ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನ.24ರಿಂದ ಮೂರು ದಿನಗಳ ಕಾಲ ನಡೆಯುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರು ನಗರದ ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ ಎಂದು ಸಮ್ಮೇಳನದ ಪ್ರಧಾನ ಸಂಚಾಲಕರಾದ ಜಿಲ್ಲಾಧಿಕಾರಿ ರಂದೀಪ್ ಡಿ. ತಿಳಿಸಿದ್ದಾರೆ.
ಕೃಷ್ಣರಾಜ ಒಡೆಯರ್ ವೃತ್ತ, ಜಯ ಚಾಮರಾಜ ಒಡೆಯರ್ ವೃತ್ತ, ಚಾಮರಾಜೇಂದ್ರ ಒಡೆಯರ್ ವೃತ್ತ, ರಾಮಸ್ವಾಮಿ ವೃತ್ತ, ಏಕಲವ್ಯ ವೃತ್ತ(ಮಹಾರಾಜ ಕಾಲೇಜು ಮೈದಾನದ ಸಮೀಪ) ಮುಂತಾದ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ, ವಿವಿಧ ರಸ್ತೆಗಳು ಸಹ ವಿದ್ಯುತ್ ದೀಪಾಲಂಕಾರಗೊಳ್ಳಲಿವೆ. ಜಿಲ್ಲಾ ಪಂಚಾಯತ್ ಕಚೇರಿಯಿಂದ ಹುಣಸೂರು ರಸ್ತೆ ವರೆಗೆ, ಜೆಎಲ್‌ಬಿ ರಸ್ತೆಯಲ್ಲಿ ರೈಲ್ವೇ ನಿಲ್ದಾಣದಿಂದ ರಾಮಸ್ವಾಮಿ ವೃತ್ತದ ವರೆಗೆ, ರಾಮಸ್ವಾಮಿ ವೃತ್ತದಿಂದ ಸಂಸ್ಕೃತ ಪಾಠಶಾಲಾ ವೃತ್ತದ ಮೂಲಕ ಹಾರ್ಡಿಂಜ್ ವೃತ್ತ, ಗ್ರಾಮಾಂತರ ಬಸ್ ನಿಲ್ದಾಣದ ವರೆಗೂ ರಸ್ತೆಗೆ ದೀಪಾಲಂಕಾರ ಮಾಡಲಾಗುತ್ತಿದೆ.
ವಿದ್ಯುತ್ ದೀಪಾಲಂಕಾರಕ್ಕೆ ಕನ್ನಡದ ಬಾವುಟ ಹೋಲುವಂತೆ ಕೆಂಪು ಮತ್ತು ಹಳದಿಯ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಬುಧವಾರ ಪ್ರಾಯೋಗಿಕವಾಗಿ ದೀಪಗಳನ್ನು ಬೆಳಗಲಾಗುತ್ತದೆ. ಗುರುವಾರದಿಂದ ನ. 27 ರವರೆಗೆ ನಿಯಮಿತವಾಗಿ ಸಂಜೆ ಅವಧಿಯಲ್ಲಿ ದೀಪಾಲಂಕಾರ ಇರುತ್ತದೆ ಎಂದು ದೀಪಾಲಂಕಾರ ಸಮಿತಿ ಕಾರ್ಯಾಧ್ಯಕ್ಷರಾದ ಸೆಸ್ಕ್ ಅಧೀಕ್ಷಕ ಇಂಜಿನಿಯರ್ ನರಸಿಂಹೇಗೌಡ ತಿಳಿಸಿದ್ದಾರೆ.
ದೀಪಾಲಂಕಾರದಿಂದ ಪ್ರಮುಖ ವೃತ್ತಿಗಳು ರಾತ್ರಿ ವೇಳೆ ಜಗಮಗಿಸುತ್ತಿದ್ದು ಸಾಂಸ್ಕೃತಿಕ ನಗರಿಯಲ್ಲಿ ಮತ್ತೆ ದಸರಾ ಕಳೆ ಮೈದುಂಬಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.