Advertisement
ಮುಖ್ಯವಾಗಿ ಸಮ್ಮೇಳನಗಳು ಗಡಿ ಭಾಗಗಳಲ್ಲಿ ನಡೆದರೆ ಹೆಚ್ಚು ಅನುಕೂಲ, ಆಗ ಕನ್ನಡಿಗರ ಮನಸ್ಸಿನ ಗಡಿಗಳೂ ವಿಸ್ತಾರವಾಗಬಹುದು. ಹೀಗೆಂದು ಗಂಗಾವತಿಯಲ್ಲಿ ನಡೆದ 77ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಪೊ›.ಸಿ.ಪಿ.ಕೃಷ್ಣಕುಮಾರ್ ಅವರು “ಉದಯವಾಣಿ’ಗೆ ಬಿಚ್ಚಿಟ್ಟ ಮನದ ಮಾತು.* ನಾಡು-ನುಡಿಯ ಬಗ್ಗೆ ಕನ್ನಡಿಗರಿಗೆ ಅಭಿಮಾನವಿಲ್ಲವೇ?
ನಮ್ಮ ಜನಗಳಿಗೆ ಮಾತೃಭಾಷೆ ಬಗ್ಗೆ ಅಭಿಮಾನ ಇದೆ. ಆದರೆ, ಬೇರೆ ರಾಜ್ಯಗಳ ಜನರಂತೆ ಇಲ್ಲ. ತಮಿಳುನಾಡನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಕಾವೇರಿ ನದಿ ನೀರು ವಿಷಯದಲ್ಲಿ ಎಲ್ಲರೂ ಒಂದಾಗುತ್ತಾರೆ. ನಮ್ಮಲ್ಲಿ ಆಗುವುದಿಲ್ಲ.
ಕೇಂದ್ರ ಸರ್ಕಾರ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಹೇರುತ್ತಿದೆ. ಇನ್ನು ತಮ್ಮ ಮಕ್ಕಳ ಕಲಿಕಾ ಮಾಧ್ಯಮ ಯಾವುದಿರಬೇಕೆಂಬುದು ಪೋಷಕರಿಗೆ ಬಿಟ್ಟದ್ದು ಎಂಬ ಸುಪ್ರೀಂಕೋರ್ಟ್ ತೀರ್ಪು ಸರಿಯಲ್ಲ. ಇದನ್ನು ಸರಿಪಡಿಸಬೇಕೆಂದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಆ ಕೆಲಸಕ್ಕೆ ಎಲ್ಲ ರಾಜ್ಯಗಳೂ ಒಟ್ಟಾಗಬೇಕು. ಇಂಗ್ಲೀಷ್ ಕಲಿತು ಶ್ರೀಮಂತರಾಗುತ್ತೇವೆ ಎಂಬ ಭ್ರಮೆ ಬಿಟ್ಟು, ಜ್ಞಾನ-ವಿಜ್ಞಾನಗಳ ಭಾಷೆಯಾಗಿ ಕನ್ನಡವನ್ನು ಬೆಳೆಸಬೇಕಿದೆ. * ಕನ್ನಡಕ್ಕೆ ನಿಜಕ್ಕೂ ಇರುವ ಸಮಸ್ಯೆಗಳೇನು?
ಯಾವುದೇ ಕ್ಷೇತ್ರದಲ್ಲೂ ಸಮಸ್ಯೆಗಳ ಬಗ್ಗೆ ತಾತ್ವಿಕ ನಿಲುವುಗಳಿಲ್ಲದಿರುವುದು ಸಮಸ್ಯೆ ಬಿಗಡಾಯಿಸಲು ಕಾರಣ. ರಾಜ್ಯಸರ್ಕಾರ ಸಣ್ಣಪುಟ್ಟ ಮೌಡ್ಯಗಳನ್ನು ಹೆಸರಿಸಿ, ಮೌಡ್ಯ ನಿಷೇಧ ಕಾಯ್ದೆ ತರಲು ಹೊರಟಿದೆ. ಇಂಗ್ಲಿಷ್ ನಿಂದಲೇ ಉದ್ಧಾರ ಸಾಧ್ಯ, ಇಂಗ್ಲೀಷ್ ಕಲಿತರಷ್ಟೇ ಬದುಕು ಎಂಬುದೂ ಮೌಡ್ಯ ಅಲ್ಲವೇ. ಮುಖ್ಯವಾಗಿ ಕರ್ನಾಟಕ ಸರ್ಕಾರಕ್ಕೆ ದೂರದೃಷ್ಟಿ ಇಲ್ಲ. ಕನ್ನಡ ಪ್ರಜ್ಞೆಯೂ ನಮ್ಮಲ್ಲಿ ಬೆಳೆದಿಲ್ಲ, ಇದು ಸಮಸ್ಯೆ.
Related Articles
ಶಾಸ್ತ್ರೀಯ ಸ್ಥಾನಮಾನದ ಉಪಯೋಗವೇ ಸರಿಯಾಗಿ ಆಗುತ್ತಿಲ್ಲ. ತಮಿಳುನಾಡು ಕೋಟಿ ಕೋಟಿ ಅನುದಾನ ಪಡೆದುಕೊಳ್ಳುತ್ತಿಲ್ಲ. ನಮ್ಮಲ್ಲಿ ಆ ಕೇಂದ್ರ ಮೈಸೂರಿನಲ್ಲಿರಬೇಕೇ? ಬೆಂಗಳೂರಿನಲ್ಲಿರಬೇಕೇ ಎಂಬುದೇ ವಿವಾದವಾಗಿ ಕುಳಿತಿದೆ. ಇನ್ನು ಪ್ರಯೋಜನ ಪಡೆದುಕೊಳ್ಳುವುದು ಎಲ್ಲಿಂದ ಬಂತು(ಮಾರ್ಮಿಕವಾಗಿ).
