Advertisement

ಕಾಂತಾರ-2 ದೈವೇಚ್ಛೆಗೆ ಬಿಟ್ಟದ್ದು: ನಟ,ನಿರ್ದೇಶಕ ರಿಷಬ್‌ ಶೆಟ್ಟಿ

11:50 PM Oct 05, 2022 | Team Udayavani |

ಮಂಗಳೂರು: ಕಾಂತಾರ ಚಲನಚಿತ್ರ ಅದ್ಭುತ ಯಶಸ್ಸು ಕಾಣುತ್ತಿರುವಂತೆಯೇ ಇದೀಗ ಕಾಂತಾರ-2 ಬರಲಿದೆಯೇ ಎಂಬ ಕುತೂಹಲ ಚಿತ್ರ ಪ್ರೇಮಿಗಳನ್ನು ಕಾಡುತ್ತಿದೆ. ಈ ಕುತೂಹಲವನ್ನು ಹಾಗೆಯೇ ಉಳಿಸಿಕೊಂಡಿರುವ ಚಿತ್ರದ ನಾಯಕ-ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಇದನ್ನು ದೈವೇಚ್ಛೆಗೆ ಬಿಟ್ಟಿದ್ದೇನೆ ಎಂದಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂತಾರ-2 ಬರಲಿದೆಯೇ?’ ಎಂಬ ಸುದ್ದಿಗಾರರ ಪ್ರಶ್ನೆಗೆ, “ಈಗಷ್ಟೇ ಸಿನೆಮಾ ಬಂದಿದೆ. ರಾಜ್ಯ ಮಾತ್ರವಲ್ಲದೆ ದೇಶ ವಿದೇಶ ಗಳಲ್ಲೂ ಅದ್ಭುತ ಸ್ಪಂದನೆ ವ್ಯಕ್ತವಾ ಗಿದೆ. “ಕಾಂತಾರ-2’ರ ಬಗ್ಗೆ ಈಗಲೇ ಏನನ್ನೂ ಹೇಳಲಾರೆ. ದೈವದ ಇಚ್ಛೆ ಇದ್ದರೆ ಬರಬಹುದು ಎನ್ನುವ ಮೂಲಕ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ.

ಕಾಂತಾರ ಎಂದರೆ ನಿಗೂಢ ಕಾಡು. ಕಾಂತಾರ ಸಿನೆಮಾ ಒಂದು ಸವಾಲು ಆಗಿತ್ತು. ನಾಡಿನ ನಂಬಿಕೆ, ಆಚಾರ, ವಿಚಾರಗಳಿಗೆ, ದೈವರಾಧನೆಗೆ ಎಲ್ಲೂ ಧಕ್ಕೆಯಾಗದಂತೆ, ಅದರ ಶ್ರೇಷ್ಠತೆ,ಪಾವಿತ್ರ್ಯವನ್ನು ಕಾಪಾಡಿಕೊಂಡು ಸಿನೆಮಾ ಮಾಡಬೇಕಾಗಿತ್ತು. ನಾನು ಎಳೆಯ ಪ್ರಾಯಗಳಿಂದಲೂ ದೈವ, ದೇವರುಗಳ ಬಗ್ಗೆ ಭಕ್ತಿ ಇರಿಸಿಕೊಂಡವನು. ಆರಾಧಿಸುತ್ತಾ ಬಂದವನು. ದೈವಾರಾಧನೆಯ ಜತೆಗೆ ಬೆಳೆದವನು. ದೈವಗಳ ಕೃಪೆಯಿಂದ, ಎಲ್ಲರ ಸಹಕಾರದಿಂದ ಕಾಂತಾರ ಸಿನೆಮಾ ಸಾಕಾರಗೊಂಡಿದೆ. ಈ ಸಿನೆಮಾ ನಮ್ಮಿಂದ ಆಗಿದ್ದು ಎಂದು ನಾನು ಹೇಳುವುದಿಲ್ಲ. ನಂಬಿರುವ ದೈವಗಳೇ ಮಾಡಿಸಿದ್ದು ಎಂದಷ್ಟೆ ಹೇಳಬಲ್ಲೆ ಎಂದರು.

