Advertisement

ಕರುನಾಡ ತಂಡದ ಹೊರಗೆ ಕನ್ನಡಿಗರ ಹವಾ!

11:57 AM Apr 28, 2018 | |

ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ಕರ್ನಾಟಕದ ಟೀಂ ಎಂದೇ ಹೆಸರಾಗಿತ್ತು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಕನ್ನಡದ ಬೆರಳೆಣಿಕೆಯ ಆಟಗಾರರು ಮಾತ್ರ ಇದ್ದಾರೆ. ಅವರಿಗೆ ಆಡುವ ಹನ್ನೊಂದು ಜನರ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಇನ್ನೊಂದೆಡೆ, ಬೇರೆ ತಂಡಗಳಿಗೆ ಸೇರಿ ಹೋಗಿರುವ ಕರ್ನಾಟಕದ ಆಟಗಾರರು ಪ್ರತಿ ಪಂದ್ಯದಲ್ಲಿಯೂ ಮಿಂಚುತ್ತಾ ದೊಡ್ಡ ಹೆಸರು ಮಾಡುತ್ತಿದ್ದಾರೆ.  

Advertisement

ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಹರಾಜು ಪ್ರಕ್ರಿಯೆಯ ನಂತರ ರಾಜ್ಯದ ಕನ್ನಡಿಗರಿಗೆ ಶ್ಯಾನೇ ಬೇಸರವಾಗಿತ್ತು. ನಮ್ಮನೆಯ ತಂಡ ಎಂದುಕೊಂಡಿದ್ದ ಆರ್‌ಸಿಬಿ ಉಫ್ì ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದಲ್ಲಿ ಪವನ್‌ ದೇಶಪಾಂಡೆ, ಅನಿರುದ್ಧ ಜೋಶಿ ಎಂಬ ಅನಾಮಿಕರ ಹೊರತಾಗಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಒಬ್ಟಾನೊಬ್ಬ ಆಟಗಾರನೂ ಇಲ್ಲ. ಹಾಗೆ ನೋಡಿದರೆ, ಈ ಬಾರಿಯ ಐಪಿಎಲ್‌ನ 11ನೇ ಆವೃತ್ತಿಯಲ್ಲಿ ಕರ್ನಾಟಕದ 11 ಆಟಗಾರರು ಹರಾಜಿನಲ್ಲಿ ದೊಡ್ಡ ಬೆಲೆಗೆ ಮಾರಾಟವಾಗಿದ್ದಾರೆ. ಬೆಂಗಳೂರು ತಂಡದಲ್ಲಿ ಕೆ.ಎಲ್‌.ರಾಹುಲ್‌ ಇಲ್ಲ, ಹೊಡಿಬಡಿ ಆಟದ ಕ್ರಿಸ್‌ ಗೇಲ್‌ ಇಲ್ಲ. ಇಂತಿಪ್ಪ ಕಾಲದಲ್ಲಿ ಬೆಂಗಳೂರಿಗಿಂತ ನಮಗೆ ಪಂಜಾಬ್‌, ನಮ್ಮೂರ ತಂಡ ಎನ್ನಿಸಿದರೆ ಅಚ್ಚರಿಯಿಲ್ಲ!

ಈ ರಾಹುಲ್‌ “ದ್ರಾವಿಡ್‌’ ಅಲ್ಲ!
ನಿಜ, ಹಿಂದಿ ಚಿತ್ರನಟಿ ಪ್ರೀತಿ ಜಿಂಟಾರ ಕಿಂಗ್ಸ್‌ ಇಲೆವೆಲ್‌ನಲ್ಲಿ ಕರ್ನಾಟಕದ ಮೂವರು ಆಟಗಾರರಿದ್ದಾರೆ. ರಾಹುಲ್‌ ಆರಂಭಿಕರಷ್ಟೇ ಅಲ್ಲ, ವಿಕೆಟ್‌ ಕೀಪರ್‌ ಕೂಡ ಹೌದು! ಇತ್ತ ರಾಜಸ್ಥಾನ್‌ ರಾಯಲ್ಸ್‌ನಲ್ಲೂ ನಮ್ಮೂರ ಮೂವರು! ಕೊಲ್ಕತ್ತಾ ನೈಟ್‌ ರೈಡರ್ನಲ್ಲಿ ರಾಬಿನ್‌ ಉತ್ತಪ್ಪ ಹಾಗೂ ಆರ್‌.ವಿನಯ್‌ಕುಮಾರ್‌, ಹೈದರಾಬಾದ್‌ನ ಸನ್‌ರೈಸರ್ನಲ್ಲಿ ಮನೀಶ್‌ ಪಾಂಡೆ. ಗಮನಿಸಬೇಕಾದುದೆಂದರೆ, ಕರ್ನಾಟಕದ ಬಹುತೇಕ ಆಟಗಾರರು ಆಡುವ ಹನ್ನೊಂದರಲ್ಲಿ ಅವಕಾಶ ಗಿಟ್ಟಿಸುತ್ತಿದ್ದಾರೆ ಮತ್ತು ಅವರ ಪ್ರದರ್ಶನ… ವಾಹ್‌Ì!

