Advertisement

ಕನ್ನಡ ಭಾಷೆಯನ್ನು ಜಾಗತಿಕ ಮಟ್ಟಕ್ಕೆ ಒಯ್ಯಿರಿ: ಡಾ|ಮೋಹನ ಆಳ್ವ

10:32 PM Feb 23, 2021 | Team Udayavani |

ವೇಣೂರು: 2,000 ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಪಂಚದ್ರಾವಿಡ ಭಾಷೆಗಳಲ್ಲಿ ಒಂದು. ಪೂರ್ವಕನ್ನಡ, ಹಳೆಗ‌ನ್ನಡ, ನಡುಗನ್ನಡ ಹಾಗೂ ಹೊಸಗನ್ನಡದ ಮೂಲಕ ಹಂತ ಹಂತವಾಗಿ ಕನ್ನಡ ಭಾಷೆಗೆ ಸ್ಥಾನಮಾನವನ್ನು ಹಿರಿಯರು ತಂದು ಕೊಟ್ಟಿದ್ದಾರೆ. ಸಾಹಿತ್ಯ ಸಮ್ಮೇಳನದಂಥ ಹಬ್ಬಗಳ ಮೂಲಕ ಕನ್ನಡ ಭಾಷೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದು ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.

Advertisement

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪೆರಿಂಜೆ ಪಡ್ಡಾರಬೆಟ್ಟದ ಸಂತೃಪ್ತಿ ಸಭಾಭವನದಲ್ಲಿ ಮಂಗಳವಾರ ಜರಗಿದ ಬೆಳ್ತಂಗಡಿ ತಾಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಮಾಧ್ಯಮ ಹೆಚ್ಚಾಗಲಿ
ಆಂಗ್ಲ ಮಾಧ್ಯಮ, ಸಿಬಿಎಸ್‌ಸಿಇಯಂತೆ ಕನ್ನಡ ಮಾಧ್ಯಮಕ್ಕೆ ಸ್ಥಾನಮಾನ ಸಿಗಬೇಕಿದೆ. ಅಭಿವೃದ್ಧಿ ಜತೆ ಒಂದೊಂದು ಕನ್ನಡ ಮಾಧ್ಯಮ ಶಾಲೆ ಕಟ್ಟಬೇಕಿದೆ. ಕನ್ನಡ ಮಾಧ್ಯಮ ಶಾಲೆ ಸೊರಗಿದರೆ ಇದನ್ನೆ ನಂಬಿಕೊಂಡಿರುವ ಸಾಂಸ್ಕೃತಿಕ ಚಟುವಟಿಕೆ ಹಾಗೂ ಗ್ರಾಮೀಣ ಬದುಕಿನ ಸೋಲಾಗಲಿದೆ ಎಂದರು.

ಸಮ್ಮೇಳನದ ಅಧ್ಯಕ್ಷ ಜಿ. ರಾಮನಾಥ ಭಟ್‌ ಅವರು ಮಾತನಾಡಿದ ವೀಡಿಯೋ ತುಣುಕಿನ ಪ್ರದರ್ಶನ ಮಾಡಲಾಯಿತು.

ತುಳುವ ಸಂಸ್ಕೃತಿಯಲ್ಲಿ ಬದುಕೋಣ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ಅವರು ಮಾತನಾಡಿ, ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ನಡೆ ಯಾವತ್ತೂ ದಾರಿ ತಪ್ಪಿದ್ದೇ ಇಲ್ಲ. ಇದಕ್ಕೆ ಡಾ| ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರ ಆಶೀರ್ವಾದದ ಮಾರ್ಗದರ್ಶನವಿದೆ. ಗಟ್ಟಿ ಕನ್ನಡಿಗರಾಗಿ ತುಳುವ ಸಂಸ್ಕೃತಿಯಲ್ಲಿ ಬದುಕೋಣ ಎಂದು ಆಶಿಸಿದರು.

Advertisement

ಬೆಳ್ತಂಗಡಿ ತಾಲೂಕು ಪಂಚಾಯತ್‌ ಅಧ್ಯಕ್ಷೆ ದಿವ್ಯ ಜ್ಯೋತಿ ಚಾರುಮುಡಿ ಸಂಚಿಕೆ ಬಿಡುಗಡೆಗೊಳಿಸಿದರು.
ಸಮ್ಮೇಳನದ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದ ಸಂಯೋಜನ ಸಮಿತಿ ಗೌರವಾಧ್ಯಕ್ಷ ಎ. ಜೀವಂಧರ ಕುಮಾರ್‌ ಅವರನ್ನು ಗೌರವಿಸಲಾಯಿತು.

ಯಕ್ಷಗಾನ ರಾಜ್ಯದ ಕಲೆಯಾಗಲಿ
ನೆರೆಯ ಕೇರಳದಲ್ಲಿ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ ಅನ್ನು ರಾಜ್ಯದ ಕಲೆ ಎಂದು ಘೋಷಿಸಿದಂತೆ ಕರ್ನಾಟಕದಲ್ಲಿ ಯಕ್ಷಗಾನವನ್ನು ರಾಜ್ಯದ ಕಲೆ ಎಂದು ಘೋಷಿಸಲಿ.
-ಡಾ| ಎಂ. ಮೋಹನ ಆಳ್ವ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ

ಕನ್ನಡದ ಶಬ್ದ ಸಂಪತ್ತು ಸಶಕ್ತವಾಗಿ ಬೆಳೆಯಲಿ
ಕನ್ನಡವು ತನ್ನಲ್ಲಿ ಅಂತರ್ಗತವಾದ ಉಜ್ವಲ ಸತ್ವದಿಂದಲೇ ಉಳಿಯಬೇಕಾದ ಕಾಲ ಈಗ ಬಂದೊದಗಿದೆ. ಇಂಥ ಪರಿಸ್ಥಿತಿಯಲ್ಲಿ ಇಂದು ವಿವಿಧ ಕ್ಷೇತ್ರಗಳಲ್ಲಿ ವಿಶಾಲವಾಗಿ ಬೆಳೆಯುತ್ತಿರುವ ಜ್ಞಾನ ಸಂಪತ್ತು ಕನ್ನಡದಲ್ಲೂ ಸಿಗುವಂತಾಗಿ ಕನ್ನಡದ ಶಬ್ದಸಂಪತ್ತು ಸಶಕ್ತವಾಗಿ ಬೆಳೆದು ವಿಶ್ವದ ಪ್ರಮುಖ ಭಾಷೆಗಳೊಡನೆ ಸರಿಸಾಟಿಯಾಗಿ ಸ್ಪರ್ಧಿಸುವಂತಾಗಬೇಕು. ಇದಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಪೂರಕವಾಗಲಿ ಎಂದು ಸಮ್ಮೇಳನಾಧ್ಯಕ್ಷ ಜಿ. ರಾಮನಾಥ ಭಟ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next