Advertisement

“ಕಣ್ಣೂರು ವಿಮಾನ ನಿಲ್ದಾಣ ಕೊಡಗಿನ ಅಭಿವೃದ್ಧಿಗೆ ಪೂರಕ’

03:05 PM Mar 28, 2017 | |

ಮಡಿಕೇರಿ: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ನಂತರ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ವಾದ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ತುಳಸಿದಾಸ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕಣ್ಣೂರು ಏರ್‌ಪೋರ್ಟ್‌ನಿಂದಾಗಿ ಜಿಲ್ಲೆಗೆ ಆಗುವ ಪ್ರಯೋಜನಗಳ ಕುರಿತು ಜಿಲ್ಲಾ ಚೇಂಬರ್‌ ಆಫ್ ಕಾಮರ್ಸ್‌ ವತಿಯಿಂದ ಶುಕ್ರವಾರ ಸಂಜೆ ನಗರದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ವಿಮಾನ ನಿಲ್ದಾಣದ ಕಾಮಗಾರಿ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಮೇ ಅಂತ್ಯಕ್ಕೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ. ಜೂನ್‌ನಿಂದ ಮೂರು ತಿಂಗಳ ಕಾಲ ಪರೀಕ್ಷಾರ್ಥ ಹಾರಾಟ ನಡೆಯಲಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪರವಾನಗಿ ದೊರೆಯುವ ವಿಶ್ವಾಸವಿದೆ. ಸೆಪ್ಟಂಬರ್‌ ತಿಂಗಳಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.

2013ರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಆರಂಭವಾಯಿತು. ರನ್‌ವೇ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಟರ್ಮಿನಲ್‌ ಕೂಡಾ ಕೊನೆ ಹಂತದಲ್ಲಿದ್ದು, ಯಂತ್ರೋಪಕರಣಗಳ ಜೋಡಣೆ ನಡೆಯುತ್ತಿದೆ ಎಂದರು.

ಮೊದಲ ಹಂತದಲ್ಲಿ 3,050 ಮೀಟರ್‌ ಅಂದರೆ ಹತ್ತು ಸಾವಿರ ಅಡಿಗಳ ರನ್‌ವೇ ಬಳಕೆಗೆ ಲಭ್ಯವಾಗಲಿದೆ. ಬಳಿಕ ಎರಡನೇ ಹಂತದಲ್ಲಿ ಈ ರನ್‌ವೇಯನ್ನು 3,400 ಮೀಟರ್‌ಗಳಿಗೆ ವಿಸ್ತರಿಸಲಾಗುವುದು. ಮೂರನೇ ಹಂತದಲ್ಲಿ 4000 ಮೀಟರ್‌ಗಳ ರನ್‌ ವೇ ಸಿದ್ಧವಾಗಲಿದೆ. ಇದರಿಂದಾಗಿ ದೇಶದಲ್ಲಿಯೇ ಪ್ರಮುಖ ವಿಮಾನ ನಿಲ್ದಾಣವಾಗಲಿದೆ. ಆರಂಭದಲ್ಲಿ ವರ್ಷಕ್ಕೆ 1.5 ಮಿಲಿಯನ್‌ ಪ್ರಯಾಣಿಕರನ್ನು ನಿರೀಕ್ಷಿಸಲಾಗಿದೆ. ನಂತರದ ದಿನಗಳಲ್ಲಿ ಈ ಸಂಖ್ಯೆ 9 ಮಿಲಿಯನ್‌ಗೆ ಏರಿಕೆಯಾಗಲಿದೆ ಎಂದು ಹೇಳಿದರು.