ಕಳೆದ ವರ್ಷ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಹುಲ್‌, ಸಂಪೂರ್ಣವಾಗಿ ಆವೃತ್ತಿಯಿಂದಲೇ ಹೊರಗುಳಿದಿದ್ದರು. ಈ ಬಾರಿ ಪಂಜಾಬ್‌ನಿಂದ ಬರೋಬ್ಬರಿ 11 ಕೋಟಿ ರೂ.ಗೆ ಖರೀದಿಯಾಗಿರುವ ಅವರು ಬೆಲೆಗೆ ತಕ್ಕ ಆಟ ಪ್ರದರ್ಶಿಸುತ್ತಿದ್ದಾರೆ. ರನ್‌ ಪಟ್ಟಿಯಲ್ಲಿ ಆರು ಪಂದ್ಯಗಳ ನಂತರ ಅವರಿಗೆ ಎರಡನೇ ಸ್ಥಾನ. ಆರಂಭಿಕವಾಗಿ ಅವರ ಹೊಡಿಬಡಿಯ ಇನಿಂಗ್ಸ್‌ ಈಗಾಗಲೇ 2 ಅರ್ಧ ಶತಕ ತಂದುಕೊಟ್ಟಿದೆ. ಬೌಂಡರಿ, ಸಿಕ್ಸರ್‌ನ್ನು ಲೀಲಾಜಾಲವಾಗಿ ಸಿಡಿಸುವ ರಾಹುಲ್‌ ವಿಕೆಟ್‌ ಕೀಪರ್‌ ಸ್ಥಾನವನ್ನೂ ತುಂಬಿ ತಂಡದೊಳಗೆ ಇನ್ನೊಬ್ಬ ಬ್ಯಾಟ್ಸ್‌ಮನ್‌ ತುಂಬುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಪಂಜಾಬ್‌, ಆರರಲ್ಲಿ 5 ಪಂದ್ಯ ಗೆಲ್ಲುವಲ್ಲಿ ಕ್ರಿಸ್‌ ಗೇಲ್‌ ಜೊತೆ ರಾಹುಲ್‌ ಕೂಡ ಕಾರಣ. ಅಷ್ಟಕ್ಕೂ ಪಂಜಾಬ್‌ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಗೇಲ್‌ ಆಡಿಯೇ ಇರಲಿಲ್ಲ!

ಮನೀಷ್‌ಗೇಕೆ ಆಕ್ರಮಣದತ್ತ ಮುನಿಸು?
11 ಕೋಟಿ ರೂ.ಗೇ ಹೈದರಾಬಾದ್‌ಗೆ ಮಾರಾಟವಾದ ಮನೀಶ್‌ ಪಾಂಡೆಯವರ ಆಟ ಸಪ್ಪೆ ಅನಿಸುತ್ತಿದೆ. ಅವರು ತಮ್ಮ ಹಿಂದಿನ ಆಕ್ರಮಣಕಾರಿ ಆಟಕ್ಕೆ ರಾಜೀನಾಮೆ ನೀಡಿದಂತಿದೆ. ಅಜೇಯ 57 ರನ್‌ಗಳ ಒಂದು ಇನಿಂಗ್ಸ್‌ ಹೊರತುಪಡಿಸಿ ಅವರು ಉಳಿದ ನಾಲ್ಕು  ಪಾಳಿಯಿಂದ ಬಂದಿದ್ದು 15 ರನ್‌ ಮಾತ್ರ. ಅದಕ್ಕಿಂತ ಮುಖ್ಯವಾಗಿ ಇಷ್ಟು ರನ್‌ಗಳನ್ನು 63 ಎಸೆತಗಳನ್ನು ಎದುರಿಸಿ ಕೇವಲ 4 ಬೌಂಡರಿ, ಒಂದು ಸಿಕ್ಸ್‌ ಸಹಾಯದಿಂದ ಗಳಿಸಿದ್ದಾರೆ. ತಂಡ ಮೊದಲ ಮೂರು ಪಂದ್ಯ ಗೆದ್ದ ನಂತರ ಸೋಲಿನ ಸುಳಿಗೆ ಸಿಲುಕಿರುವುದರಲ್ಲಿ, ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಖ್ಯಾತಿಯ ಪಾಂಡೆ ಅವರ ಬ್ಯಾಟಿಂಗ್‌ ವೈಫ‌ಲ್ಯವೂ ಕಾಣಿಕೆ ನೀಡಿದೆ.

