ವಿಜಯಪುರ: ಅಮೆರಿಕದ ನ್ಯೂಯಾರ್ಕ್ ರಾಜ್ಯದ ಕೌನ್ಸಿಲರ್ ಆಗಿ ಕನ್ನಡಿಗ, ವಿಜಯಪುರ ಮೂಲದ ನವೀನ್ ಹಾವಣ್ಣವರ ಆಯ್ಕೆಯಾಗಿದ್ದಾರೆ. ನವೀನ್ ಹಾವಣ್ಣವರ ನ್ಯೂಯಾರ್ಕ್‌ನ ರೋಚೆಸ್ಟರ್‌ನ ಪೀಟ್ಸ್‌ಬರ್ಗ್ ಪ್ರದೇಶದಿಂದ ಕೌನ್ಸಿಲರ್ ಸ್ಥಾನಕ್ಕೆ ಆಯ್ಕೆಯಾದ ಸುದ್ದಿ ತಿಳಿಯುತ್ತಲೇ ನಗರದಲ್ಲಿರುವ ಅವರ ಕುಟುಂಬದವರು ಸಿಹಿ ಹಂಚಿ ಸಂಭ್ರಮಿಸಿದರು. ಡೆಮಾಕ್ರಟಿಕ್ ಪಕ್ಷದಿಂದ ಜೋಡಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಹಾವಣ್ಣವರ 4,254 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಫಲಿತಾಂಶ ಪ್ರಕಟವಾಗುತ್ತಲೇ ವೀಡಿಯೋ ಕಾಲ್ ಮೂಲಕ ಹೆತ್ತವರೊಂದಿಗೆ ನವೀನ್ ಸಂತಸ ಹಂಚಿಕೊಂಡರು.
ಬಸವನಾಡು ಮೂಲ
ನವೀನ್ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರು. ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ಹಾವಣ್ಣವರ ಕುಟುಂಬದ ಪರಪ್ಪ-ರೇಣುಕಾ ದಂಪತಿಯ ಹಿರಿಯ ಪುತ್ರ.
ಅಮೆರಿಕದಂಥ ದೇಶದಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾಗಿರುವುದು ಹೆತ್ತವರ ಪರಿಶ್ರಮ, ಹಾರೈಕೆ ಹಾಗೂ ನನ್ನ ಸೌಭಾಗ್ಯ. ನನ್ನ ಪಕ್ಷ ನೀಡಿದ ಅವಕಾಶ. ಅಮೆರಿಕ ಸಂವಿಧಾನ ನೀಡಿರುವ ಅಧಿಕಾರ ಸದ್ಬಳಕೆ ಮಾಡಿಕೊಂಡು ಇಲ್ಲಿನ ಪ್ರಜೆಗಳು ನನ್ನ ಮೇಲೆ ಇರಿಸಿರುವ ಆಶಯಕ್ಕೆ ಧಕ್ಕೆ ಬಾರದಂತೆ ಪಾರದರ್ಶಕ ಹಾಗೂ ದಕ್ಷ ಸೇವೆ ನೀಡುತ್ತೇನೆ.
-ನವೀನ್ ಹಾವಣ್ಣವರ, ಯುಎಸ್‌ಎ ಕೌನ್ಸಿಲರ್