ಚಿತ್ರದ ಯಶಸ್ಸು ಕಂಡು ಇದೀಗ ಹಿಂದಿ, ಮಲಯಾಳ, ತೆಲುಗು, ತಮಿಳು ಭಾಷೆಗಳವರಿಂದ ಆ ಭಾಷೆಗಳಿಗೆ ಡಬ್ಬಿಂಗ್‌ಗೆ ಬೇಡಿಕೆ ಬರುತ್ತಿದ್ದು, ನಮ್ಮ ಪ್ರೊಡಕ್ಷನ್‌ ಹೌಸ್‌ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಇಡಿ ಚಿತ್ರವನ್ನು ದೈವ ನರ್ತಕರು ಹಾಗೂ ಅವರ ಕುಟುಂಬಕ್ಕೆ ಸಮ ರ್ಪಿಸಿದ್ದೇನೆ. ದೈವದ ಸೇವೆ ಮಾಡು ವಂಥದ್ದು ವಿಶೇಷ ಮತ್ತು ಪುಣ್ಯದ ಕಾರ್ಯ. ಆನೇಕ ವರ್ಷಗಳಿಂದ ಊರಿಗೆ ಬಾರದ, ದೈವಗಳ ಕೋಲ, ನೇಮಗಳಲ್ಲಿ ಪಾಲ್ಗೊಳ್ಳದ ಹಲವಾರು ಮಂದಿ ಇದೀಗ ಊರಿಗೆ ಬರಬೇಕು, ನಮ್ಮ ಮನೆತನದ, ಊರಿನ ಕೋಲ, ನೇಮಗಳಲ್ಲಿ ಪಾಲ್ಗೊಳುವಂತೆ ಪ್ರೇರಣೆ ಆಗಿರುವುದಾಗಿ ದೂರವಾಣಿ ಕರೆ, ಸಂದೇಶಗಳಲ್ಲಿ ತಿಳಿಸುತ್ತಿದ್ದಾರೆ ಎಂದರು.

Advertisement

ಕಾಂತಾರದ ನಾಯಕಿ ನಟಿ ಸಪ್ತಮಿ ಗೌಡ ಮಾತನಾಡಿ, ನಾನು ಬೆಂಗಳೂರಿನವಳು; ಈ ಚಿತ್ರದಲ್ಲಿ ನಟಿಸುವ ಮೊದಲು ಕೋಲ, ನೇಮಗಳ ಬಗ್ಗೆ ತಿಳಿದಿರಲಿಲ್ಲ. ಅವುಗಳ ಆಚಾರ, ವಿಚಾರ, ನಂಬಿಕೆಗಳ ಬಗ್ಗೆ ಅರಿತುಕೊಂಡು ಚಾಚೂ ತಪ್ಪದೆ ಶ್ರದ್ಧೆಯಿಂದ ಪಾತ್ರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಇಲ್ಲಿಗೆ ಬಂದು ಕೋಲ, ನೇಮಗಳಲ್ಲಿ ಭಾಗವಹಿಸುತ್ತೇನೆ ಎಂದು ಕೋಲ, ನೇಮ ತನ್ನ ಮೇಲೆ ಬೀರಿರುವ ಪ್ರಭಾವವನ್ನು ವ್ಯಕ್ತಪಡಿಸಿದರು.

ಪಾತ್ರಧಾರಿಗಳಾದ ಪ್ರಮೋದ್‌ ಶೆಟ್ಟಿ, ದೈವನರ್ತಕ ಮುಖೇಶ್‌, ಪ್ರಕಾಶ್‌ ತುಮಿನಾಡು, ಶನಿಲ್‌ ಗುರು, ಸ್ವರಾಜ್‌ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next