ಒಂದು ಚಿತ್ರ ತಂಡ ಪತ್ರಿಕಾಗೋಷ್ಠಿ ಕರೆದರೆ, ಅಲ್ಲಿ ಮುಖ್ಯವಾಗಿ ಚಿತ್ರದ ಕುರಿತು ಒಂದಷ್ಟು ಮಾಹಿತಿ ಕೊಡಬೇಕು. ಚಿತ್ರ ಮಾಡುವುದಷ್ಟೇ ಅಲ್ಲ, ಆ ಚಿತ್ರದ ಪ್ರಚಾರ ಹೇಗೆ ಮಾಡಬೇಕೆಂಬ ಬಗ್ಗೆಯೂ ತಿಳಿದಿರಬೇಕು. ಪತ್ರಕರ್ತರನ್ನು ಆಹ್ವಾನಿಸಿ, ಚಿತ್ರದ ಬಗ್ಗೆ ಸರಿಯಾದ ಮಾಹಿತಿ ಕೊಡಲಿಲ್ಲವೆಂದರೆ, ಆ ಚಿತ್ರದ ಪ್ರಚಾರ ಆಗುವುದಾದರೂ ಹೇಗೆ? ಇಂಥದ್ದೊಂದು ಚಿತ್ರ ತೆರೆಗೆ ಬರುತ್ತಿದೆ ಅಂತ ಗೊತ್ತಾಗುವುದಾದರೂ ಹೇಗೆ? ವರ್ಷಕ್ಕೆ ಬರುವ ನೂರಾರು ಚಿತ್ರಗಳ ಪೈಕಿ ಬೆರಳೆಣಿಕೆ ಚಿತ್ರ ಹೊರತುಪಡಿಸಿದರೆ, ಬಹುತೇಕರು ಪತ್ರಿಕಾಗೋಷ್ಠಿಯಲ್ಲಿ ಸಮಯ ವ್ಯರ್ಥ ಮಾಡುತ್ತಾರೆಯೇ ಹೊರತು, ಸರಿಯಾಗಿ ಮಾಹಿತಿ ಕೊಡದೆ, ತಮ್ಮ ಚಿತ್ರದ ಭವಿಷ್ಯಕ್ಕೇ ಧಕ್ಕೆಯುಂಟು ಮಾಡುತ್ತಾರೆ.
ಇಷ್ಟಕ್ಕೂ ಇಲ್ಲೀಗ ಹೇಳಹೊರಟಿರುವ ವಿಷಯ “ಗಿರ್ ಗಿಟ್ಲೆ’ ಚಿತ್ರದ ಬಗ್ಗೆ. ಈ ಚಿತ್ರ ತಂಡ ಕೂಡ ಕಷ್ಟಪಟ್ಟು ಚಿತ್ರ ಮಾಡಿದೆ. ಸಾಕಷ್ಟು ಹಣ ಕೂಡ ಖರ್ಚು ಮಾಡಿದೆ. ಆದರೆ, “ಗಿರ್ ಗಿಟ್ಲೆ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಕೊಡುವ ಕಡೆ ಗಮನಹರಿಸದೆ, “ಕನ್ನಡ ರ್‍ಯಾಂಪರ್ ಹಂಟ್’ ಮಾಡಿದ ಬಗ್ಗೆ ಹೇಳಿಕೊಂಡಿದ್ದೇ ಹೆಚ್ಚು. “ಗಿರ್ ಗಿಟ್ಲೆ’ ಚಿತ್ರದ ಡೈಲಾಗ್‌ನೊಂದಿಗೆ ಕನ್ನಡ ರ್ಯಾಪ್ ಸಾಂಗ್ ಹಾಡಿಸಬೇಕೆಂಬ ಉದ್ದೇಶ ಚಿತ್ರತಂಡಕ್ಕಿದ್ದುದರಿಂದ,
ರಾಜ್ಯಾದ್ಯಂತ ನೂರಾರು ಪ್ರತಿಭೆಗಳನ್ನು ಹುಡುಕಾಡಿ, ಆ ಪೈಕಿ 8 ಮಂದಿ ಕನ್ನಡ ರ್‍ಯಾಂಪರ್ಗಳನ್ನು ಅಂತಿಮಗೊಳಿಸಿ, ಅವರನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೊಂದು ವೇದಿಕೆ ಕಲ್ಪಿಸಿಕೊಟ್ಟಿತು. ಇಲ್ಲಿ ಕನ್ನಡ ರ್‍ಯಾಂಪರ್ಗಳನ್ನು ಪ್ರೋತ್ಸಾಹಿಸಿದ್ದು ಒಳ್ಳೆಯ ಕೆಲಸವೇ.
