Advertisement

ಕನ್ನಡ ಸಂಘ ಮುಂಬಯಿ  ಮಹಿಳಾ ವಿಭಾಗದ ವಾರ್ಷಿಕ ಸ್ನೇಹ ಸಮ್ಮಿಲನ

12:30 AM Mar 07, 2019 | Team Udayavani |

ಮುಂಬಯಿ: ಕನ್ನಡ ಸಂಘ ಮುಂಬಯಿ  ಇದರ ಮಹಿಳಾ ವಿಭಾಗದ ವಾರ್ಷಿಕ  ಸ್ನೇಹ ಸಮ್ಮಿಲನ ಸಮಾರಂಭವು ಮಾಟುಂಗ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‌ನ ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮಗಳೊಂದಿಗೆ ಮಾ. 3ರಂದು ನಡೆಯಿತು.

Advertisement

ಕನ್ನಡ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಡಾ| ಎಸ್‌. ಕೆ. ಭವಾನಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂಘಟಕಿ, ಸಮಾಜ ಸೇವಕಿ ಸವಿತಾ ನಾಯಕ್‌ ವಾಶಿ, ಗೌರವ ಅತಿಥಿಗಳಾಗಿ ಸಂಘದ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಕಮಲಾಕ್ಷ ಸರಾಫ್‌ ಉಪಸ್ಥಿತರಿದ್ದರು.

ಮುಖ್ಯ ಅತಿಥಿ ಸವಿತಾ ನಾಯಕ್‌ ಮಾತನಾಡಿ, ಸಂಘದ ಬೆಳವಣಿಗೆಗೆ ಒಗ್ಗಟ್ಟು ಅಗತ್ಯ, ತಮ್ಮ ತಮ್ಮ ಸಮಯವನ್ನು ನೀಡಿ ಸಂಘವನ್ನು ಬೆಳೆಸಬೇಕು. ಮಹಿಳೆಯರು ಸುಶಿಕ್ಷಿತರಾದರೆ ಸಮಾಜದೊಂದಿಗೆ ವಿಶ್ವವೇ

ಸುರಕ್ಷಿತವಾಗಿರುತ್ತದೆ. ಆದ್ದರಿಂದ ಮಹಿಳೆಯರು ಮನೆಮಂದಿ ಜತೆಗೆ ಸಮಾಜದ ಸ್ವಾಸ್ಥ್ಯದ ಕಡೆಗೂ ಗಮನ ಹರಿಸಬೇಕು. ತಾವು ಅಬಲೆಯರು ಎಂದೆಣಿಸದೆ ಸಾಧನೆಯ ಮೂಲಕ ಸಬಲೆ ಯರಾಗಬೇಕು ಎಂದು ಹಿತವಚನ ನುಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ| ಎಸ್‌. ಕೆ. ಭವಾನಿ ಅವರು, ಕನ್ನಡ ಸಂಘದ ಇತಿಹಾಸವನ್ನು ಮತ್ತು ಇಂದಿನ ದೃಷ್ಟಾಂತವನ್ನು ವಿವರಿಸಿ ಸಮಾಜವನ್ನು ಅರಿಯುವ ಅಗತ್ಯ ಸ್ತ್ರೀಯರಿಗಿದೆ. ಮಹಿಳೆ  ತನ್ನನ್ನು ತಾನು ಗುರುತಿಸಿಕೊಂಡಾಗಲೇ ತನ್ನ ಸ್ಥಾನಮಾನವನ್ನು ಪಡೆಯಲು ಸಾಧ್ಯವಾಗುವುದು. ಸದ್ಯ ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ  ಪ್ರಧಾನರಾಗಿ ಮುನ್ನಡೆಯುತ್ತಿದ್ದು  ಅದನ್ನು ಉಳಿಸಿ ಬೆಳೆಸಲು ಮಹಿಳಾ ಶ‌ಕ್ತಿಯು ಮುಂದೆಯೂ ಶ್ರಮಿಸಬೇಕು ಎಂದರು.