Advertisement

ಪಂಜಾಬ್‌ನ ಯಶಸ್ಸಿನ ಪಯಣದಲ್ಲಿ ಕರ್ನಾಟಕದ ಕರುಣ್‌ ನಾಯರ್‌ಗೂ ಅಂಕವಿದೆ. ಈ ಮನುಷ್ಯ ಟೆಸ್ಟ್‌ ಮಾದರಿಗೆ ಮಾತ್ರ ಸೂಕ್ತ ಎಂಬ ನಂಬಿಕೆಯನ್ನು ಹೋಗಲಾಡಿಸುವ ಪ್ರಯತ್ನದಲ್ಲಿದ್ದಾರೆ. ಕಾರಣ, ಆಡಿರುವ ಐದು ಇನಿಂಗ್ಸ್‌ನಲ್ಲಿ ಒಂದು ಅರ್ಧ ಶತಕದ ಸಹಿತ 173 ರನ್‌ ಗಳಿಸಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಅವರು 30 ಪ್ಲಸ್‌ ರನ್‌ಗಳ ಕೊಡುಗೆಯನ್ನು ಚುರುಕಾಗಿ ನೀಡುತ್ತಿರುವುದು ತಂಡದ ಯಶಸ್ಸಿಗೂ ಅಲ್ಪ ಕಾಣಿಕೆ ನೀಡಿದೆ. ಮಾಯಾಂಕ್‌ ಅಗರ್‌ವಾಲ್‌ ಕೂಡ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಅವರ 93 ರನ್‌ ಕೇವಲ 62 ಚೆಂಡುಗಳಿಗೆ ಬಂದಿರುವುದು, ಅದರಲ್ಲಿ 9 ಬೌಂಡರಿ ಹೊರತಾಗಿ ನಾಲ್ಕು ಸಿಕ್ಸರ್‌ ಇರುವುದು ಗಮನಾರ್ಹ.

ಉತ್ತಪ್ಪ ಬೇಕಪ್ಪ !
ರಾಬಿನ್‌ ಉತ್ತಪ್ಪ, ಐಪಿಎಲ್‌ನ ಹಿರಿಯ ಆಟಗಾರ. ಅವರು ಕೊಲ್ಕತ್ತಾ ತಂಡದ ನಾಯಕತ್ವವನ್ನೇ ಪಡೆದುಕೊಳ್ಳುತ್ತಾರೆ ಎಂಬ ನಿರೀಕ್ಷೆ ಮಾತ್ರ ಹುಸಿ ಹೋಗಿದೆ. ಬ್ಯಾಟ್‌ ಮಾತ್ರ ಮಾತು ನಿಲ್ಲಿಸಿಲ್ಲ. ಆರು ಇನಿಂಗ್ಸ್‌ನಲ್ಲಿ 162 ರನ್‌, ಈಗಾಗಲೇ ಬಾರಿಸಿರುವ 10 ಸಿಕ್ಸರ್‌ ಅವರ ಹಿರಿಮೆಯನ್ನು ಎತ್ತಿಹಿಡಿದಿದೆ. 6.4 ಕೋಟಿ ರೂ.ಗೆ ಬಿಕರಿಯಾಗಿರುವ ಉತ್ತಪ್ಪ ಅವರನ್ನು ಈಗೀಗ ವಿಕೆಟ್‌ ಕೀಪಿಂಗ್‌ಗೆ ಬಳಸಿಕೊಳ್ಳಲಾಗುತ್ತಿಲ್ಲ. ತಮ್ಮ ಆಟದಿಂದ ಏಕ ವ್ಯಕ್ತಿ ಪ್ರದರ್ಶನದ ಮೂಲಕ ತಂಡವನ್ನು ಗೆಲ್ಲಿಸಬಲ್ಲ ಉತ್ತಪ್ಪ ಎಂತಹ ತಂಡಕ್ಕಾದರೂ ಬೇಕಪ್ಪ!

