಶಸ್ಸಿನ ಸಂತಸ ಅನುಭವಿಸಿದ್ದಾರೆ. ಇತ್ತೀಚೆಗೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಚಿತ್ರ ನೋಡಿ ಟ್ವೀಟ್ ಮಾಡಿದ್ದಾಗ ರಿಷಬ್ ಪುಳಕಗೊಂಡಿದ್ದರು. ಇದೀಗ ರಿಷಬ್ ಅವರು ರಜಿನಿಕಾಂತ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಅವರೇ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. “ನೀವು ಒಂದ್ ಸಲ ಹೊಗಳಿದರೆ ನೂರು ಸಲ ಹೊಗಳ್ದ೦ಗೆ ನಮಗೆ. ಧನ್ಯವಾದಗಳು ರಜಿನಿಕಾಂತ್ ಸರ್, ನಮ್ಮ ಕಾಂತಾರ ಚಿತ್ರ ನೋಡಿ ನೀವು ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ’ ಎಂದು ರಿಷಬ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ರಜಿನಿಕಾಂತ್ ಅವರು ಕಾಂತಾರ ಚಿತ್ರ ವೀಕ್ಷಿಸಿ ರಿಷಬ್ ಶೆಟ್ಟಿ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದರು. ಕಾಂತಾರ ಚಿತ್ರವನ್ನು ಭಾರತೀಯ ಸಿನಿಮಾದ ಮಾಸ್ಟರ್ ಪೀಸ್ ಎಂದು ತಲೈವಾ ಹೊಗಳಿದ್ದರು.
ಇದನ್ನೂ ಓದಿ:ಟೇಕ್-ಆಫ್ ಆಗುವ ಮುನ್ನ ಇಂಡಿಗೋ ವಿಮಾನದ ಇಂಜಿನ್ ಗೆ ಬೆಂಕಿ: VIDEO
Related Articles
ಸೆ.30ರಂದು ತೆರೆಕಂಡ ಕಾಂತಾರ ಚಿತ್ರವು ದೇಶದೆಲ್ಲೆಡೆ ಅದ್ಭುತ ಪ್ರದರ್ಶನ ನೀಡುತ್ತಿದೆ. ಬಿಡುಗಡೆಯಾಗಿ ತಿಂಗಳಾದರೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 200 ಕೋಟಿ ರೂ ಬ್ಯುಸಿನೆಸ್ ಮಾಡಿರುವ ಕಾಂತಾರ, ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡ ಚಿತ್ರ ಎಂಬ ದಾಖಲೆಯನ್ನೂ ಬರೆದಿದೆ.
ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ನಡಿ ವಿಜಯ್ ಕಿರಗಂದೂರು ನಿರ್ಮಿಸಿದ್ದರು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಚಿತ್ರದಲ್ಲಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.