Advertisement

ಮತ್ತೋರ್ವ ಅತಿಥಿ ಕಮಲಾಕ್ಷ ಸರಾಫ್‌ ಮಾತನಾಡಿ, ಸಂಘದ ನೂತನ ಕಟ್ಟಡದ ಯೋಜನೆ ಶೀಘ್ರವೇ ಸಿದ್ಧಿಗೊಳ್ಳುವಂತೆ ಎಲ್ಲರೂ ಶ್ರಮಿಸೋಣ. ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.

ಮಹಿಳಾ ವಿಭಾಗಧ್ಯಕ್ಷೆ ರಜನಿ ವಿ. ಪೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ,  ಸದ್ಯ ಸ್ತ್ರೀಯರ ಭಾವನೆ ಮನಸ್ಸುಗಳನ್ನು ಅರ್ಥೈಯಿಸಿಕೊಳ್ಳುವ ಜವಾಬ್ದಾರಿಯನ್ನು  ಪುರುಷರು ಮಾಡುತ್ತಿದ್ದು ಇದನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರವೂ ಮಹತ್ತರದ್ದಾಗಿದೆ. ಇಂತಹ ಸ್ನೇಹ ಮಿಲನಗಳಿಂದ ಮಹಿಳೆ-ಪುರುಷರಲ್ಲಿನ ಸಮಾನತೆಯಿಂದ ಮಹಿಳಾ ಪ್ರಧಾನ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸಂಘದ ಪದಾಧಿಕಾರಿಗಳಾದ ಸತೀಶ್‌ ಎನ್‌. ಬಂಗೇರ, ಸೋಮನಾಥ್‌ ಕರ್ಕೇರ, ಸುಧಾಕರ್‌ ಸಿ. ಪೂಜಾರಿ, ವಾಚನಾಲಯ ವಿಭಾಗದ ಮುಖ್ಯಸ್ಥ ಎಸ್‌. ಕೆ. ಪದ್ಮನಾಭ, ಸಂಘದ ಕಾರ್ಯಕಾರಿ ಸಮಿತಿಯ ನಾರಾಯಣ್‌ ರಾವ್‌, ಸಂಧ್ಯಾ ಪ್ರಭು, ಮಾಲತಿ ಆಚಾರ್ಯ ಸೇರಿದಂತೆ ಸದಸ್ಯರು, ಕನ್ನಡಾಭಿಮಾನಿಗಳು, ದಾನಿಗಳು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೂಪುರ ಅಕಾಡೆಮಿಯ ಕಲಾವಿದರು, ಸಂಧ್ಯಾ ಅಜಿತ್‌ ಕಾಮತ್‌ ಮತ್ತು ತಂಡದವರಿಂದ ನೃತ್ಯ ಸಂಭ್ರಮ, ಸುಧಾ ಸಂಗೀತ ಸಂಸ್ಥೆಯ ಸಂಚಾಲಕಿ ಶ್ಯಾಮಲಾ ರಾಧೇಶ್‌ ತಂಡದಿಂದ ಗಾಯನ ಹಾಗೂ ಕವಯತ್ರಿ ಲಲಿತಾ ಅಂಗಡಿ ಅಂಗಡಿ ಇವರಿಂದ ಹಾಸ್ಯ ಕವಿಗೋಷ್ಠಿ ನಡೆಯಿತು.  ಪ್ರಫುಲ್ಲಾ ರಾವ್‌ ಅತಿಥಿಗಳನ್ನು  ಪರಿಚಯಿಸಿದರು. ಉಪ ಕಾರ್ಯಾಧ್ಯಕ್ಷೆ ನರ್ಮದಾ ಕಿಣಿ ಕಾರ್ಯಕ್ರಮ ನಿರೂಪಿಸಿದ‌ರು. ಕಾರ್ಯಕಾರಿ ಸಮಿತಿಯ ಸದಸ್ಯೆ ಸುಧಾ ಜಿ. ಪೈ ವಂದಿಸಿದರು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

 ಚಿತ್ರ-ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next