Advertisement

ನುಡಿ ಜಾತ್ರೆಗೆ ಸಂಭ್ರಮದ ತೆರೆ; ಸಣ್ಣ ಅಹಿತಕರ ಘಟನೆಗೂ ಅವಕಾಶ ನೀಡದಂತೆ ಅಚ್ಚುಕಟ್ಟು

11:42 PM Jan 08, 2023 | Team Udayavani |

ಹಾವೇರಿ: ಕಳೆದ ಮೂರು ದಿನಗಳಿಂದ ಕಳೆಕಟ್ಟಿದ್ದ ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರವಿವಾರ ರಾತ್ರಿ ಸಂಭ್ರಮದ ತೆರೆ ಬಿದ್ದಿದೆ.

Advertisement

ಯಾವುದೇ ಸೌಲಭ್ಯಗಳೇ ಇಲ್ಲದ ಹಾವೇರಿಯಲ್ಲಿ ಸಮ್ಮೇಳನ ನಡೆಸುವುದು ಕಷ್ಟ ಎಂದು ಹೀಯಾಳಿಸಿದವರಿಗೆ ತಿರುಗೇಟು ಕೊಟ್ಟ ಹಾವೇರಿ ಜಿಲ್ಲೆಯ ಜನ, ಒಂದೇ ಒಂದು ಸಣ್ಣ ಅವಘಡ, ಅಪಸ್ವರಕ್ಕೂ ಆಸ್ಪದ ನೀಡದಂತೆ ಸಮ್ಮೇಳನ ಮಾಡಿ ತೋರಿಸಿ ಸೈ ಎನಿಸಿಕೊಂಡರು.

ಮೊದಲ ದಿನ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಖುದ್ದು ಉದ್ಘಾಟನೆ ಮಾಡಿ ಜಿಲ್ಲೆಯ ಜನರಿಗೆ ಮತ್ತಷ್ಟು ಹುರುಪು ತುಂಬಿ ಹೋದರೆ, ಎರಡು ಮತ್ತು ಮೂರನೇ ದಿನ ಹಾವೇರಿ ಮಾತ್ರವಲ್ಲ, ಸುತ್ತಲಿನ ಜಿಲ್ಲೆಗಳಿಂದಲೂ ಜನ ಕಿಕ್ಕಿರಿದು ತುಂಬಿ ಕನ್ನಡ ನುಡಿ ತೇರು ಎಳೆದು ಸಂಭ್ರಮಿಸಿದರು.

ಸಾಮಾನ್ಯವಾಗಿ ಗೋಷ್ಠಿಗಳಲ್ಲಿ ನಡೆಯುವ ಚಿಂತನ- ಮಂಥನಕ್ಕೆ ಜನರ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಹಾವೇರಿ ಸಮ್ಮೇಳನದಲ್ಲಿ ಪ್ರಧಾನ ಮತ್ತು ಸಮಾನಾಂತರ ಮೂರೂ ವೇದಿಕೆಗಳಲ್ಲಿ ಜನ ಕಿಕ್ಕಿರಿದು ತುಂಬಿ ಕನ್ನಡ ನಾಡು, ನುಡಿ, ನೆಲ, ಜಲ, ಕೃಷಿ ಗೋಷ್ಠಿಗಳ ಚಿಂತನೆಗಳನ್ನು ಕುಳಿತು ಆಲಿಸಿದರು.

ಗಣ್ಯರಿಗೆ ಕೆಲವು ಕಡೆಗಳಲ್ಲಿ ಅವಮಾನಕರ ಪ್ರಸಂಗಗಳು ನಡೆದಿದ್ದು ಸತ್ಯ. ಪಾಸ್‌ ಹಂಚಿಕೆ ವಿಚಾರದಲ್ಲಿ ಕಸಾಪ ನಡೆದುಕೊಂಡ ರೀತಿ, ಮೂಲ ಸೌಕರ್ಯಗಳನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಲು ಸಾಧ್ಯವಿದ್ದರೂ ನಿರ್ಲಕ್ಷÂ ತೋರಿದ್ದನ್ನು ಹೊರತುಪಡೆಸಿದರೆ ಹೆಚ್ಚು ಕಡಿಮೆ ಸಮ್ಮೇಳನ ಯಶಸ್ವಿಯಾಗಿದ್ದು ಕೂಡ ಸತ್ಯ.

Advertisement

ಮೂರನೇ ದಿನವೂ ಜನಸ್ತೋಮ: ಮಡಿಲಿನಿಂದ ತಪ್ಪಿಸಿಕೊಂಡ ಮಕ್ಕಳಿಗಾಗಿ ಹೆತ್ತವರ ಪರದಾಟ, ಬಿಸಿಲಿನಿಂದ ಬಳಲಿ ನೆರಳಿಗಾಗಿ ಹಲವರ ಹುಡುಕಾಟ. ಮತ್ತೂಂದೆಡೆ ಶಾಲಾ-ಕಾಲೇಜು ವಿದ್ಯಾರ್ಥಿಗಳ ಕಿರುಚಾಟ, ಅಲ್ಲಲ್ಲಿ ಕನ್ನಡಾಂಬೆಯ ಶ್ಯಾಲು ಹೆಗಲಿಗೆ ಹಾಕಿಕೊಂಡು ಕಾಲೇಜು ವಿದ್ಯಾರ್ಥಿಗಳ ಓಡಾಟ. ಇವೆಲ್ಲದರ ನಡುವೆ ಭೂರಿ ಭೋಜನ ಸವಿದು ಜನರು ಮಧ್ಯಾಹ್ನವೇ ಊರಿನತ್ತ ಮುಖ ಮಾಡಿದ್ದರು. ಇದು ಅಕ್ಷರ ಜಾತ್ರೆ ಕೊನೆಯ ದಿನದ ದೃಶ್ಯಗಳು.

ಸಾಹಿತ್ಯ ಸಮ್ಮೇಳನಕ್ಕೆ ಕೊನೆಯ ದಿನವಾದ ರವಿವಾರ ಅ ಧಿಕ ಸಂಖ್ಯೆಯಲ್ಲಿ ಜನ ಹರಿದು ಬಂದಿತ್ತು. ಹೀಗಾಗಿ, ಎಲ್ಲೆಲ್ಲೂ ಜನಸಂದಣಿ ಕಾಣುತ್ತಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದ ಹಿನ್ನೆಲೆಯಲ್ಲಿ ಹೆತ್ತವರು ತಪ್ಪಿಸಿಕೊಂಡ ಮಕ್ಕಳಿಗಾಗಿ ಪರದಾಟ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next