ಮುಂಬಯಿ, ಫೆ. 20: ಮೂರು ವರ್ಷಗಳ ಹಿಂದೆ ಅಂಧೇರಿ ಪಶ್ಚಿಮದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮೊಗವೀರ ಭವನದಲ್ಲಿ ಎರಡು ದಿನಗಳ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶ ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಮುಂಬಯಿ ಕನ್ನಡಿಗರದ್ದಾಗಿದೆ. ಆದ್ದರಿಂದ 2021ರ ಮಾರ್ಚ್ ಅಂತ್ಯದೊಳಗೆ ತೃತೀಯ ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶ ನಡೆಸುವಂತಿದ್ದರೆ ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣ ಸಹಯೋಗ ನೀಡಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಅಧ್ಯಕ್ಷ ಡಾ| ಮನು ಬಳಿಗಾರ್ ಭರವಸೆ ನೀಡಿದರು.
ಫೆ. 19ರಂದು ಸಂಜೆ ಮಾಟುಂಗಾ ಭಾವುದಾಜಿ ರಸ್ತೆಯ ಮೈಸೂರು ಅಸೋಸಿಯೇಶನ್ ಸಭಾಗೃಹಕ್ಕೆ ಆಗಮಿಸಿ ಕನ್ನಡ ಸಾಹಿತ್ಯ ಪರಿಷತ್ತು ಮುಂಬಯಿ ಘಟಕದ ಸಭೆಯನ್ನುದ್ದೇಶಿಸಿ ಡಾ| ಬಳಿಗಾರ್ ಮಾತನಾಡಿ, ಹೊರನಾಡಿನಲ್ಲಿ ಕನ್ನಡದ ತೇರನ್ನೆಳೆದು ಭಾಷಾ ಬೆಳವಣಿಗೆಗೆ ಅನಿಯಾಗುತ್ತಿರುವ ಮುಂಬಯಿವಾಸಿ ಕನ್ನಡಿಗರ ಕನ್ನಡದ ಸೇವೆಯನ್ನು ಮನಗಂಡು ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದಲ್ಲಿ ಬೃಹನ್ಮುಂಬಯಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಅಸ್ತಿತ್ವಕ್ಕೆ ತರಲಾಯಿತು.
ಈ ಘಟಕಕ್ಕೆ ಜಿಲ್ಲಾ ಮಟ್ಟದ ಮಾನ್ಯತೆ ನೀಡಿ ಚಾಲನೆಯನ್ನೀಡುವ ಭಾಗ್ಯ ನನ್ನದಾಯಿತು. ಈ ಮಾಯಾನಗರಿಯಲ್ಲಿ ಹತ್ತು ಹಲವಾರು ಕನ್ನಡ ಸಂಸ್ಥೆಗಳು ಇದ್ದು ಕನ್ನಡ ತಾಯಿ ಭುವನೇಶ್ವರಿಯ ಸೇವೆಯಲ್ಲಿ ತೊಡಗಿಸಿ ಹೊರನಾಡಿನಲ್ಲಿ ಕನ್ನಡ ಏಳ್ಗೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿರುವುದು ಅಭಿನಂದನೀಯ. ಈ ಮೂಲಕ ಕನ್ನಡ ಭಾಷೆಯು ಜಾಗತಿಕವಾಗಿ ಪಸರಿಸಿದ್ದು ಮತ್ತೆ ಅಖೀಲ ಭಾರತ ಹೊರನಾಡ ಕನ್ನಡಿಗರ ಸಮಾವೇಶವ ಆಯೋಜಿಸುವಲ್ಲಿ ಕನ್ನಡಿಗ ಸಂಘ ಸಂಸ್ಥೆಗಳು ಸಂಘಟಿತರಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಬೃಹನ್ಮುಂಬಯಿ ಘಟಕದ ಅಧ್ಯಕ್ಷ ಡಾ| ಗಣಪತಿ ಶಂಕರಲಿಂಗ ಅವರು ಪುಷ್ಪಗುಪfವನ್ನಿತ್ತು ಬಳಿಗಾರ್ ಅವರನ್ನು ಸ್ವಾಗತಿಸಿದರು. ಸಭೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಉಪಾಧ್ಯಕ್ಷ ಅಶೋಕ್ ಎಸ್. ಸುವರ್ಣ, ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಮನೋಹರ್ ಎಂ. ಕೋರಿ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್‌ಕುಮಾರ್ ಪೊಲಿಪು, ಮೈಸೂರು ಅಸೋಸಿಯೇಶನ್‌ನ ಡಾ| ಬಿ. ಆರ್. ಮಂಜುನಾಥ್, ಕೆ. ಮಂಜುನಾಥಯ್ಯ, ಭವಾನಿ ಭಾರ್ಗವ್, ಬಿ. ಕೆ. ಮಧುಸೂದನ್ ಅವರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಬೃಹನ್ಮುಂಬಯಿ ಘಟಕದ ಕೋಶಾಧಿಕಾರಿ ಮಂಜುನಾಥ ದೇವಾಡಿಗ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್