ಚಿಕ್ಕಬಳ್ಳಾಪುರ (ಡಾ.ಎಚ್.ನರಸಿಂಹಯ್ಯ ವೇದಿಕೆ): ಅಕ್ಷರ ಜಾತ್ರೆಯಲ್ಲಿ ಊಟಕ್ಕಾಗಿ ಪರದಾಟ..ಸಾಹಿತ್ಯ ಸಮ್ಮೇಳನದ ಕಡೆಗೆ ಮುಖ ಮಾಡದ ಜಿಲ್ಲೆಯ ಶಾಸಕರು. ಪುಸ್ತಕ ಪ್ರೇಮಿಗಳ ಕೊರತೆಯಿಂದ ಬಣಗುಡುತ್ತಿದ್ದ ಮಾರಾಟ ಮಳಿಗೆಗಳು, ಬರೀ ಉದ್ಘಾಟನೆಗೆ ಸೀಮಿತವಾದ ನುಡಿ ಜಾತ್ರೆ, ವಿಚಾರಗೋಷ್ಠಿಗಳಿಗೆ ಪ್ರೇಕ್ಷಕರ ಬರ..! ಜಿಲ್ಲೆಯ ಗೌರಿಬಿದನೂರು ತಾಲೂಕು ಕೇಂದ್ರದಲ್ಲಿ ಶನಿವಾರದಿಂದ ಆರಂಭಗೊಂಡ ಎರಡು ದಿನಗಳ ಆರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ದಿನ ಕಂಡು ಬಂದ ದೃಶ್ಯಗಳಿವು.
ಊಟದ ಕೊರತೆ: ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಗಣ್ಯರು, ಸಾಹಿತಿಗಳು ಹಾಗೂ ಸಾರ್ವಜನಿಕರಿಗೆ ಊಟದ ಕೊರತೆ ಉಂಟಾಗಿ ಸಮ್ಮೇಳನದ ಅವ್ಯವಸ್ಥೆಯನ್ನು ಬಿಂಬಿಸುವಂತಿತ್ತು. ನೂರಾರು ಮಂದಿ ಊಟಕ್ಕೆ ಕೂತು ಊಟ ಸಿದ್ಧವಾಗಿಲ್ಲ ಎಂಬ ಮಾಹಿತಿ ಅರಿತು ಹೊರ ನಡೆದರು. ಸಮ್ಮೇಳನಕ್ಕೆ ಆಗಮಿಸಿದ್ದ ಸಾಹಿತಿಗಳಿಗೆ ಅಕ್ಷರ ಜಾತ್ರೆಯಲ್ಲಿ ಊಟ ಸಿಗದೇ ಖಾಸಗಿ ಹೋಟೆಲ್‌ಗಳನ್ನು ಆಶ್ರಯಿಸಬೇಕಾಯಿತು.
ಶಾಸಕರ ಗೈರು: ಜಿಲ್ಲಾ ಮಟ್ಟದಲ್ಲಿ ನಡೆದ ಅಕ್ಷರ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿದ್ದ ಜಿಲ್ಲೆಯ ಬಹುತೇಕ ಶಾಸಕರು ಸಮ್ಮೇಳನದತ್ತ ಮುಖ ಮಾಡಲಿಲ್ಲ. ತೂಪಲ್ಲಿ ಆರ್.ಚೌಡರೆಡ್ಡಿ ಹಾಗೂ ಗೌರಿಬಿದನೂರು ಶಾಸಕರು ಬಿಟ್ಟರೆ ಉಳಿದ ಜಿಲ್ಲೆಯ ಯಾವೊಬ್ಬ ಶಾಸಕರು ಸಾಹಿತ್ಯ ಸಮ್ಮೇಳನದ ಕಡೆಗೆ ಹೆಜ್ಜೆ ಹಾಕಲಿಲ್ಲ. ಸಮ್ಮೇಳನಕ್ಕೆ ಆಹ್ವಾನಿತರಾಗಿದ್ದ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಕೂಡ ಬಂದಿರಲಿಲ್ಲ.
ಬಿಕೋ ಎಂದ ಪುಸ್ತಕ ಮಳಿಗೆಗಳು: ಎರಡು ದಿನಗಳ ನುಡಿ ಜಾತ್ರೆಯ ಪ್ರಯುಕ್ತ ಡಾ.ಎಚ್.ನರಸಿಂಹಯ್ಯ ಕಲಾ ಭವನದ ಹೊರ ಭಾಗದಲ್ಲಿ ತೆರೆದಿದ್ದ ಪುಸ್ತಕ ಮಾರಾಟ ಮಳಿಗೆಗಳು ಪುಸ್ತಕ ಪ್ರೇಮಿಗಳ ಕೊರತೆಯಿಂದ ಬಿಕೋ ಎನ್ನುತ್ತಿದ್ದವು. ದೂರದ ಬೆಂಗಳೂರು, ಕೋಲಾರ, ತುಮಕೂರು ಮತ್ತಿತರ ಜಿಲ್ಲೆಗಳಿಂದ ಪುಸ್ತಕ ಮಾರಾಟದ ಪ್ರಕಾಶಕರು ಆಗಮಿಸಿದ್ದರು. ಆದರೆ ಪುಸ್ತಕ ಮಾರಾಟದ ಕಡೆಗೆ ಯಾರೊಬ್ಬರು ಹೆಜ್ಜೆ ಹಾಕಲಿಲ್ಲ.
ಕಸಾಪ ಭಿನ್ನಮತ ಸ್ಫೋಟ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ಪದಾಧಿಕಾರಿಗಳ ಭಿನ್ನಮತ ಸ್ಫೋಟಗೊಂಡಿತು. ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆದರೂ ಜಿಲ್ಲೆಯ ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕುಗಳ ಯಾವೊಬ್ಬ ಕಸಾಪ ಪದಾಧಿಕಾರಿಗಳ ಸುಳಿವೇ ಇರಲಿಲ್ಲ. ಜಿಲ್ಲಾ ಕಸಾಪ ಅಧ್ಯಕ್ಷರ ಕಾರ್ಯವೈಖರಿಯಿಂದ ಬೆಸತ್ತು ಜಿಲ್ಲೆಯ ಬಹಳಷ್ಟು ಮಂದಿ ಪದಾಧಿಕಾರಿಗಳು ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು.