Advertisement

ಕಂಚಿನಡ್ಕ: ಭೂಮಿ ಅತಿಕ್ರಮಣ, 45ಕ್ಕೂ ಮಿಕ್ಕಿ ಗುಡಿಸಲು ನಿರ್ಮಾಣ

07:00 AM Apr 05, 2018 | Team Udayavani |

ಪಡುಬಿದ್ರಿ: ಪಡುಬಿದ್ರಿ ಗ್ರಾ. ಪಂ. ವ್ಯಾಪ್ತಿಯಲ್ಲಿ ನಿವೇಶನ ರಹಿತರು ಸುಮಾರು 650ಕ್ಕೂ ಮೇಲ್ಪಟ್ಟು ಅರ್ಜಿ ನೀಡಿದ್ದು, 8 ವರ್ಷಗಳಿಂದಲೂ ಬಾಕಿ ಇದೆ. ಈ ನಿವೇಶನ ರಹಿತರಲ್ಲಿ ಸುಮಾರು 45ಕ್ಕೂ ಹೆಚ್ಚು ಮಂದಿ ಪಡುಬಿದ್ರಿಯ ಕಂಚಿನಡ್ಕ ಪೊಲೀಸ್‌ ಕ್ವಾರ್ಟರ್ಸ್‌ ಹಿಂಬದಿಯ ಪೊಲೀಸ್‌ ಇಲಾಖೆಗೆ ಹಾಗೂ ಸರಕಾರಿ ಜಿ. ಪಂ. ಶಾಲೆಗಳಿಗೆ ಒಳಪಟ್ಟಿರುವ 75 -3 ಎ 1.57ಎಕ್ರೆ ಭೂಮಿಯನ್ನು ಅತಿಕ್ರಮಿಸಿದ್ದಾರೆ. ವಾರದ ಹಿಂದೆಯಷ್ಟೇ ಈ ಗುಡಿಸಲುಗಳ ನಿರ್ಮಾಣವಾಗಿದೆ. ತಹಶೀಲ್ದಾರ್‌ ಜಾನ್‌ ಪ್ರಕಾಶ್‌ ರೋಡ್ರಿಗಸ್‌ ಪೊಲೀಸ್‌ ಅಧಿಕಾರಿಗಳ ಜತೆಗೆ ಆಗಮಿಸಿ ಸ್ಥಳ ತನಿಖೆಯನ್ನು ಈಗಾಗಲೇ ನಡೆಸಿದ್ದಾರೆ. 

Advertisement

ಇದೇ ವೇಳೆ ಮೊಗವೀರ ಜನಾಂಗದವರಿಗೆ 1961ರಲ್ಲಿ ಮೀಸಲಿರಿಸಿದ್ದ ತುಳುವ ಸಂಗಮ ಬಳಿಯ ನಡಾಲು ಗ್ರಾಮದ ಸ. ನಂ. 77ರಲ್ಲಿನ ಅಂಶದಲ್ಲಿಯೂ ಸುಮಾರು ಐದಾರು ಗುಡಿಸಲುಗಳ ನಿರ್ಮಾಣವಾಗಿದ್ದು, ಗ್ರಾಮ ಲೆಕ್ಕಿಗ ಶ್ಯಾಮ್‌ಸುಂದರ್‌, ಕಂದಾಯ ಪರಿವೀಕ್ಷಣಾಧಿಕಾರಿ ರವಿಶಂಕರ್‌ ಈ ವಿವಾದಿತ ಸ್ಥಳದ ಪರಿಶೀಲನೆಯನ್ನು ನಡೆಸಿದ್ದಾರೆ. 

ಗ್ರಾ. ಪಂ.ಗೆ ನಿವೇಶನ ರಹಿತರ ಅರ್ಜಿ
ಪೊಲೀಸ್‌ ಭೂಮಿಯಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿರುವ ಸುಮಾರು 25 – 30 ಮಂದಿ ಲೋಕೇಶ್‌ ಕಂಚಿನಡ್ಕ ನೇತೃತ್ವದಲ್ಲಿ ಪಂಚಾಯತಿಗೆ ಅರ್ಜಿಯೊಂದನ್ನು ನೀಡಿದ್ದು, ತಮಗೆ ಅದೇ ಸ್ಥಳದಲ್ಲಿ ಮನೆ ನಿವೇಶನಗಳನ್ನಿತ್ತು ಹಕ್ಕುಪತ್ರವನ್ನು ದೊರಕಿಸಿಕೊಡುವಂತೆ ಮನವಿ ಮಾಡಿರುತ್ತಾರೆ.

