ಕನಕ-ಶರೀಫ-ಸರ್ವಜ್ಞರ ಪ್ರಧಾನ ವೇದಿಕೆ (ಹಾವೇರಿ): ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮಕ್ಕೆ ಸಮಯಾ ವಕಾಶ ನಿಗದಿಪಡಿಸಿದ ಹಿನ್ನೆಲೆಯಲ್ಲಿ ಸಂಗೀತ ಕಲಾವಿದರು, ಗಾಯಕರು ತಮಗೆ ನೀಡಿದ ವೇಳೆಗೆ ಸರಿಯಾಗಿ ಕಾರ್ಯಕ್ರಮ ಮುಗಿಸದ ಹಿನ್ನೆಲೆಯಲ್ಲಿ ಪರಿಷತ್ತಿನ ಅಧಿಕಾರಿಗಳು ಬೆಳ್ಳಂ ಬೆಳ್ಳಗೆ ಪಜೀತಿಗೆ ಒಳಗಾದರು.
ಮೈಕ್ ಹಿಡಿದು ಪರಿಪರಿಯಾಗಿ ದಯ ವಿಟ್ಟು ಕಾಲಮಿತಿಯೊಳಗೆ ನಿಮ್ಮ ಅವಧಿ ಮುಗಿಸುವಂತೆ ಮನವಿ ಮಾಡಿದರು. ಆದರೂ ಯಾವುದೇ ಪ್ರಯೋಜನ ಆಗಲಿಲ್ಲ. ಕೆಲವು ಸಂಗೀತ ಕಲಾವಿದರೂ ವೇಳೆ ಮುಗಿ ದರೂ ಕಾರ್ಯಕ್ರಮ ಮುಂದುವರಿಸಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಅಧಿಕಾರಿಗಳು ಕಲಾವಿದರ ಬಳಿ ಬಂದು ಹಾಡು ನಿಲ್ಲಿಸಿ, ಸಾಕು ಸಾಕು, ನಿಮ್ಮ ಕಾಲಾವಕಾಶ ಮುಗಿಯಿತು ಎಂದು ಪರಿ ಪರಿಯಾಗಿ ಅಳಲು ತೋಡಿಕೊಂಡರು. ನಮ್ಮ ನಿಯಮ ಪಾಲಿಸಿರಿ ಎಂದು ಮನವಿ ಮಾಡಿದರು.
ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಉತ್ತರ ಕರ್ನಾಟಕದ ಹಲವು ಕಲಾವಿದರು ಜಾನಪದ ಗೀತೆ, ಭಾವಗೀತೆ, ಗೀಗಿ ಪದ ಸಹಿತ ಹಲವು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಹಿಂದೆ ಪರಿಷತ್ತು ಕಲಾವಿದರುಗಳಿಗೆ 10 ನಿಮಿಷದ ಅವಕಾಶ ನೀಡಲಾಗಿತ್ತು. ಆದರೆ ವೇದಿಕೆಯ ಮೇಲೆ ಸಭಾಂಗಣದ ಜನರನ್ನು ನೋಡುತ್ತಿದ್ದ ಗಾಯಕ, ಗಾಯಕಿಯರು ಒಂದು ಹಾಡು-ಹಾಡುವ ಬದಲು ಎರಡೆರಡು ಹಾಡು ಹಾಡಿದರು. ಕೆಲವರು ಮೈಕ್ ಬಂದ್ ಮಾಡಿದರು ಕೂಡ ಹಾಡು ಮುಂದುವರಿಸಿ ದರು. ಹೀಗಾಗಿ 10 ನಿಮಿಷದ ಅವಧಿಯನ್ನು 8 ನಿಮಿಷಕ್ಕೆ ಇಳಿಕೆ ಮಾಡಿದರು. ಆದರೂ ಎಲ್ಲ ಕಲಾವಿದರಿಗೂ ವೇದಿಕೆಯಲ್ಲಿ ಹಾಡಲು ಅವಕಾಶ ನೀಡುವ ಹಿನ್ನೆಲೆಯಲ್ಲಿ 8 ನಿಮಿಷದ ಕಾಲವಕಾಶ 5 ನಿಮಿಷಕ್ಕೆ ಇಳಿಕೆ ಮಾಡಿದರು.
ಕಲಾವಿದರಿಗೆ ಸೆಲ್ಫಿ ಹುಚ್ಚು: ಗಾಯನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವೇದಿಕೆ ಯಲ್ಲಿ ಗಾಯಕರು ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದರು. ಹೀಗಾಗಿ ವೇದಿಕೆಯಲ್ಲಿ ಕಲಾವಿದರನ್ನು ಕೆಳಗಿಳಿಸಲು ಪರಿಷತ್ತಿನ ಸಿಬಂದಿ ಹರಸಾಹಸ ಪಟ್ಟರು. ಇತರ ಕಲಾವಿದರಿಗೆ ವೇದಿಕೆಯಲ್ಲಿ ಹಾಡಲು ಕಾಲಾವಕಾಶ ನೀಡಿ ಎಂದು ಹೇಳಿದರೂ ಯಾವುದೇ ಪ್ರಯೋಜನ ಆಗಲಿಲ್ಲ.