Advertisement
* ಸಮ್ಮೇಳನದ ನಿರ್ಣಯಗಳು ನಿಜಕ್ಕೂ ಅನುಷ್ಠಾನ ಆಗುತ್ತವೆಯೇ?ಸರ್ಕಾರಗಳಿಗೆ ಸರಿಯಾದ ಇಚ್ಛಾಸಕ್ತಿ ಇಲ್ಲದಿರುವುದೂ ನಿರ್ಣಯ ಅನುಷ್ಠಾನವಾಗದಿರಲು ಕಾರಣ. ಹೀಗಾಗಿಯೇ ಹಿಂದೊಮ್ಮೆ ಸಾಹಿತ್ಯ ಸಮ್ಮೇಳನದಲ್ಲಿ ಹಿಂದಿನ ಸಮ್ಮೇಳನದ ನಿರ್ಣಯಗಳು ಅನುಷ್ಠಾನವಾಗುವವರೆಗೆ ಹೊಸ ನಿರ್ಣಯ ಕೈಗೊಳ್ಳುವುದಿಲ್ಲ ಎಂಬ ನಿರ್ಣಯ ಕೈಗೊಂಡ ಉದಾಹರಣೆಯೂ ಇದೆ. ಗಂಗಾವತಿ ಸಮ್ಮೇಳನದ ನನ್ನ ಭಾಷಣದಲ್ಲಿ ಒಂದು ಮಗುವಿದ್ದರೂ ಕನ್ನಡ ಶಾಲೆ ಮುಚ್ಚಬಾರದು ಎಂದು ಆಗ್ರಹಿಸಿದ್ದೆ, ಕನ್ನಡ ಶಾಲೆ ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆಯನ್ನೂ ಕೊಟ್ಟಿದ್ದರು, ಆದರೆ, ರಾಜ್ಯದಲ್ಲಿ ಅಂತಹ ನೂರಾರು ಶಾಲೆಗಳನ್ನು ಮುಚ್ಚಲಾಗಿದೆ. * ಅನುದಾನದ ಮೂಲಕ ಪರಿಷತ್ತಿನ ಮೇಲೆ ಸರ್ಕಾರದ ಹಿಡಿತ ಹೆಚ್ಚಿದೆಯೇ?
ಇರಬಹುದು. ಸಮ್ಮೇಳನದಲ್ಲಿ ಯಾವ ಗೋಷ್ಠಿಗಳನ್ನು ಇಡಬೇಕು ಎಂಬುದನ್ನೂ ಸರ್ಕಾರ ನಿರ್ಧಾರ ಮಾಡುವಂತಾಗಿರುವುದು ಒಳ್ಳೆ ಬೆಳವಣಿಗೆಯಲ್ಲ. ಮಹಾರಾಷ್ಟ್ರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ ರಾಜಕಾರಣಿಗಳು ಇರುವುದಿಲ್ಲ. ಆದರೆ, ನಮ್ಮಲ್ಲಿ ಸಾಹಿತಿಗಳಿಗಿಂತ ರಾಜಕಾರಣಿಗಳೇ ತುಂಬಿರುತ್ತಾರೆ. * 83ನೇ ಸಾಹಿತ್ಯ ಸಮ್ಮೇಳನದ ಬೆನ್ನಲ್ಲೇ ವಿಶ್ವ ಕನ್ನಡ ಸಮ್ಮೇಳನ ಬರುತ್ತಿದೆ.
ಪ್ರತಿ ವರ್ಷ ಸಮ್ಮೇಳನ ನಡೆಸುವ ಬದಲು 3 ವರ್ಷಗಳಿಗೆ ಒಮ್ಮೆ ಸಮ್ಮೇಳನ ನಡೆಸಿದರೆ ತಪ್ಪೆ$àನು? ಇನ್ನು ನೂರಾರು ಕೋಟಿ ಖರ್ಚು ಮಾಡಿ ವಿಶ್ವ ಕನ್ನಡ ಸಮ್ಮೇಳನ ಮಾಡುವುದರಿಂದ ಆಗುವ ಪ್ರಯೋಜನವೇನು?. ಕುವೆಂಪು ಹೇಳುವಂತೆ ನಮ್ಮಲ್ಲಿನ್ನೂ ವಿಶ್ವಪ್ರಜ್ಞೆಯೇ ಮೂಡಿಲ್ಲ. ಇನ್ನು ವಿಶ್ವ ಕನ್ನಡ ಸಮ್ಮೇಳನ ಏಕೆ? ಸಮ್ಮೇಳನಗಳಿಂದ ಭಾವುಕತೆ ಬಿಟ್ಟರೆ, ಶಾಶ್ವತ ಕೆಲಸಗಳಾವುದೂ ಆಗುತ್ತಿಲ್ಲ. ಜತೆಗೆ ಸಮ್ಮೇಳನಗಳಲ್ಲಿ ಸಮಾನಾಂತರ ವೇದಿಕೆಗಳ ಅಗತ್ಯವಿಲ್ಲ. ಎಲ್ಲ ಗೋಷ್ಠಿಗಳೂ ಮುಖ್ಯವೇದಿಕೆಯಲ್ಲೇ ನಡೆಯುವಂತಾಗಬೇಕು. * ಗಿರೀಶ್ ಹುಣಸೂರು