ಸಾಕಷ್ಟು ವರ್ಷಗಳ ಭವಿಷ್ಯದ ದೃಷ್ಟಿಕೋನದಡಿ ಕಣ್ಣೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಟರ್ಮಿನಲ್‌ 10 ಲಕ್ಷ ಚದರ ಅಡಿಗಳ ವಿಸ್ತೀರ್ಣ ಹೊಂದಿದ್ದು, ಎಂತಹ ಒತ್ತಡವನ್ನು ಬೇಕಾದರೂ ತಡೆದುಕೊಳ್ಳಲಿದೆ. ಆರಂಭದಲ್ಲಿ 20 ವಿಮಾನಗಳು ನಿಲ್ಲುವ ಸೌಲಭ್ಯವಿರಲಿದ್ದು, ನಂತರದ ದಿನಗಳಲ್ಲಿ ಈ ಸಾಮರ್ಥ್ಯ ದ್ವಿಗುಣಗೊಳ್ಳಲಿದೆ. ಕೇಂದ್ರ ಸರಕಾರ, ಕೇರಳ ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿದ್ದು, 5000 ಷೇರುದಾರರಿದ್ದಾರೆ ಎಂದರು.

Advertisement

ಕೊಡಗಿಗೆ ಪ್ರಯೋಜನ
ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಜಿಲ್ಲೆಗೆ ಸಾಕಷ್ಟು ಪ್ರಯೋಜನವಾಗಲಿದೆ. ಈಗ ಕಣ್ಣೂರಿನಿಂದ ಮಡಿಕೇರಿಗೆ 2.30 ಗಂಟೆಗಳ ಪ್ರಯಾಣವಿದ್ದು, ಕೊಡಗಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಕೇರಳ ಭಾಗದಲ್ಲಿ ಜಿಲ್ಲೆಯ ಗಡಿ ತನಕ ರಸ್ತೆ ವಿಸ್ತರಣೆ, ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ಕೇವಲ 2 ಗಂಟೆಯಲ್ಲಿ ಮಡಿಕೇರಿ ಹಾಗೂ 1.30 ಗಂಟೆಯಲ್ಲಿ ವಿರಾಜಪೇಟೆಗೆ ತಲುಪಬಹುದಾಗಿದೆ. ಅಂತಾರಾಷ್ಟ್ರೀಯ ವಿಮಾನಗಳು ಇಲ್ಲಿ ಬಂದಿಳಿಯುವುದರಿಂದ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ, ಕೊಲ್ಲಿ ರಾಷ್ಟ್ರಗಳಿಗೆ ನೇರ ಸಂಪರ್ಕ ಹೊಂದಲಿದೆ. ಇದರಿಂದಾಗಿ ವಾಣಿಜ್ಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮದಲ್ಲಿ ಗಣನೀಯ ಪ್ರಮಾಣ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಕೃಷಿಗೆ ಉತ್ತೇಜನ: ಮುಖ್ಯವಾಗಿ ಕೊಡಗಿನಲ್ಲಿ ಹೈಟೆಕ್‌ ಕೃಷಿ ಪದ್ಧತಿಯನ್ನು ಅಳವಡಿಸಲು ಪೋ›ತ್ಸಾಹ ನೀಡಲಾಗುವುದು. ಕಡಿಮೆ ಜಾಗದಲ್ಲಿ ಗುಣಮಟ್ಟದ ಹೆಚ್ಚು ಫ‌ಸಲು ಪಡೆಯುವುದರಿಂದ ಇವುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ನೇರವಾಗಿ ಪೂರೈಸಬಹುದಾಗಿದೆ. ಅದೇ ರೀತಿ ಕೊಡಗು ಪುಷೊ³àದ್ಯಮಕ್ಕೆ ಸೂಕ್ತ ವಾತಾವರಣವನ್ನು ಹೊಂದಿರುವುದರಿಂದ ಇಲ್ಲಿನ ಹೂವುಗಳಿಗೆ ಸಾಕಷ್ಟು ಬೇಡಿಕೆ ಬರಲಿದೆ. ಇಲ್ಲಿಂದ ಪೂರೈಕೆಯಾಗುವ ತರಕಾರಿ, ಹೂವುಗಳನ್ನು ಶೇಖರಿಸಿಡಲು ವಿಮಾನ ನಿಲ್ದಾಣದಲ್ಲಿ ಶೀತಲೀಕರಣ ಘಟಕವನ್ನೂ ಸ್ಥಾಪಿಸಲಾಗುತ್ತಿದೆ ಎಂದರು.