ಅಲ್ಲಗಳೆವ ಮೊಗವೀರರು
ಆದರೆ ಈ ವಾದವನ್ನು ಮೊಗವೀರ ನಾಯಕ ಸದಾಶಿವ ಪಡುಬಿದ್ರಿ ಅಲ್ಲಗೆಳೆಯುತ್ತಿದ್ದಾರೆ. 1961ರಲ್ಲಿ ಸಮುದ್ರ ಕೊರೆತವುಂಟಾಗಿ ಅಳಿವೆ ಕಡಿದು ಹೋದ ಸಂದರ್ಭ ಮನೆ, ಮಠಗಳನ್ನು ಕಳೆದುಕೊಂಡ ಮೊಗವೀರ ಜನಾಂಗದ 42 ಮಂದಿಗೆ ಕಾದಿರಿಸಿದ ಸ್ಥಳ ಇದಾಗಿತ್ತು. ತಾವೀಗ ಕುಂದಾಪುರ ಸಹಾಯಕ ಕಮಿಶನರ್‌ ನ್ಯಾಯಾಲಯ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದಲ್ಲೂ ತಮ್ಮ ಜಾಗವನ್ನು ತಮಗೆ ಮರಳಿಸಿ ಎಂದು ಮೇಲ್ಮನವಿಯನ್ನು ಸಲ್ಲಿಸಿದ್ದೇವೆ. ಈಗ ವಾಸವಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಿರುವುದನ್ನೂ ನಾವು ಆಕ್ಷೇಪಿಸಿದ್ದೇವೆ. ನ್ಯಾಯಾಲಯದಲ್ಲಿ ಕೇಸು ವಿಚಾರಣೆಯಲ್ಲಿರುವ ವೇಳೆಯೇ ಸುಮಿತ್ರಾ ಎಂಬವರು ಮನೆಯೊಂದನ್ನು ಕಟ್ಟಿದ್ದು, ಅದನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆ ಈಚೆಗಷ್ಟೇ ಆದೇಶಿಸಿದೆ. ಪಡುಬಿದ್ರಿ ಗ್ರಾ. ಪಂ. ಕೂಡ ಸರ್ವಾನುಮತದಿಂದ ಈ ಜಾಗವನ್ನು ಯಾರಿಗೂ ಅತಿಕ್ರಮಿಸಲು ಬಿಡಬಾರದಾಗಿ ನಿರ್ಣಯ ಕೈಗೊಂಡಿದೆ ಎಂದಿದ್ದಾರೆ. ಆದರೆ ಈ ಸಂಬಂಧ ಇದುವರೆಗೂ ಯಾವುದೇ ಆದೇಶ ಜಾರಿಯಾಗಿಲ್ಲ ಎಂದು ಸದಾಶಿವ ಪಡುಬಿದ್ರಿ ಹೇಳುತ್ತಾರೆ. 

ನಮ್ಮ ಜಾಗವನ್ನು ಗುರುತಿಸಿಕೊಡಿ
ಈ ನಡುವೆ ಪೊಲೀಸ್‌ ಇಲಾಖೆ ಅಧಿಕಾರಿಗಳು ತಮಗೆ ಕಾದಿರಿಸಿದ ಸ್ಥಳವನ್ನು ಅಳತೆ ಮಾಡಿಸಿ ಗಡಿ ಗುರುತನ್ನು ಹಾಕಿ ಕೊಡುವಂತೆ ಪಡುಬಿದ್ರಿ ಪಿಎಸ್‌ಐ ಸತೀಶ್‌ ಅವರ ಮೂಲಕ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಗಡಿ ಗುರುತು ಆದ ಕೂಡಲೇ ತಾವು ಮುಳ್ಳುತಂತಿ ಬೇಲಿಯನ್ನು ನಿರ್ಮಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಮೀಸಲು ಸ್ಥಳದಲ್ಲಿ ನಿವೇಶನ ಹಂಚಿಕೆ ಇಲ್ಲ
ಅದು ವಿವಿಧ ಇಲಾಖೆಗಳಿಗೆ ಕಾದಿರಿಸಿದ ಸ್ಥಳವಾಗಿರುವುದರಿಂದ ಹಾಗೂ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅರ್ಜಿಗೆ ಯಾವುದೇ ಹಿಂಬರಹ ನೀಡಲಾಗಿಲ್ಲ. ಮುಂದೆ ಕಂದಾಯ ಇಲಾಖೆ ಈ ಜಮೀನನ್ನು ಈಗ ನೀಡಲಾಗಿರುವ ಪೊಲೀಸ್‌ ಮತ್ತು ಶಿಕ್ಷಣ ಇಲಾಖೆಗಳಿಂದ ವಿರಹಿತಗೊಳಿಸಿ ಗ್ರಾ.ಪಂ.ಗೆ ಹಸ್ತಾಂತರಿಸಿದಲ್ಲಿ ಮಾತ್ರ ಅರ್ಹರಿಗೆ ಮನೆ ನಿವೇಶನಗಳನ್ನು ತಾವು ಹಂಚಿಕೊಡಬಹುದಾಗಿದೆ ಎಂದು ಗ್ರಾ. ಪಂ. ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ತಿಳಿಸಿದ್ದಾರೆ. 

ಅತಿಕ್ರಮಿಸಿ ಗುಡಿಸಲು ನಿರ್ಮಿಸಲಾಗಿರುವ ನಡಾಲು ಗ್ರಾಮದ ಮೊಗವೀರ ಜನಾಂಗ ದವರ ಜಾಗವೂ ಈಗ ಸರಕಾರಿ ಸ್ಥಳವಾಗಿದೆ. ಈಗ 10 – 20 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದ ಸುಮಾರು 30 ಕುಟುಂಬಗಳಿಗೆ 94 – ಸಿ ಅನ್ವಯ ಹಕ್ಕುಪತ್ರವನ್ನು ನೀಡಲಾಗಿದೆ ಎಂದೂ ಗ್ರಾ. ಪಂ. ಪಿಡಿಒ ವಿವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next