ಕೃಷ್ಣಪ್ಪ ಗೌತಮ್‌ ಅವರನ್ನು ಆಲ್‌ರೌಂಡರ್‌ ಬೌಲರ್‌ ಆಗಿ ರಾಜಸ್ಥಾನ್‌ ತಂಡ ತೆಗೆದುಕೊಳ್ಳುವಾಗ ಭಾರೀ ಎಂಬಂತಹ ಭರವಸೆಗಳನ್ನು ಆ ತಂಡ ಇಟ್ಟುಕೊಂಡದ್ದು ಸುಳ್ಳು. ಮೊನ್ನೆ ಮುಂಬೈ ಇಂಡಿಯನ್ಸ್‌ ತಂಡದ ಎದುರಿನ ಪಂದ್ಯದಲ್ಲಿ ಸೋಲಿನ ಭೀತಿ ಎದುರಾದಾಗಲೂ ಕಂಗೆಡದ ಕೆ.ಗೌತಮ್‌ 11 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸ್‌ ಸಮೇತ ಅಜೇಯ 33 ರನ್‌ ಬಾಚಿ ತಂಡಕ್ಕೆ ಗೆಲುವು ಗಳಿಸಿಕೊಟ್ಟರು. ಇದೇ ಪಂದ್ಯದಲ್ಲಿ ಮೂರು ಓವರ್‌ಗೆ ಗೌತಮ್‌ ಕೊಟ್ಟದ್ದು ಕೇವಲ 20 ರನ್‌. ನೆನಪಿಡಿ, ತಂಡದ ಪ್ರತಿ ಆಟಗಾರ ಒಂದೊಂದು ಪಂದ್ಯ ಗೆಲ್ಲಿಸುವ ಒಂದೊಂದು ಆಟ ಆಡಿದರೆ ಯಶ ಖಚಿತ. 

ಸೋರುತಿದೆ ರನ್‌!
ರಾಜಸ್ಥಾನ ತಂಡದ ಶ್ರೇಯಸ್‌ ಗೋಪಾಲ್‌ ಒಬ್ಬರೇ ಕರ್ನಾಟಕದ  ಬೌಲರ್‌  ಪೈಕಿ ಹೆಚ್ಚು ಪರಿಣಾಮಕಾರಿ ಯಾಗಿರುವುದು. ಆರು ಪಂದ್ಯದ ಐದು ಇನಿಂಗ್ಸ್‌ ಬೌಲಿಂಗ್‌ನಲ್ಲಿ ಅವರಿಗೆ ಐದು ವಿಕೆಟ್‌ ಸಿಕ್ಕಿದೆ. ಅವರ ರನ್‌ ನೀಡಿಕೆ ಸರಾಸರಿ ಕೇವಲ 7.06. ಹೀಗೆ ಲೆಕ್ಕ ಹಾಕಿ, ತಂಡದ 20 ಓವರ್‌ ಬೌಲಿಂಗ್‌ನಲ್ಲಿ ಎಲ್ಲರೂ ಇದೇ ಸರಾಸರಿಯಲ್ಲಿ ರನ್‌ ಕೊಟ್ಟಿದ್ದರೆ ಎದುರಾಳಿ ತಂಡದ ಮೊತ್ತ ಹೆಚ್ಚೆಂದರೆ 140 ರನ್‌ ಆಗುತ್ತಿತ್ತಷ್ಟೇ. ಬಹುಷಃ ಈಗ ಶ್ರೇಯಸ್‌ರ ಪ್ರಭಾವ ಅರ್ಥವಾಗಿರಬಹುದು. ಸ್ಟುವರ್ಟ್‌ ಬಿನ್ನಿ, ವಿನಯಕುಮಾರ್‌ ಈವರೆಗೆ ಕನ್ನಡದ ಬಾವುಟವನ್ನು ಎತ್ತಿಹಿಡಿಯುವ ಆಟ ಕೊಟ್ಟಿಲ್ಲ.

ಕೊನೇಮಾತು
ಕನ್ನಡಿಗರ ಮಾತೃ ತಂಡ ರಾಯಲ್‌ ಚಾಲೆಂಜರ್ ಈವರೆಗೆ ತನ್ನ ಕನ್ನಡಿಗ ಪ್ರತಿನಿಧಿಗಳಾದ ಪವನ್‌ ದೇಶಪಾಂಡೆ, ಅನಿರುದ್ಧ ಜೋಶಿ ಅವರಿಗೆ ಆಡುವ ಅವಕಾಶವನ್ನೇ ನೀಡಿಲ್ಲ!

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next