ಆದರೆ, ಸಿನಿಮಾ ಕುರಿತು ಹೇಳುವುದಕ್ಕಿಂತ, ವೇದಿಕೆ ಮೇಲೆ ರ್‍ಯಾಂಪರ್ ಹಾಡುಗಳನ್ನು ಗುನುಗಿಸಿದ್ದೇ ಹೆಚ್ಚು. ಹಾಗಾಗಿ, ಚಿತ್ರದ ಬಗ್ಗೆ ನಿರ್ದೇಶಕರ ಆದಿಯಾಗಿ, ಯಾರೊಬ್ಬರೂ ಏನನ್ನೂ ಹೇಳದೆ ಥ್ಯಾಂಕ್ಸ್‌ಗಷ್ಟೇ ಸೀಮಿತವಾಗಿದ್ದು ಕೊಂಚ ಬೇಸರದ ಸಂಗತಿ. ಆದರೂ, ಪತ್ರಕರ್ತರ ಒತ್ತಾಯಕ್ಕೆ ಮಣಿದ ಚಿತ್ರತಂಡದ ಸದಸ್ಯರು, ರ್‍ಯಾಂಪರ್ ಹಾಡಿಗೆ ಬ್ರೇಕ್ ಕೊಟ್ಟು ಒಬ್ಬೊಬ್ಬರೇ ವೇದಿಕೆಗೆ ಬಂದು, “ಗಿರ್‌ಗಿಟ್ಲೆ’ ಬಗ್ಗೆ ಅನಿಸಿದ್ದನ್ನಷ್ಟೇ ಹೇಳಿ ಸುಮ್ಮನಾದರು. ನಿರ್ದೇಶಕ ರವಿಕಿರಣ್, “ಇದೊಂದು ಮಾಸ್ ಚಿತ್ರ. ಜೊತೆಗೆ ಮನರಂಜನೆಯೂ ಇದೆ. ಹೊಟ್ಟೆಗಾಗಿ ಯೂಥ್ ಏನೆಲ್ಲಾ ಮಾಡುತ್ತಾರೆ ಎಂಬುದು ಚಿತ್ರದ ಕಥೆ. ಇಲ್ಲಿ ರಂಗಾಯಣ ರಘು ವಿಶೇಷ ಪಾತ್ರ ಮಾಡಿದ್ದಾರೆ. ಉದಯ್ ಇಲ್ಲಿ ಕಾಣಿಸಿಕೊಂಡಿದ್ದು, ಅವರು ಡಬ್ಬಿಂಗ್ ಮಾಡಿದ ಕೊನೆಯ ಚಿತ್ರವಿದು. ಶ್ರೀನಗರ ಕಿಟ್ಟಿ ಅತಿಥಿಯಾಗಿದ್ದಾರೆ. ಬೆಂಗಳೂರು, ಮಂಡ್ಯ, ರಾಮನಗರದಲ್ಲಿ ಚಿತ್ರೀಕರಣವಾಗಿದೆ. ಮಾ.15 ರಂದು ರಿಲೀಸ್ ಆಗುತ್ತಿದೆ’ ಎಂದಷ್ಟೇ ಹೇಳಿ ಸುಮ್ಮನಾದರು. ಚಿತ್ರದ ನಾಯಕರಾದ ಪ್ರದೀಪ್‌ರಾಜ್, ಚಂದ್ರು, ಗುರು ಮತ್ತು ನಾಯಕಿ ವೈಷ್ಣವಿ ತಮ್ಮ ಪಾತ್ರದ ಬಗ್ಗೆ ಒಂದೇ ಮಾತಲ್ಲಿ ಹೇಳಿಕೊಂಡರು. ನಿರ್ಮಾಪಕರಾದ ಗಿರೀಶ್, ತಿಮ್ಮರಾಜು ಮತ್ತು ವೆಂಕಟೇಶ್ ಇವರೆಲ್ಲರೂ ಇದೊಂದು ಮಾಸ್ ಸಿನಿಮಾ ಅಂದರು. ಪುನಃ ಕನ್ನಡ ರ್‍ಯಾಂಪರ್ ಗಾಯನ ಮುಂದುವರೆಯಿತು.