ವಿಶೇಷವಾಗಿ ಕಣ್ಣನೂರು ವಿಮಾನ ನಿಲ್ದಾಣದಿಂದ ಕೊಡಗಿನ ಪ್ರವಾಸೋದ್ಯಮದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ವಯನಾಡು, ಬೇಕಲ್‌ಕೋಟೆ, ನೀಲೇಶ್ವರದೊಂದಿಗೆ ಕೊಡಗನ್ನು ಕೂಡಾ ಸೇರಿಸುವುದರಿಂದ ಅಲ್ಲಿಗೆ ಬರುವ ಪ್ರವಾಸಿಗರು ಕೊಡಗಿಗೂ ಭೇಟಿ ನೀಡಲಿದ್ದಾರೆ. ಅದೇ ರೀತಿ ದೇಶದ ನಾನಾ ಭಾಗಗಳಿಂದ ಕೊಡಗಿಗೆ ಕಣ್ಣೂರು ವಿಮಾನ ನಿಲ್ದಾಣದಿಂದ ಪ್ರವಾಸಿಗರು ಬರಲಿದ್ದಾರೆ. ಪರಿಣಾಮ, ಪ್ರವಾಸೋದ್ಯಮದೊಂದಿಗೆ ಟ್ಯಾಕ್ಸಿ, ಹೊಟೇಲ್‌ ಹೋಂಸ್ಟೇಗಳು ಕೂಡಾ ಪ್ರಯೋಜನ ಪಡೆಯುತ್ತವೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ ಮಾತನಾಡಿ, ಪ್ರವಾಸೋದ್ಯಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕೊಡಗಿಗೆ ಈ ವಿಮಾನ ನಿಲ್ದಾಣದಿಂದ ಹೆಚ್ಚು ಪ್ರಯೋಜನವಾಗಬಹುದು. ಈಗಾಗಲೇ ಜಿಲ್ಲೆಯಲ್ಲಿ 3000 ಕ್ಕೂ ಹೆಚ್ಚು ಹೋಂಸ್ಟೇಗಳಿವೆ. ಅದೇ ರೀತಿ ಇಲ್ಲಿನ ವಾಹನಗಳಿಗೆ, ಫ‌ಲಪುಷ್ಪ ಹಾಗೂ ಸಂಬಾರ ಪದಾರ್ಥಗಳಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಪಡಿಸಿದರು. 

ಕೊಡಗು ಟೂರಿಸಂ ಅಸೋಸಿಯೇಷನ್‌  ಅಧ್ಯಕ್ಷ ಚೆಯ್ಯಂಡ ಸತ್ಯ ಮಾತನಾಡಿ, ಕೇರಳದಲ್ಲಿ ಕರ್ನಾಟಕದ ವಾಹನಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ಹೊರೆಯಾಗುತ್ತಿದೆ. ಅದೇ ರೀತಿ ಕೇರಳ ಕೂಡಾ ನಮ್ಮಲ್ಲಿ ಹೆಚ್ಚು ತೆರಿಗೆ ಎಂದು ಆರೋಪಿಸುತ್ತಿವೆ. ಈ ಕುರಿತು ಸಂಬಂಧಪಟ್ಟವರು ಮಾತುಕತೆ ನಡೆಸಬೇಕು ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಚೇಂಬರ್‌ ಆಫ್ ಕಾಮರ್ಸ್‌ ಅಧ್ಯಕ್ಷ ಬಿ.ಎನ್‌. ಪ್ರಕಾಶ್‌, ಜಿ. ಚಿದ್ವಿಲಾಸ್‌, ಕೇಶವ್‌ ಕಾಮತ್‌, ನಾಗೇಂದ್ರ ಪ್ರಸಾದ್‌, ಮೋಂತಿ ಗಣೇಶ್‌, ಕಣ್ಣೂರು ಚೇಂಬರ್‌ ಆಫ್ ಕಾಮರ್ಸ್‌ನ ಅಧ್ಯಕ್ಷ ದೀಪಕ್‌, ಅತಿಥಿ ಹೋಟೆಲ್‌ನ ಮಾಲಕ ಭಾಸ್ಕರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next